Advertisement

Udupi: ಕಲ್ಸಂಕ ವಾಹನ ದಟ್ಟಣೆ ಸಮಸ್ಯೆ; ಗಾಯ ಎಲ್ಲೋ? ಮುಲಾಮು ಹಚುತ್ತಿರುವುದು ಇನ್ನೆಲ್ಲೋ!

03:29 PM Dec 30, 2024 | Team Udayavani |

ಉಡುಪಿ: ಸುಮಾರು ಹತ್ತು ದಿನಗಳಿಂದ ಕಲ್ಸಂಕ ವೃತ್ತದಲ್ಲಿ ವಾಹನ ದಟ್ಟಣೆ ವಿಪರೀತವಾಗಿದ್ದು, ಗಂಟೆಗಟ್ಟಲೆ ವಾಹನಗಳು ನಿಲ್ಲುವಂತಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ವಿವಿಧ ಪ್ರಯೋಗಗಳನ್ನು ಮಾಡಲಾಗುತ್ತಿದ್ದರೂ ಸಮಸ್ಯೆ ಬಗೆಹರಿದಂತಿಲ್ಲ.

Advertisement

ಇದರೊಂದಿಗೆ ಅಂಬಲಪಾಡಿ ವೃತ್ತದಲ್ಲೂ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ವಾಹನ ದಟ್ಟಣೆಯ ಒತ್ತಡ ನಗರ ಬಸ್‌ ನಿಲ್ದಾಣ, ಕಲ್ಸಂಕ ವೃತ್ತದ ಮೇಲೆ ಹೆಚ್ಚಾಗುವುದು ಖಚಿತ. ಹೊಸ ವರ್ಷ, ಶೈಕ್ಷಣಿಕ ಪ್ರವಾಸಗಳ ಗೊಂದಲ ಮುಗಿದರೂ ಕಲ್ಸಂಕ ವೃತ್ತದ ಸಮಸ್ಯೆ ಬಗೆಹರಿಯುವುದು ಕಷ್ಟ ಎಂಬಂತಾಗಿದೆ.

ಕಲ್ಸಂಕ ವೃತ್ತದ ಸಮಸ್ಯೆಯ ಪೂರ್ಣ ಸ್ವರೂಪ ಅರಿತುಕೊಳ್ಳದೇ ಅರ್ಧಂಬರ್ಧ ಪರಿಹಾರ ಹುಡುಕುತ್ತಿರುವುದೂ ಟ್ರಾಫಿಕ್‌ ಜಾಮ್‌ನ ತೀವ್ರತೆ ಹೆಚ್ಚಿಸಲು ಕಾರಣವಾಗುತ್ತಿದೆ. ಉದಯವಾಣಿಯ ಓದುಗರೊಬ್ಬರು ಕಲ್ಸಂಕ ಸಮಸ್ಯೆಯನ್ನು ಅಧ್ಯಯನ ಮಾಡಿ ಸಮಸ್ಯೆಯ ಸ್ವರೂಪ ಮತ್ತು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

ಅವರ ಪ್ರಕಾರ ಸಮಸ್ಯೆ ಹೊಸತೂ ಅಲ್ಲ, ಸಣ್ಣ ಸ್ವರೂಪದ್ದೂ ಅಲ್ಲ. ಪರಿಹಾರವೂ ಇಲ್ಲವೆಂದಲ್ಲ. ಟ್ರಾಫಿಕ್‌ ಸಿಗ್ನಲ್‌ ಸೇರಿದಂತೆ
ಹಲವು ಪರಿಹಾರಗಳನ್ನು ಹುಡುಕಬೇಕಿದೆ.

