ಉಡುಪಿ: ಕೃಷ್ಣ ಜನ್ಮಾಷ್ಟಮಿ ದಿನ ಮೂಡೆ (ಕೊಟ್ಟೆ ಕಡುಬು) ಮಾಡುವುದು ವಾಡಿಕೆ. ಯದು ನಂದನನಿಗೆ ಪ್ರಿಯವಾದ ತಿಂಡಿಗಳಲ್ಲಿ ಮೂಡೆಯು ಒಂದಾಗಿದ್ದು, ಅಷ್ಟಮಿಯಂದು ಎಲ್ಲರ ಮನೆಯಲ್ಲೂ ಮೂಡೆ ಘಮಘಮಿಸುತ್ತಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಮನೆಯಲ್ಲಿ ಮೂಡೆ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದ, ಅಷ್ಟಮಿ ಹಿಂದಿನ ಮಾರುಕಟ್ಟೆಗೆ ಬಂದು ಮೂಡೆಯ ಕೊಟ್ಟೆ (ಕೇದಗೆಯ ಎಲೆಯನ್ನು ಸುರುಟಿ ಮಾಡಿರುವ ಎಲೆಯ ಪಾತ್ರೆ) ತೆಗೆದುಕೊಂಡು ಹೋಗುತ್ತಾರೆ. ವರ್ಷದಿಂದ ವರ್ಷಕ್ಕೆ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಹಾಗಾಗಿ ಅದರ ದರದಲ್ಲಿಯೂ ಏರಿಕೆಯಾಗಿದೆ.
ಉಡುಪಿ ರಥಬೀದಿ ಸುತ್ತ ಅಷ್ಟಮಿಯ ಎರಡು ದಿನದಲ್ಲಿ50 ಸಾವಿರದಷ್ಟು ಮೂಡೆ ಕೊಟ್ಟೆ ಮಾರಾಟವಾಗುತ್ತದೆ. ಒರ್ವ ವ್ಯಾಪಾರಿ 3000 ರಿಂದ 4000 ಮೂಡೆ ಕೊಟ್ಟೆ ಮಾರಾಟ ಮಾಡುತ್ತಾರೆ.
ಖರೀದಿದಾರರು ಮೂಡೆ ಕೊಟ್ಟೆ ಬೆಲೆ ಹೆಚ್ಚಾಗಿದೆ ಎಂದು ವಾದ ಮಾಡಿ ಮಾರಾಟಗಾರರನ್ನು ದೂಷಿಸುತ್ತಾ ಕೊಂಡುಕೊಳ್ಳುತ್ತಾರೆ. ಆದರೆ ಕೊಟ್ಟೆ ತಯಾರಿಕೆಯ ಹಿಂದಿರುವ ಪರಿಶ್ರಮ ಯಾರಿಗೂ ತಿಳಿದಿಲ್ಲ. ಅಷ್ಟಮಿಗೆ ಒಂದು ವಾರ ಇರುವಾಗಲೇ ಪೂರ್ವ ತಯಾರಿ ಆರಂಭ ಗೊಳ್ಳುತ್ತದೆ. ಕಾಡು ಮೇಡು ಆಳೆದು ಕೇದಿಗೆ ಎಲೆಯನ್ನು ತೆಗೆದುಕೊಂಡು ಬರುತ್ತೇವೆ. ನಂತರ ಅದರಲ್ಲಿರುವ ಮುಳ್ಳುಗಳನ್ನು ಸ್ವಚ್ಛ ಗೊಳಿಸುತ್ತೇವೆ ಜತೆಗೆ ಎಲೆಗಳನ್ನು ಬೆಂಕಿ ಶಾಖದಲ್ಲಿ ಅದರ ತೇವಾಂಶವನ್ನು ತೆಗೆಯಲಾಗುತ್ತದೆ. ಹೀಗೆ ಮೂಡೆ ಕೊಟ್ಟೆ ತಯಾರಿಕೆ ಹಿಂದೆ ಸಾಕಷ್ಟು ಪರಿಶ್ರಮ ಇದ್ದು ಮುಳ್ಳುಗಳಿಂದ ಗಾಯ ಗೊಂಡರೂ ಮಾರಾಟಗಾರರು ಇದರ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನುತ್ತಾರೆ ಕಾಪುವಿನ ಸುಭಾಷಿನಿ.
ಸುಶ್ಮಿತಾ ಜೈನ್