Advertisement
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಹಕಾರದೊಂದಿಗೆ ಸಂಚಾರಿ ತರಕಾರಿ ಮಾರುಕಟ್ಟೆ ಯೋಜನೆ ಆರಂಭಿಸಲಾಗುತ್ತಿದೆ. ಮಧ್ಯವರ್ತಿಗಳು ಇಲ್ಲದೆಯೇ ನೇರವಾಗಿ ರೈತರು ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲಿದ್ದಾರೆ. ಅಲಸಂಡೆ, ಬದನೆ, ಹರಿವೆ, ಸೌತೆ ಕಾಯಿ ಮೊದಲಾದವುಗಳನ್ನು ಮಾರಾಟ ಮಾಡಲಾಗುವುದು. ರೈತರು ಯಾವ ಕಾಲದಲ್ಲಿ ಯಾವ ತರಕಾರಿಗಳನ್ನು ಬೆಳೆಯುತ್ತಾರೋ ಅದು ಸಂಚಾರಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಮುಂದೆ ಅಕ್ಕಿ, ಬೆಲ್ಲ, ತೆಂಗಿನಕಾಯಿಗಳನ್ನು ಕೂಡ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಯಾವ ದಿನ ಯಾವ ತರಕಾರಿ ದೊರೆಯುತ್ತದೆ ಎಂಬುದನ್ನು ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಲಾಗುವುದು. ವಾಹನ ದಲ್ಲಿಯೇ ಮಾರಾಟ ನಡೆಯುತ್ತದೆ. ಆ ವಾಹನದಲ್ಲಿ ಸಂಪರ್ಕ ಸಂಖ್ಯೆಯನ್ನು ಕೂಡ ಪ್ರಚುರಪಡಿಸಲಾಗುವುದು. ಈ ತರಕಾರಿಗಳಲ್ಲಿ ಸಾವಯವೂ ಇದೆ. ಆದರೆ ಸಾವಯವ ಎಂದು ಕರೆಯಬೇಕಾದರೆ ಅದನ್ನು ಪ್ರಮಾಣೀಕರಿಸಬೇಕು. ಹಾಗಾಗಿ ಇಲ್ಲಿ ಪೂರ್ಣವಾಗಿ ಸಾವಯವ ತರಕಾರಿಯೇ ಮಾರಾಟವಾಗುತ್ತದೆ ಎಂದು ಹೇಳಲಾಗದು. ಆದರೆ ತಾಜಾ ತರಕಾರಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ರಾಘವೇಂದ್ರ ಭಟ್, ನಿರ್ದೇಶಕ ಅರ್ಜುನ್ ನಾೖಕ್, ಸಿಇಒ ನಾಗರಾಜ್, ಮಟ್ಟುಗುಳ್ಳ ಬೆಳೆಗಾರರ ಸಂಘದ ಲಕ್ಷ್ಮಣ್ ಮಟ್ಟು ಉಪಸ್ಥಿತರಿದ್ದರು. ಮಣಿಪಾಲ 5, ಉಡುಪಿ 3 ಕಡೆ
ಮಣಿಪಾಲದ ಟೈಗರ್ ಸರ್ಕಲ್, ಎಂಐಟಿ ಕ್ಯಾಂಪಸ್, ಸಿಂಡಿಕೇಟ್ ಸರ್ಕಲ್, ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಬಳಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಪಕ್ಕದಲ್ಲಿ ಸಂಚಾರಿ ತರಕಾರಿ ಮಾರುಕಟ್ಟೆ ಇರುತ್ತದೆ. ಉಡುಪಿಯಲ್ಲಿ ಸಿಟಿ ಬಸ್ ನಿಲ್ದಾಣ ಮತ್ತು ಅಂಬಲಪಾಡಿ ಜಂಕ್ಷನ್ ಪರಿಸರದಲ್ಲಿ ಸಂಚಾರಿ ಮಾರುಕಟ್ಟೆ ಆರಂಭಿಸಲು ನಿರ್ಧರಿಸಲಾಗಿದೆ. ಇವು ಸಾಮಾನ್ಯವಾಗಿ ಬೆಳಗ್ಗೆ 8ರಿಂದ ರಾತ್ರಿ 7 ಗಂಟೆಯವರೆಗೆ ಲಭ್ಯವಿರುತ್ತವೆ. ಆದರೆ ನಿರ್ದಿಷ್ಟ ಸಮಯವನ್ನು ಮೊಬೈಲ್ ಸಂಖ್ಯೆಯ ಮೂಲಕವೇ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಪಡುಬಿದ್ರಿ, ಕಾರ್ಕಳ ಕಡೆಗಳಿಂದಲೂ ಬೇಡಿಕೆ ಇದೆ. ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರಿಯಲ್ಲಿ ಈಗಾಗಲೇ 250 ಸದಸ್ಯರು ನೋಂದಣಿಗೊಂಡಿದ್ದು ಅವರು ತಮ್ಮಲ್ಲಿರುವ ತರಕಾರಿಗಳ ಬಗ್ಗೆ ಪರಸ್ಪರ ಮಾಹಿತಿ ನೀಡುತ್ತಾ ಸಮನ್ವಯ ಸಾಧಿಸಿ ಮಾರಾಟ ಮಾಡಲಿದ್ದಾರೆ. ಡಿ. 29ರಂದು ಬೆಳಗ್ಗೆ 11ಕ್ಕೆ ಮಣಿಪಾಲ ಟೈಗರ್ ಸರ್ಕಲ್‌ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸಲಿದ್ದಾರೆ ಎಂದು ಡಾ| ಹರೀಶ್ ಜೋಷಿ ಮತ್ತು ನಾಗರಾಜ್ ಉಳಿತ್ತಾಯ ತಿಳಿಸಿದರು.