ನಿಜವಾಗಲೂ ಸಮಸ್ಯೆ ಎಲ್ಲಿ?
ಕಲ್ಸಂಕ ವೃತ್ತ ಉಳಿದೆಲ್ಲ ವೃತ್ತಗಳಿಗಿಂತ ಭಿನ್ನವಾಗಿದ್ದು, ನಾಲ್ಕರ ಬದಲು ಮೂರು ಕಡೆಯಿಂದ ವಾಹನಗಳು ಸಂಧಿಸುತ್ತವೆ.
ಉಡುಪಿ ಸಿಟಿ ಬಸ್‌ ನಿಲ್ದಾಣದಿಂದ ಮಣಿಪಾಲದ ಕಡೆಗೆ ಹೋಗುವವರು,  ಗುಂಡಿಬೈಲು-ಅಂಬಾಗಿಲು ಕಡೆಯಿಂದ ಸಿಟಿ ಬಸ್‌ ನಿಲ್ದಾಣದ ಕಡೆಗೆ ಹೋಗುವವರು ಹಾಗೂ ಮಣಿಪಾಲ ಕಡೆಯಿಂದ ಸಿಟಿ ಬಸ್‌ ನಿಲ್ದಾಣಕ್ಕೆ ಹೋಗುವವರು ಇಲ್ಲಿ ಸಂಧಿಸುತ್ತಾರೆ. ಇದರೊಂದಿಗೆ ಮೂರೂ ಬದಿಗೆ ಹೊಂದಿಕೊಂಡಂತೆ ಇರುವ ಫ್ರೀ ಲೆಫ್ಟ್ ನಲ್ಲಿ ಸದಾ ವಾಹನಗಳು ಸಾಗುತ್ತಿರುತ್ತವೆ.

Advertisement

ಪ್ರಸ್ತುತ ಇಲ್ಲಿ ಯಾವುದೇ ಸಿಗ್ನಲ್‌ಗ‌ಳಿಲ್ಲ. ಪೊಲೀಸರೇ ಇಡೀ ವ್ಯವಸ್ಥೆಯನ್ನು ನಿರ್ವಹಿಸಬೇಕಿದ್ದು, ಒಂದು ಕ್ಷಣ ಆರಾಮ ತೆಗೆದು
ಕೊಂಡರೂ ನೂರಾರು ವಾಹನಗಳು ಪರಸ್ಪರ ಎದುರಾಗಿ ಟ್ರಾಫಿಕ್‌ ಜಾಮ್ ಉಂಟಾಗುತ್ತಿದೆ. ಸಾಮಾನ್ಯವಾಗಿ‌ ಫ್ರೀ ಲೆಫ್ಟ್ ಗಳು ಸುಗಮ ಸಂಚಾರಕ್ಕೆ ಅನುಕೂಲವಾಗಿರಬೇಕು. ಇಲ್ಲಿಯೂ ಅವುಗಳನ್ನು ವ್ಯವಸ್ಥಿತವಾಗಿ ಹಾಗೂ ಯೋಜನಾಬದ್ಧವಾಗಿ ಬಳಸದ ಕಾರಣ ಸಮಸ್ಯೆಯಾಗಿ ಪರಿಣಮಿಸುತ್ತಿವೆ. ಪ್ರಸ್ತುತ ಸರ್ಕಲ್‌ನಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ವಾಹನಗಳ ಸಾಗುವಿಕೆಯ
ಕ್ರಮಕ್ಕೂ ಫ್ರೀ ಲೆಫ್ಟ್ ನ ಬಳಕೆಯ ಕ್ರಮಕ್ಕೂ ತಾಳ-ಮೇಳವಿಲ್ಲ. ಇದು ಸಮಸ್ಯೆಯನ್ನು ತೀವ್ರಗೊಳಿಸುತ್ತಿದೆ.

