ಉಡುಪಿ: ಲಕ್ಷ್ಮೀ ನಗರದ ಯುವಕನ ಹತ್ಯೆಯ ಆರೋಪಿಗಳನ್ನು ಘಟನೆ ನಡೆದ 24 ಗಂಟೆಯಲ್ಲಿ ಬಂಧಿಸಿದ ತನಿಖಾಧಿಕಾರಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನಾಯಕ್ ತಂಡ.
ಸೋಮವಾರ ತನ್ನ ಮನೆಯ ಮುಂಭಾಗದಲ್ಲೇ ಹತ್ಯೆಯಾದ ಯೋಗೀಶ್ (28) ಸುವರ್ಣ ಹತ್ಯೆಯಲ್ಲಿ ಭಾಗಿಯಾದ ಈಗಾಗಲೇ ಎರಡು ಕೊಲೆ ಆರೋಪದಲ್ಲಿ ಬಂಧಿಯಾಗಿ ಜಾಮೀನಿನ ಮೇಲೆ ಹೊರಬಂದ ಕಲ್ಯಾಣಪುರದ ಸುಜಿತ್ ಪಿಂಟೋ ಮತ್ತು ಆತನ ಸಹೋದರ ರೋಹಿತ್ ಪಿಂಟೋ, ಕೊಡಂಕೂರಿನ ಪ್ರದೀಪ್ ಯಾನೆ ಅಣ್ಣು, ಅಂಬಾಗಿಲು ಪುತ್ತೂರಿನ ವಿನಯನನ್ನು ತನಿಖಾಧಿಕಾರಿ ಮಂಜುನಾಥ್ ನಾಯಕ್ ನೇತೃತ್ವದ ತಂಡ ಬಂಧಿಸಿದೆ.
ಕೊಲೆ ಪ್ರಕರಣದಲ್ಲಿ ಭಾಗಿಯಾದ ಬೈಲಕೆರೆಯ ಅನುಪ್ ಮತ್ತು ಗೀರೀಶ್ ಶೆಟ್ಟಿ ತಲೆ ಮರೆಸಿಕೊಂಡಿದ್ದಾರೆ.
ಆರೋಪಿಗಳು ಸಂತೆಕಟ್ಟೆಯ ಬಾರಿನಲ್ಲಿ ಯೋಗೀಶ್ ನೊಂದಿಗೆ ಯಾವುದೊ ವಿಚಾರದಲ್ಲಿ ಗಲಾಟೆ ನಡೆಸಿದ್ದರು, ಇದೇ ವಿಚಾರವಾಗಿ ಯೋಗೀಶ್ ತನ್ನ ಸ್ನೇಹಿತರಿಗೆ ಗಲಾಟೆಯ ಮಾಹಿತಿ ನೀಡಿದ್ದ. ಯೋಗೀಶ್ ಕೂಡ ಕೊರಂಗ್ರಪಾಡಿ, ಅಲೆವೂರಿನ ರೌಡಿಗಳ ಜೊತೆ ಒಡನಾಟ ಹೊಂದಿದ್ದು, ತನ್ನ ಸಹಚರರೊಂದಿಗೆ ಮಧ್ಯಾಹ್ನದಿಂದ ಸಂತೆಕಟ್ಟೆ, ಮಲ್ಪೆ, ಕೊಡವೂರು ಪರಿಸರದಲ್ಲಿ ತಂಡ ಕಟ್ಟಿ ತಿರುಗಾಡುತ್ತಿದ್ದ.
ಈ ವಿಷಯ ತಿಳಿದ ಸುಜಿತ್ ಪಿಂಟೋ ಸಂಜೆ ತನ್ನ ತಂಡದೊಂದಿಗೆ ಸಂತೆಕಟ್ಟೆ ಬಾರ್ ನಲ್ಲಿ ಕುಡಿಯುತ್ತಿರುವ ಸಂದರ್ಭ ಅಲ್ಲಿ ಯೋಗೀಶ್ ಕೂಡ ಸಿಕ್ಕಿದ್ದು, ಅಲ್ಲೂ ಮಾತಿನ ಚಕಮಕಿ ಆಗಿದೆಂದು ಪೊಲೀಸರು ತಿಳಿಸಿದ್ದಾರೆ. ನಂತರ ರಾತ್ರಿ 11.25 ಗಂಟೆಗೆ ಮನೆಗೆ ಹೋದ ಯೋಗೀಶನನ್ನು ಕರೆದು ಹತ್ಯೆ ಮಾಡಿದ್ದಾರೆ.
ವರ್ವಾಡಿ ಪ್ರವೀಣ್ ಶೆಟ್ಟಿ ಮತ್ತು ಅಂಬಾಗಿಲು ಗುರುಪ್ರಸಾದ್ ಭಟ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಹೋದರರಾದ ಕಲ್ಯಾಣಪುರದ ರೋಹಿತ್ ಪಿಂಟೋ, ಸುಜಿತ್ ಪಿಂಟೋ ಅವರು ನಾಲ್ಕು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದರು.