Advertisement
ಇಂದ್ರಾಳಿ,ಮಣಿಪಾಲ ಲಕ್ಷ್ಮೀಂದ್ರ ನಗರ, ಕಡಿಯಾಳಿ ಮೊದಲಾದ ಕಡೆಗಳಲ್ಲಿ ಎದ್ದಿರುವ ಡೇಂಜರಸ್ ಹೊಂಡಗಳಿಂದಾಗಿ ವಾಹನ ಚಾಲಕರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಮುಖ್ಯವಾಗಿ ಹಲವಾರು ದ್ವಿಚಕ್ರ ವಾಹನಗಳು ಅಪಘಾತಕ್ಕೆ ಈಡಾಗಿ ಸವಾರರು ಆಸ್ಪತ್ರೆ ಸೇರಿದ್ದಾರೆ.
“ಲೋಕಲ್ ಬಾಯ್ಸ್’ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್‌ನ ಸದಸ್ಯರು ಇಂದ್ರಾಳಿಯಲ್ಲಿದ್ದಾಗ ಅಲ್ಲಿನ ಹೊಂಡಕ್ಕೆ ದ್ವಿಚಕ್ರ ವಾಹನ ಸಿಲುಕಿ ಅಪಘಾತವಾಗಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಈ ಅವಘಡವನ್ನು ಕಣ್ಣಾರೆ ಕಂಡ ಕ್ಲಬ್‌ನ ಸದಸ್ಯರು ಅಪಾಯಕಾರಿ ಹೊಂಡಗಳನ್ನು ತಾವೇ ಮುಚ್ಚುವ ನಿರ್ಧಾರವನ್ನು ಕೈಗೊಂಡರು.
ಅದರಂತೆ “ಲೋಕಲ್ ಬಾಯ್ಸ್’ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್‌ನ ಅಧ್ಯಕ್ಷ ಚಕ್ರಾಧರ್ ದೇವಾಡಿಗ, ಪದಾಧಿಕಾರಿಗಳಾದ ದೀಪಕ್ ಕುಮಾರ್, ಕೀರ್ತಿ ಮತ್ತು ಸೂರಜ್ ಇಂದ್ರಾಳಿ ಅವರ ನೇತೃತ್ವದ ಸುಮಾರು 14 ಮಂದಿಯ ತಂಡದವರು ಜು. 29ರಂದು ರಸ್ತೆ ಹೊಂಡ ಮುಚ್ಚುವ ಕಾರ್ಯ ನಡೆಸಿದ್ದಾರೆ. ಇಂದ್ರಾಳಿ ಪಶುಪತಿ ಕೃಪಾ ಬಳಿ, ಪೆಟ್ರೋಲ್ ಬಂಕ್ ಎದುರು, ಲಕ್ಷ್ಮೀಂದ್ರ ನಗರದ ಕಡೆಗಳಲ್ಲಿದ್ದ ರಸ್ತೆ ಹೊಂಡವನ್ನು ಸಿಮೆಂಟ್ ಮಿಶ್ರಣ ಮಾಡಿ ಹಾಕಿ ಮುಚ್ಚಿದ್ದಾರೆ. ಅವರ ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ನಮ್ಮ ಈ ಕಾರ್ಯದೊಂದಿಗೆ ಜನ ಪ್ರತಿನಿಧಿಗಳು, ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿದರೆ ಸಮಸ್ಯೆ ಪರಿಹಾರ ವಾಗುತ್ತದೆ ಎಂದು ಈ ಕ್ಲಬ್‌ನವರು ಹೇಳಿದ್ದಾರೆ. ಯೋಜನೆ ಮುಂದುವರಿಸುತ್ತೇವೆ
ನಮ್ಮ ಕ್ಲಬ್ ಸಾಮಾಜಿಕ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಅನಾಥ, ಬುದ್ಧಿಮಾಂದ್ಯ ಮಕ್ಕಳ ಕೇಂದ್ರಕ್ಕೂ ಸಹಾಯ ನೀಡುತ್ತಿದ್ದೇವೆ. ಸದಸ್ಯರ ನಿರ್ಣಯದಂತೆ ರಸ್ತೆ ಹೊಂಡ ಮುಚ್ಚುವ ಕಾರ್ಯಕ್ಕೆ ಇಳಿದಿದ್ದೇವೆ. ಮುಂದಿನ ವಾರ ಕಡಿಯಾಳಿ ಇನ್ನಿತರ ಕಡೆಗಳಲ್ಲಿ ಸಿಮೆಂಟ್ ಹಾಕಿ ಹೊಂಡ ಮುಚ್ಚಲಿದ್ದೇವೆ. ಸದಸ್ಯರೆಲ್ಲರೂ ಶ್ರಮದಾನ ನಡೆಸಲಿದ್ದೇವೆ. ಸಿಮೆಂಟ್ ವೆಚ್ಚವನ್ನು ನಮ್ಮ ಕ್ಲಬ್ ಭರಿಸುತ್ತದೆ.
– ಚಕ್ರಾಧರ್ ದೇವಾಡಿಗ,ಅಧ್ಯಕ್ಷರು,
“ಲೋಕಲ್ ಬಾಯ್ಸ್ ‘ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್