ಉದಾಹರಣೆಗೆ ಮಣಿಪಾಲ ಕಡೆಯಿಂದ ವಾಹನಗಳನ್ನು ಸಿಟಿ ಬಸ್‌ ನಿಲ್ದಾಣ ಬಿಡುವಾಗಲೇ ರಾಜಾಂಗಣ ಬದಿಯ ಫ್ರೀ ಲೆಫ್ಟ್ ನಿಂದ ವಾಹನಗಳು ನುಗ್ಗುತ್ತಿರುತ್ತವೆ. ಇವುಗಳಲ್ಲಿ ಕೆಲವರು ಸಿಟಿ ಬಸ್‌ ಸ್ಟಾಂಡ್‌ಗೆ, ಇನ್ನು ಕೆಲವರು ಗುಂಡಿಬೈಲ್‌-ಮಣಿಪಾಲದ
ಕಡೆಗೆ ಹೋಗುವವರು ಇರುತ್ತಾರೆ. ಇವರಲ್ಲಿ ಮಣಿಪಾಲದ ಕಡೆಗೆ ಹೋಗುವವರು ಪೊಲೀಸ್‌ ಚೌಕಿ ಬಳಿ ನಿಲ್ಲುತ್ತಾರೆ.

ಒಂದೆಡೆಯಿಂದ ರಾಜಾಂಗಣದಿಂದ ಎಡಕ್ಕೆ ತೆಗೆದುಕೊಳ್ಳುವವರೊಂದಿಗೆ, ಇನ್ನೊಂದೆಡೆ ಮಣಿಪಾಲಕ್ಕೆ ತಿರುಗಲು ನಿಂತ ವಾಹನಗಳನ್ನು ದಾಟಿಕೊಂಡು ಮಣಿಪಾಲದ ಕಡೆಯಿಂದ ನಗರ ಬಸ್ಸು ನಿಲ್ದಾಣದ ಕಡೆಗೆ ಹೋಗುವ ವಾಹನಗಳಿಗೆ ಜಾಗವೇ ಇರುವುದಿಲ್ಲ. ಇದು ಟ್ರಾಫಿಕ್‌ ಜಾಮ್ ಗೆ ಕಾರಣವಾಗುತ್ತಿದೆ. ಇದೇ ಸಂದರ್ಭದಲ್ಲಿ ಸಿಟಿ ಬಸ್‌ ನಿಲ್ದಾಣದಿಂದ ಗುಂಡಿಬೈಲು ಕಡೆಗೆ ಹೋಗುವಲ್ಲಿಯೂ ‌ಫ್ರೀ ಲೆಫ್ಟ್ ಚಾಲೂ ಇರುತ್ತದೆ. ಇದು ಮಣಿಪಾಲದಿಂದ ಗುಂಡಿಬೈಲಿಗೆ ಬಲಕ್ಕೆ ಹೋಗುವವರು ಈ ಫ್ರೀ ಲೆಫ್ಟ್ ಗಳಲ್ಲಿ ಬರುವ ವಾಹನಗಳಿಗೆ ಮುಖಾಮುಖಿಯಾಗಿ ನಿಲ್ಲುವ ಕಾರಣ ಸಂಚಾರ ದಟ್ಟಣೆ ಹೆಚ್ಚುತ್ತದೆ. ಇದೇ ಸಮಸ್ಯೆ ಉಳಿದ ಎರಡೂ ಕಡೆಯಲ್ಲಿಯೂ ಇದೆ. ಸಿಟಿ ಬಸ್‌ ನಿಲ್ದಾಣದಿಂದ ಮಣಿಪಾಲಕ್ಕೆ ಹೋಗುವವರಿಗೆ ಬಿಟ್ಟಾಗ ನುಗ್ಗುವ ವಾಹನಗಳಲ್ಲಿ ಕೆಲವು ಬಲಭಾಗಕ್ಕೆ ತಿರುಗಿ ರಾಜಾಂಗಣಕ್ಕೆ ಹೋಗಲು ಟ್ರಾಫಿಕ್‌ ಚೌಕಿ ಬಳಿ ನಿಲ್ಲುತ್ತವೆ.

