Advertisement

ನರೇಗಾ ಯೋಜನೆ ಜಿಲ್ಲಾವಾರು ಮಹಿಳೆಯರ ನೋಂದಣಿ ರಾಜ್ಯದಲ್ಲಿ ಉಡುಪಿ ಪ್ರಥಮ

05:35 PM Apr 10, 2021 | Team Udayavani |

ಉಡುಪಿ: ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ)ಯಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ನೋಂದಣಿಗೊಂಡ ಜಿಲ್ಲಾವಾರು ಪಟ್ಟಿಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದೆ.

Advertisement

ಕೊರೊನಾ ಲಾಕ್‌ಡೌನ್‌ ಪರಿಣಾಮವಾಗಿ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಹಾಗೂ ಮಹಿಳೆಯರು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ನರೇಗಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 29,78,96,714 ನೊಂದಾಯಿಸಿಕೊಂಡಿದ್ದು ಅವರಲ್ಲಿ 14,48,10,880 ಜನರು ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ.

ಮಹಿಳೆಯರು ಅಧಿಕ ನೋಂದಣಿ
ದೇಶದಲ್ಲಿ ಶೇ. 53.12 ಮಂದಿ ಮಹಿಳೆಯರು ಹಾಗೂ ರಾಜ್ಯದಲ್ಲಿ 49.46 ಮಹಿಳೆಯರು ನರೇಗಾದಡಿ ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಉಡುಪಿ ಶೇ. 62ರಷ್ಟು ಮಹಿಳೆಯರು ನರೇಗಾ ಯೋಜನೆಡಿಯಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 78,302 ಮನೆಗಳಲ್ಲಿ 1,64,485 ಜನರು ಒಟ್ಟು ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ 96,046 ಮಹಿಳೆಯರು ಹಾಗೂ 68,439 ಮಂದಿ ಪುರುಷರು ಉದ್ಯೋಗ ಚೀಟಿಯನ್ನು ಹೊಂದಿದ್ದಾರೆ.

ದಿನಗೂಲಿ ವ್ಯತ್ಯಾಸ
ಪುರುಷರಿಗೆ ಜಿಲ್ಲೆಯಲ್ಲಿ ಪುರುಷರು ನಿತ್ಯ ದಿನಗೂಲಿಗೆ 700ರೂ. ನೀಡಲಾಗುತ್ತದೆ. ಆದರೆ ನರೇಗಾದಲ್ಲಿ ಲಿಂಗ ಭೇದವಿಲ್ಲದೆ ಒಬ್ಬ ವ್ಯಕ್ತಿಗೆ 275 ರೂ. ದಿನಗೂಲಿ ನೀಡಲಾಗುತ್ತದೆ. ಇದರಿಂದಾಗಿ ಪುರುಷರು ಕಡಿಮೆ ದಿನಗೂಲಿಯಲ್ಲಿ ಕೆಲಸ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ನರೇಗಾದಡಿಯಲ್ಲಿ ವಿವಿಧ ಕೆಲಸಗಳನ್ನು ಮನೆ ಸಮೀಪದಲ್ಲಿ ಪಡೆಯಲು ಅವಕಾಶ ಇರುವುದರಿಂದ ಮಹಿಳೆಯರು ಯೋಜನೆಯಡಿ ಕೆಲಸಗಳನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ.

ಗುರಿ ಮೀರಿದ ಸಾಧನೆ
ಕೋವಿಡ್‌ ಲಾಕ್‌ಡೌನ್‌ ಉದ್ಯೋಗ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. 2020-21ನೇ ಸಾಲಿನಲ್ಲಿ ಜಿಲ್ಲೆಗೆ ನರೇಗಾ ಅಡಿಯಲ್ಲಿ 5.12 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಿತ್ತು. ಕಳೆದ ವರ್ಷವೂ ಇಷ್ಟೇ ಗುರಿ ಇತ್ತು. ಈ ವರ್ಷ ಈಗಾಗಲೇ 6.67 ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ 130.27ರಷ್ಟು ಗುರಿ ಮೀರಿದ ಸಾಧನೆ ಮಾಡಿದೆ.

Advertisement

ಕೊರೊನಾದಿಂದ ಕೆಲಸವಿರಲಿಲ್ಲ!
ಮೊದಲು ನಾನು ತಿಂಡಿ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದೆ. ನಿತ್ಯ 300 ರೂ. ದಿನಗೂಲಿ ನೀಡುತ್ತಿದ್ದರು. ಕೊರೊನಾ ಬಳಿಕ ಕೆಲಸ ಕಳೆದುಕೊಂಡೆ. ಆ ಸಂದರ್ಭದಲ್ಲಿ ನರೇಗಾ ಬಗ್ಗೆ ಮಾಹಿತಿ ತಿಳಿದುಕೊಂಡೆ. ಜೂನ್‌ ತಿಂಗಳಿನಲ್ಲಿ ಕುಟುಂಬದ ಗುರುತಿನ ಚೀಟಿ ಪಡೆದುಕೊಂಡೆ. ಯೋಜನೆಯಡಿಯಲ್ಲಿ ಬಚಲು ಗುಂಡಿಗಳನ್ನು ಮನೆಯಲ್ಲಿ ನಿರ್ಮಿಸಲಾಗಿದೆ. ಬೇರೆಡೆಗಳಿಗೂ ಕೆಲಸಕ್ಕೆ ಹೋಗುತ್ತಿದ್ದೇನೆ. ದಿನಗೂಲಿ 275ರೂ. ಜತೆಗೆ ಕೆಲಸ ನೀಡುವವರು ತಿಂಡಿ ಊಟವನ್ನು ನೀಡುತ್ತಾರೆ ಎಂದು ನರೇಗಾದಡಿಯಲ್ಲಿ ಕೆಲಸ ಪಡೆಯುತ್ತಿರುವ ಶೋಭಾ ತಿಳಿಸಿದ್ದಾರೆ.

ರಾಜ್ಯದ ಇತರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಉಡುಪಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ನೊಂದಾಯಿಸಿಕೊಂಡಿದ್ದಾರೆ. ಮನೆಯ ಬಾವಿ ನಿರ್ಮಾಣ ತೋಟದ ಕೆಲಸ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಂಡು ದಿನಗೂಲಿ ಪಡೆಯುತ್ತಿದ್ದಾರೆ. ಜಿ.ಪಂ. ಸಿಇಒ ಅವರ ನೇತೃತ್ವದಲ್ಲಿ ಯೋಜನೆ ಬಗ್ಗೆ ವಿಶೇಷ ಪ್ರಚಾರ ನೀಡಲಾಗುತ್ತಿದೆ. ಉದ್ಯೋಗ ಚೀಟಿಯ ಸಂಖ್ಯೆ ಹೆಚ್ಚಾಗಿದೆ.
-ಕಿರಣ್‌ ಪಡ್ನೆಕರ್‌, ಜಿ.ಪಂ. ಉಪಕಾರ್ಯದರ್ಶಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next