Advertisement

ಉಡುಪಿ:ಮಳೆಗಾಲದಲ್ಲಿ ಮೆಸ್ಕಾಂ ಹೋರಾಟ! 

06:00 AM Jun 14, 2018 | |

ಉಡುಪಿ : ಈ ಬಾರಿ ಮಳೆಗಾಲದ ಆರಂಭದಲ್ಲಿ ಅತ್ಯಧಿಕ ವಿದ್ಯುತ್‌ ಕಂಬಗಳು ನೆಲಕ್ಕಚ್ಚಿ ವಿದ್ಯುತ್‌ ಪ್ರಸರಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದವು. ಜಿಲ್ಲೆಯಲ್ಲಿಯೇ 1,000ಕ್ಕೂ ಅಧಿಕ ಕಂಬಗಳು, ಹತ್ತಾರು ವಿದ್ಯುತ್‌ ಪರಿವರ್ತಕಗಳು ಹಾನಿಗೀಡಾದವು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಮಳೆಗಾಲವೆಂದರೆ ಅದು ಗಾಳಿ-ಮಳೆಯೊಂದಿಗೆ ಮೆಸ್ಕಾಂ ಹೋರಾಟ ಎಂಬಂತಾಗಿದೆ. ಅಗಲ ಕಿರಿದಾದ ರಸ್ತೆಗಳು, ಮರಗಳು, ತಗ್ಗುಪ್ರದೇಶ, ಇಕ್ಕಟ್ಟಾದ ಸ್ಥಳ, ಜಾಗದ ತಕರಾರು, ಮನೆ ಪ್ರದೇಶ ಇತ್ಯಾದಿಗಳ ಸಮಸ್ಯೆಗಳೊಂದಿಗೆ ಮೆಸ್ಕಾಂ ಗುದ್ದಾಟ ನಡೆಸುತ್ತಿದೆ.

Advertisement

ರೂಟ್‌ ಫಿಕ್ಸ್‌ ಸಮಸ್ಯೆ
“ಕೆಲವೆಡೆ ಮನೆಗಳು ಹೆಚ್ಚಾಗಿವೆ. ಅಂಗಳದ ಪಕ್ಕ, ರಸ್ತೆ ಬದಿಯಲ್ಲಿಯೂ ಲೈನ್‌ ಎಳೆಯಲು ಬಿಡುವುದಿಲ್ಲ. ತೆಂಗಿನ ಮರದ ಸೋಗೆ ಕಡಿಯುವುದನ್ನೂ ತಡೆಯುವವರಿದ್ದಾರೆ. ಓಪನ್‌ ಆಗಿ ಲೈನ್‌ ಎಳೆಯಲು ಜಾಗವೇ ಇಲ್ಲದ ಸ್ಥಿತಿ ಇದೆ.ಇವುಗಳ ನಡುವೆ ಕಸರತ್ತು ಮಾಡಬೇಕು. ಲೈನ್‌ ಎಳೆಯಲು ರೂಟ್‌ಫಿಕ್ಸ್‌ ಮಾಡುವುದೇ ದೊಡ್ಡ ಸಮಸೆ’Â ಎನ್ನುತ್ತಾರೆ ಅಧಿಕಾರಿಗಳು.

ಎಬಿಸಿ ಕೇಬಲ್‌ 
ಎಬಿಸಿ ಕೇಬಲ್‌ನ್ನು (ಏರಿಯಲ್‌ ಬಂಡಲ್ಡ್‌ ಕೇಬಲ್‌) ಅಳವಡಿಸಿದರೆ ಪದೇ ಪದೇ ಮರಗಳಿಂದ ಆಗುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು. ಕಿರಿದಾದ ಜಾಗದಲ್ಲೇ ಲೈನ್‌ಗಳನ್ನು ಎಳೆಯುತ್ತಾ ಹೋಗಬಹುದು. ಹೆಚ್ಚು ಕಾರ್ಮಿಕರ ಆವಶ್ಯಕತೆ ಇಲ್ಲ. ಆದರೆ ಈಗ ಬಳಕೆ ಮಾಡುವ ತಂತಿಗಿಂತ ಎಬಿಸಿ ಕೇಬಲ್‌ಗ‌ಳು 15 ಪಟ್ಟು ಹೆಚ್ಚು ದುಬಾರಿ. ಆದರೂ ಇವುಗಳ ಬಳಕೆ ಹೆಚ್ಚುಗೊಳಿಸಿದರೆ ಅನುಕೂಲ ವಾಗಲಿದೆ.
  