ಉಳಿದ ವಾಹನಗಳಿಗೆ ಗುಂಡಿಬೈಲಿನಿಂದ ಮಣಿಪಾಲಕ್ಕೆ ಸಾಗುವ ಫ್ರೀ ಲೆಫ್ಟ್ ನ ವಾಹನಗಳು ಮುಖಾಮುಖಿಯಾಗಿ ಟ್ರಾಫಿಕ್‌ ಜಾಮ್ ಆಗುತ್ತದೆ. ಇದೇ ಸಮಸ್ಯೆ ಗುಂಡಿಬೈಲಿನಿಂದ ನಗರ ಬಸ್‌ ನಿಲ್ದಾಣದ ಕಡೆಗೆ ವಾಹನಗಳನ್ನು ಬಿಟ್ಟಾಗಲೂ ಆಗುತ್ತಿದೆ. ಇಲ್ಲಿಂದ ಹೊರಡುವ ವಾಹನಗಳಿಗೆ ರಾಜಾಂಗಣದಿಂದ ಬರುವ ಫ್ರೀ ಲೆಫ್ಟ್ ವಾಹನಗಳು ಹಾಗೂ ಆ ಕಡೆಯಿಂದ ಗುಂಡಿಬೈಲಿಗೆ ಹೋಗಲು ಟ್ರಾಫಿಕ್‌ ಚೌಕಿ ಬಳಿ ನಿಂತ ವಾಹನಗಳು ಮುಖಾಮುಖಿಯಾಗಿ ಮುಂದೆ ಸಾಗಲು ಅನುವು ಮಾಡುವುದಿಲ್ಲ. ಹಾಗಾಗಿ ಈ ಫ್ರೀ ಲೆಫ್ಟ್ ಹಾಗೂ ಮೂರೂ ದಿಕ್ಕುಗಳ ಮಧ್ಯೆ ವಾಹನಗಳ ಸಾಗುವಿಕೆ ಯಲ್ಲಿ ಹೊಂದಾಣಿಕೆ ತಂದರೆ ಸುಮಾರು ಸಮಸ್ಯೆ ಬಗೆಹರಿಯಲಿದೆ.

ಟ್ರಾಫಿಕ್‌ ಸಿಗ್ನಲ್‌ ಅಗತ್ಯ
ಈ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ನ ಅಗತ್ಯ ಇದೆ. ಬೆಳಗ್ಗೆ, ಸಂಜೆ ಗಂಟೆಗಟ್ಟಲೆ ವಾಹನ ಸಮಸ್ಯೆಯಿದ್ದು, ಸೀಮಿತ ಪೊಲೀಸರ ಸಂಖ್ಯೆಯಿಂದ ಪರಿಸ್ಥಿತಿಯನ್ನು ಸುಸೂತ್ರವಾಗಿ ಬಗೆಹರಿಸಲಾಗದು. ಈ ಹಿನ್ನೆಲೆಯಲ್ಲಿ ಟ್ರಾಫಿಕ್‌ ಸಿಗ್ನಲ್‌ ಸ್ಥಾಪಿಸಿದರೆ ಒಂದಿಷ್ಟು ಸಮಸ್ಯೆ ಬಗೆಹರಿಯಲಿದೆ.

ಗಮನಿಸಬೇಕಾದದ್ದು
ಯಾವುದೇ ಭಾಗದ ವಾಹನಗಳನ್ನು ಬಿಟ್ಟಾಗಲೂ ಟ್ರಾಫಿಕ್‌ ಚೌಕಿಯ ಬಳಿ ಯಾವುದೇ ವಾಹನಗಳು ನಿಲ್ಲದಂತೆ ಎಚ್ಚರ ವಹಿಸಬೇಕು. ಯಾವುದೇ ಬದಿಯಿಂದ ವಾಹನ ಉದ್ದೇಶಿತ ಬದಿಗೆ ಸಂಪೂರ್ಣವಾಗಿ ತಿರುಗಿದ ಮೇಲೆಯೇ ಮತ್ತೊಂ ದು ಬದಿಯ ವಾಹನಗಳನ್ನು ಬಿಡಬೇಕು. ಆಗ ಟ್ರಾಫಿಕ್‌ ಚೌಕಿಯಲ್ಲಿ ವಾಹನ ದಟ್ಟನೆಯಾಗದೆ ಉಳಿದ ವಾಹನಗಳಿಗೆ ಸರಾಗವಾಗಿ ಸಾಗಲು ಸ್ಥಳಾವಕಾಶ ಸಿಗಲಿದೆ.

