ಪುತ್ತೂರು: ಕಳೆದ ವರ್ಷದ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮೇಲಿನ ಟೇರಸ್ ನಲ್ಲಿ ಮಲ್ಲಿಗೆ ಕೃಷಿ ಮಾಡಿ ಈ ಲಾಕ್ ಡೌನ್ ನಲ್ಲಿ ಮಲ್ಲಿಗೆ ಮಾರಾಟ ಮಾಡಿ ಆದಾಯ ಗಳಿಸುತ್ತಿರುವ ಪ್ರಯತ್ನವೊಂದು ನಗರದ ಮೊಟ್ಟೆತ್ತಡ್ಕದ ಮನೆಯೊಂದರಲ್ಲಿ ಗಮನ ಸೆಳೆದಿದೆ.
ನಗರದ ಮೊಟ್ಟೆತ್ತಡ್ಕ ನಿವಾಸಿ ಸಂದೀಪ್ ಲೋಬೋ ಟೆರೇಸ್ ನಲ್ಲಿ ಮಲ್ಲಿಗೆ ಬೆಳೆದವರು. ಇಲ್ಲಿ ದಿನಂಪ್ರತಿ ಅರಳುವ ಮಲ್ಲಿಗೆಯ ಸುಗಂಧ ಹತ್ತೂರಿಗೆ ಹಬ್ಬುತ್ತಿದೆ..!
ಮಲ್ಲಿಗೆ ಕೃಷಿ: ಮೊಟ್ಟೆತ್ತಡ್ಕದ ಐದು ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಸಂದೀಪ್ ಕಳೆದ ಲಾಕ್ಡೌನ್ ಅವಧಿಯಲ್ಲಿ ಮಲ್ಲಿಗೆ ಕೃಷಿ ಮಾಡಿದರೆ ಹೇಗೆ ಎಂಬ ಯೋಚನೆ ಮಾಡಿದರು. ಮನೆ ಮುಂಭಾಗದಲ್ಲಿ ಖಾಲಿ ಜಾಗ ಇಲ್ಲದಿದ್ದರೂ, ಆರ್ ಸಿಸಿ ಮನೆ ಮೇಲ್ಭಾಗದ ಖಾಲಿ ಜಾಗ ಬಳಸಿ ಮಲ್ಲಿಗೆ ಬೆಳೆಸಲು ಮುಂದಾದರು. ಆರ್ ಸಿಸಿ ಮೇಲ್ಭಾಗದ 1000 ಚದರಡಿ ಜಾಗದಲ್ಲಿ ಗೋಣಿಯೊಂದಕ್ಕೆ 25 ಕೆ.ಜಿ.ಮಣ್ಣು ತುಂಬಿಸಿ ಮಲ್ಲಿಗೆ ಗಿಡ ನಾಟಿ ಮಾಡಿದರು. ಸುಮಾರು 72 ಗೋಣಿ ಚೀಲದಲ್ಲಿ ಮಲ್ಲಿಗೆ ಗಿಡಗಳು ಸೊಂಪಾಗಿ ಬೆಳೆದಿದೆ. ಕಾಲ ಕಾಲಕ್ಕೆ ಸೆಗಣಿ ಗೊಬ್ಬರ, ನೀರು ನೀಡುತ್ತಾರೆ. ಮನೆ ಮಂದಿ ದಿನ ನಿತ್ಯ ಗಿಡದ ಆರೈಕೆ ಮಾಡುತ್ತಾರೆ.
ಕೈ ಹಿಡಿದ ಉಡುಪಿ ಮಲ್ಲಿಗೆ..!