ಯುಜಿ ಕೇಬಲ್‌ಗ‌ಳ ನಿರ್ಲಕ್ಷ್ಯ 
ಕೆಲವೊಂದು ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುಜಿ (ನೆಲದಡಿ) ಕೇಬಲ್‌ಗ‌ಳನ್ನು ಅಳವಡಿಸಿಕೊಳ್ಳಲಾಗಿದೆ. ಉಡುಪಿಯಲ್ಲಿ ಇನ್ನೂ ಕೂಡ ಇದರ ಅನುಷ್ಠಾನ ಆಗಿಲ್ಲ. ಕಿರಿದಾದ ರಸ್ತೆ, ಚರಂಡಿ ಪಕ್ಕದಲ್ಲಿ ಬೇರೆ ಬೇರೆ ಕೇಬಲ್‌ಗ‌ಳ ರಾಶಿಯಿಂದಾಗಿ ಯುಜಿಡಿ ಇಲೆಕ್ಟ್ರಿಕ್‌ ವಯರ್‌ಗೆ ಕಾರಿಡಾರ್‌ನ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. 
ವಿದ್ಯುತ್‌ ಮರುಸಂಪರ್ಕಕ್ಕೆ ಎಷ್ಟು ಸಿಬಂದಿ ಇದ್ದರೂ ಅದಕ್ಕೆ ನಿರ್ದಿಷ್ಟ ಸಮಯ ಬೇಕೇ ಬೇಕು. ಎಲ್ಲ ಕಡೆ ಒಂದೇ ಬಾರಿಗೆ ಚಾರ್ಜ್‌ ಮಾಡುವುದು ಸಾಧ್ಯವಿಲ್ಲ. ಒಂದು ಕಡೆಯಿಂದ ಚಾರ್ಜ್‌ ಮಾಡುತ್ತಾ ಬಂದರೆ ಮತ್ತಷ್ಟು ಅಪಾಯ ಹೆಚ್ಚು. ಮಿಂಚು ಬಂದಾಗ ಕೆಲಸ ಅಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.  

ಬಲಗೊಳ್ಳಲಿದೆ ವಿದ್ಯುತ್‌ ಜಾಲ
ಉಡುಪಿ ಮತ್ತು ಮಣಿಪಾಲ ನಗರದಲ್ಲಿ ಅತ್ಯಂತ ಹಳೆಯದಾದ ಎಲ್ಲಾ ವಿದ್ಯುತ್‌ ತಂತಿಗಳನ್ನು ತೆಗೆದು ಹೊಸ ಹೆಚ್ಚು ಸಾಮರ್ಥ್ಯದ ತಂತಿಗಳನ್ನು ಜೋಡಿಸುವ ಕೆಲಸ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಆ ಹೊಸ ತಂತಿಗಳು ಹೆಚ್ಚು ಲೋಡ್‌ನ್ನು ಕೂಡ ತಾಳಿಕೊಂಡು ಸುಸ್ಥಿತಿಯಲ್ಲಿರುತ್ತವೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

ತಾತ್ಕಾಲಿಕ ಗ್ಯಾಂಗ್‌ಮೆನ್‌ಗಳ ಬಳಕೆ
ಮೆಸ್ಕಾಂ ಉಡುಪಿ ಜಿಲ್ಲೆಗೆ ಮಳೆಗಾಲದ ಸಮಯ ಕಾರ್ಯನಿರ್ವಹಿಸಲು ಉಡುಪಿ ಮತ್ತು ಕಾರ್ಕಳಕ್ಕೆ 165 ಹಾಗೂ ಕುಂದಾಪುರಕ್ಕೆ 75 ಸೇರಿದಂತೆ ಒಟ್ಟು 240 ಮಂದಿ ಗ್ಯಾಂಗ್‌ಮೆನ್‌ಗಳನ್ನು ಏಜೆನ್ಸಿ ಮೂಲಕ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಕೊಲ್ಲೂರು ಭಾಗದಲ್ಲಿ ಮರಗಳನ್ನು ಕಡಿಯಲು ಅವಕಾಶ ಇಲ್ಲದ ಸ್ಥಳಗಳಲ್ಲಿ ಕಾಲನಿಗಳಿಗೆ ವಿದ್ಯುತ್‌ ನೀಡುವುದಕ್ಕೆ ಮಾತ್ರ ಎಬಿಸಿ ಕೇಬಲ್‌ಗ‌ಳನ್ನು ಅಳವಡಿಸಿಕೊಂಡಿದ್ದೇವೆ. ಉಡುಪಿಯಲ್ಲಿ ನಿಟ್ಟೂರಿನಿಂದ ಕಿದಿಯೂರಿಗೆ ಹೊಸ ಫೀಡರ್‌ ಸಂಪರ್ಕಕ್ಕಾಗಿ ಯುಜಿ ಕೇಬಲ್‌ ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. 
– ಮೆಸ್ಕಾಂ ಅಧಿಕಾರಿಗಳು,ಉಡುಪಿ 

Advertisement

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next