ಒಂದು ಬದಿಯ ವಾಹನಗಳಿಗೆ ಸಾಗುವಾಗ ಅದಕ್ಕೆ ಹೊಂದಿಕೊಂಡ ಫ್ರೀ ಲೆಫ್ಟ್ ಹೊರತುಪಡಿಸಿ ಬೇರೆಡೆಯ ಫ್ರೀ ಲೆಫ್ಟ್ ಗೆ
ನಿರ್ಬಂಧವಿರಬೇಕು. ಆಗ ಮತ್ತೊಂದು ಕಡೆಯಿಂದ ಬರುವ ಫ್ರೀ ಲೆಫ್ಟ್ ನಿಂದ ಬರುವ ವಾಹನಗಳು ಅಡ್ಡವಾಗಿ ಟ್ರಾಫಿಕ್‌ ಜಾಂಗೆ
ಕಾರಣವಾಗದು. ಕುಂದಾಪುರ ಕಡೆಯಿಂದ ಬರುವವರು ಇಂದ್ರಾಳಿ ಮತ್ತಿತರ ಕಡೆ ತೆರಳಲು ಬೇಕಾದಷ್ಟು ಅವಕಾಶಗಳಿವೆ.
ಮೊದಲನೆಯದಾಗಿ ಅಂಬಾಗಿಲು ಬಳಿಯೇ ಪೆರಂಪಳ್ಳಿ ಮಾರ್ಗವಾಗಿ ತೆರಳಿ ಮುಂದಿನ ತಿರುವುಗಳಲ್ಲಿ ಇಂದ್ರಾಳಿ ಮತ್ತಿತರ ಪ್ರದೇಶಗಳನ್ನು ತಲುಪಬಹುದು. ಹಾಗೆಯೇ ಅಂಬಾಗಿಲಿನಿಂದ ಮುಂದಕ್ಕೆ ದೊಡ್ಡಣಗುಡ್ಡೆ ಬಳಿಯೂ ಎಡಕ್ಕೆ ತಿರುಗಿ ಬಾಳಿಗ ವೃತ್ತದಲ್ಲಿ ಎಡಕ್ಕೆ ತಿರುಗಿ ಇಂದ್ರಾಳಿ ತಲುಪಬಹುದು. ಹಾಗಾಗಿ ಅಂಬಾಗಿಲು, ದೊಡ್ಡಣಗುಡ್ಡೆ ಕ್ರಾಸ್‌ ಬಳಿ ಫ‌ಲಕಗಳನ್ನು ಹಾಕುವುದು ಒಳಿತು. ಅದರಿಂದ ಒಂದಿಷ್ಟು ವಾಹನಗಳು ಕಲ್ಸಂಕ ವೃತ್ತದಲ್ಲಿ ಸೇರುವುದನ್ನು ತಪ್ಪಿಸಬಹುದು. ಇದೇ ರೀತಿ ಮಣಿಪಾಲ, ಇಂದ್ರಾಳಿಯಿಂದ ಅಂಬಾಗಿಲು, ಕುಂದಾಪುರ ಕಡೆ ಹೋಗುವವರೂ ಸಹ ಇದೇ ರಸ್ತೆಯನ್ನು ಬಳಸಿ ಹೈವೇ
ತಲುಪಬಹುದು. ಈ ರೀತಿ ಸುಮಾರು ಸಣ್ಣ ಸಣ್ಣ ಪರಿಹಾರಗಳಿಂದ ಕಲ್ಸಂಕ ವಾಹನ ದಟ್ಟಣೆ ಸಮಸ್ಯೆಯನ್ನು ಬಗೆಹರಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next