ಇದು ಪರಿಮಳ ಬೀರುವ ಉಡುಪಿ ಮಲ್ಲಿಗೆ. ಸಂದೀಪ್ ಅವರು ನಾಟಿ ಮಾಡಿದ ಆರು ತಿಂಗಳಲ್ಲಿ ಗಿಡದಲ್ಲಿ ಮೊಗ್ಗು ಬಿಟ್ಟು ಕೊಯ್ದು ಮಾರಾಟ ಪ್ರಾರಂಭಿಸಿದ್ದಾರೆ. ದಿನವೊಂದಕ್ಕೆ ಆರರಿಂದ ಏಳು ಚೆಂಡು ನಷ್ಟು ಹೂವು ಸಿಗುತ್ತದೆ. ಬಾಳೆ ಎಲೆಯ ಬಳ್ಳಿಯಿಂದ ಮೊಗ್ಗು ನೇಯ್ದು ಮಾರುಕಟ್ಟೆಗೆ ನೀಡುತ್ತಾರೆ. ಈ ತನಕ ಒಟ್ಟು 32 ಸಾವಿರಕ್ಕೂ ಮಿಕ್ಕಿ ಆದಾಯ ದೊರೆತಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಸಿಕ್ಕಿದೆ ಅನ್ನುತ್ತಾರೆ ಮನೆ ಮಂದಿ.
ಟೇರಸ್ ಕೃಷಿ
ಪೇಟೆಯಲ್ಲಿ ಐದು ಸೆಂಟ್ಸ್ ಜಾಗ ಮನೆ ನಿರ್ಮಾಣಕಷ್ಟೇ ಸಾಲುತ್ತದೆ. ಹಾಗಾಗಿ ಕೃಷಿ ಹೇಗೆ ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತು ಕೂರುವವರು ಅಧಿಕ. ಆದರೆ ಈಗ ಟೇರಸ್ ಕೃಷಿ ಪದ್ಧತಿ ಆ ಸಮಸ್ಯೆಯನ್ನು ನೀಗಿಸಿದೆ. ಸಂದೀಪ್ ಅವರ ಪ್ರಯತ್ನ ಅದಕ್ಕೊಂದು ಉದಾಹರಣೆ. ಸಂದೀಪ್ ಅವರು ಮನೆ ಟೇರಸ್ನ್ ಖಾಲಿ ಜಾಗವನ್ನು ಬಳಸಿ ಮಲ್ಲಿಗೆ ಕೃಷಿ ಮಾತ್ರವಲ್ಲದೆ ಕಾಲ ಕಾಲಕ್ಕೆ ಮನೆ ಅಡುಗೆಗೆ ಬೇಕಾಗುವ ತರಕಾರಿಯನ್ನು ಬೆಳೆಯುತ್ತಾರೆ. ಜತೆಗೆ ಮನೆಯಲ್ಲಿ ಸಿಗುವ ವೇಸ್ಟ್ ಪದಾರ್ಥಗಳನ್ನು ಸಾವಯವ ಗೊಬ್ಬರವನ್ನಾಗಿಯು ಪರಿವರ್ತಿಸಿ ಬಳಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆಯಂತೆ ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮೇಲಿನ ಖಾಲಿ ಜಾಗದಲ್ಲಿ ಮಲ್ಲಿಗೆ ಕೃಷಿ ಪ್ರಾರಂಭಿಸಿದೆ. ಪ್ರತಿ ದಿನ ಉಡುಪಿ ಮಾರುಕಟ್ಟೆಯಲ್ಲಿನ ದರ ಆಧರಿಸಿ ಧಾರಣೆ ನಿಗದಿಯಾಗುತ್ತದೆ. ಸೀಸನ್ ಮೇಲೆ ದರ ಹೆಚ್ಚು ಕಡಿಮೆ ನಿರ್ಧರಿತವಾಗುತ್ತದೆ. ಲಾಕ್ ಡೌನ್ ನಲ್ಲಿ ಪ್ರಾರಂಭಿಸಿದ ಮಲ್ಲಿಗೆ ಕೃಷಿಯಲ್ಲಿ ಯಶಸ್ಸು ಸಿಕ್ಕಿದೆ.
ಸಂದೀಪ್ ಲೋಬೋ, ಮೊಟ್ಟೆತ್ತಡ್ಕ