ಉಡುಪಿ: ಆರೋಗ್ಯ, ಶಿಕ್ಷಣ ಸಂಸ್ಥೆ, ಕೈಗಾರಿಕೆ ಮೂಲಕ ಜಾಗತಿಕ ಗಮನ ಸೆಳೆದಿರುವ ಮಣಿಪಾಲ-ಉಡುಪಿ ನಗರದ ಹೃದಯ ಭಾಗದಲ್ಲಿನ ಪ್ರಮುಖ ರಸ್ತೆಯ ಬೀದಿದೀಪಗಳು ಕೆಟ್ಟುಹೋಗಿ ವರ್ಷಗಳೇ ಕಳೆದರೂ ಸರಿಪಡಿಸುವ ಕಾರ್ಯ ಆಗಿಲ್ಲ.
ಟೆಂಡರ್ ಹಂತ, ಸರಕಾರದ ಅನು ಮೋದನೆಗೆ ಸಾಕಷ್ಟು ವಿಳಂಬವಾಗು ತ್ತಿರುವುದರಿಂದ ಸಾರ್ವಜನಿಕರಿಗೆ ಕತ್ತಲೆ ಭಾಗ್ಯ ಸಿಕ್ಕಂತಾಗಿದೆ.
ನಗರದ ಹೆದ್ದಾರಿ ಮತ್ತು ಜಂಕ್ಷನ್ ಒಳಭಾಗದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆಯಿಲ್ಲದೆ ಸಂಜೆ ವೇಳೆ ಮಕ್ಕಳು, ಮಹಿಳೆಯರು ಆತಂಕದಿಂದ ಓಡಾಡಬೇಕಾದ ಪರಿಸ್ಥಿತಿ ಇದೆ. ಎಂಜೆಸಿ, ಮಾಧವ ಕೃಪಾ ಶಾಲೆಯ ಜಂಕ್ಷನ್, ಮಣಿಪಾಲ-ಅಲೆವೂರು ರಸ್ತೆ, ಇಂಡಸ್ಟ್ರಿಯಲ್ ಪ್ರದೇಶದ ಕಡೆಗೆ ಸಾಗುವ ರಸ್ತೆಯಲ್ಲಿ ಕೆಲವೆಡೆ ಬೀದಿದೀಪ ಬೆಳಗುತ್ತಿಲ್ಲ. ಅಂಚೆ ಕಚೇರಿ ಸಮೀಪ ಒಂದು ಬೀದಿದೀಪವೂ ಪ್ರಕಾಶಮಾನವಾಗಿ ಬೆಳಕು ನೀಡುತ್ತಿಲ್ಲ ನಾಗರಿಕರು ದೂರಿದ್ದಾರೆ.
ಮಣಿಪಾಲ ಬಸ್ ನಿಲ್ದಾಣ, ಲಕ್ಷ್ಮೀಂದ್ರ ನಗರ, ಇಂದ್ರಾಳಿ, ಎಂಜಿಎಂ, ಕುಂಜಿಬೆಟ್ಟು ಬಸ್ ನಿಲ್ದಾಣಗಳಿದ್ದು, ಸಂಜೆ 7ರ ಬಳಿಕ ಇಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಬಸ್‌ಗೆ ಕಾಯಲು ತೊಂದರೆಯಾಗುತ್ತಿದೆ. ಅಂಬಾಗಿಲು- ಜಂಕ್ಷನ್‌ನಿಂದ ಪೆರಂಪಳ್ಳಿ-ಮಣಿಪಾಲ ಕಾಯಿನ್ ಸರ್ಕಲ್‌ವರೆಗೂ ಬೀದಿದೀಪದ ವ್ಯವಸ್ಥೆ ಇಲ್ಲದೆ ರಾತ್ರಿ 7ರ ಅನಂತರ ಕತ್ತಲೆಯಲ್ಲಿ ಸಾರ್ವಜನಿಕರು ಆತಂಕ ದಿಂದ ಓಡಾಡಬೇಕಿದೆ. ರಾತ್ರಿ ಪಾಳಿ ಕೆಲಸಕ್ಕೆ ಹೋಗಿಬರುವ ಮಹಿಳೆಯರು, ಯುವತಿಯರು, ಕೋಚಿಂಗ್ ತೆರಳುವ ವಿದ್ಯಾರ್ಥಿಗಳಿಗೆ ಅಭದ್ರತೆ ವಾತಾವರಣವಿದೆ. ಪಾದಚಾರಿ ಮತ್ತು ವಾಹನ ಸವಾರರಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಲು ಕಟ್ಟಡ ಮತ್ತು ವಾಹನಗಳ ಬೆಳಕೇ ಆಶ್ರಯವಾಗಿದೆ.
690 ಬೀದಿ ದೀಪ ಕಂಬಗಳು ಅಳವಡಿಕೆ
ಹಂತಹಂತವಾಗಿ ನಗರದ ಬೀದಿ ದೀಪ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಇದೀಗ ನಗರದ ಮುಖ್ಯರಸ್ಥೆಗಳಲ್ಲಿ ಒಟ್ಟು 18 ಕಿ. ಮೀ. ಬೀದಿ ದೀಪ ಯೋಜನೆ ಟೆಂಡರ್ ಹಂತದಲ್ಲಿದೆ. ಒಟ್ಟು 690 ದೀಪ ವ್ಯವಸ್ಥೆ ಕಂಬಗಳನ್ನು ಅಳವಡಿಸಲಾಗುತ್ತದೆ. ಅಂಬಾಗಿಲು-ಪೆರಂಪಳ್ಳಿ ರಸ್ತೆ, ಮಣಿಪಾಲ ಜೂನಿಯರ್ ಕಾಲೇಜು- ಇಂಡಸ್ಟ್ರಿಯಲ್ ಏರಿಯ, ಪರ್ಕಳ-ಮಲ್ಪೆಯವರೆಗೆ ದೀಪಗಳನ್ನು ಅಳವಡಿಸಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಜಿಲ್ಲಾಧಿಕಾರಿಗಳು ಅನುಮೋದನೆಗೆ ಬಾಕಿ ಇದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಶೀಘ್ರ ವ್ಯವಸ್ಥೆ: ಕೆಲವು ತಾಂತ್ರಿಕ ಕಾರಣಗಳಿಂದ ಟೆಂಡರ್ ಮೂರು ಸಲ ರದ್ದು ಆಗಿರುವ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಸಮಸ್ಯೆಯಾಗಿತ್ತು. ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ನಗರದ ಮುಖ್ಯರಸ್ತೆಗಳಲ್ಲಿ ಬೀದಿ ದೀಪದ ವ್ಯವಸ್ಥೆ ಶೀಘ್ರದಲ್ಲೆ ಆಗಲಿದೆ. –
ಸುಮಿತ್ರಾ ಎಸ್. ನಾಯಕ್, ಅಧ್ಯಕ್ಷೆ, ಉಡುಪಿ ನಗರಸಭೆ