ಉಡುಪಿ:ನಮ್ಮಲ್ಲಿ ಸಕಾರಾತ್ಮಕವಾದ ಚಿಂತನೆ ಬೆಳೆಸಿಕೊಳ್ಳಬೇಕು. ಯಾವುದೂ ನೆರವೇರಲ್ಲ ಎಂಬ ಭಾವನೆ ಬೇಡ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಾಗಲಿ, ಗೋರಕ್ಷಣೆಯ ಬಗ್ಗೆಯಾಗಲಿ ಎಲ್ಲದರ ಬಗ್ಗೆಯೂ ಸಕಾರಾತ್ಮಕ ಚಿಂತನೆ ಇರಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಉಡುಪಿಯ ಎಂಜಿಎಂ ಮೈದಾನದಲ್ಲಿ ಧರ್ಮ ಸಂಸದ್ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದರು.
ವೃಕ್ಷದ ಬೇರುಗಳಾಗಿ ನಾವು ಹಿಂದುತ್ವವನ್ನು ಗಟ್ಟಿ ಮಾಡಬೇಕು. ನಾವು ನಮ್ಮತನ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ದೇಶಪ್ರೇಮ, ಗೋರಕ್ಷಣೆಯ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳದ ವತಿಯಿಂದ 250ಕ್ಕೂ ಹೆಚ್ಚು ದೇವಾಲಯಗಳ ಜೀರ್ಣೋದ್ಧಾರ ಮಾಡಲಾಗಿದೆ. ದೇವಾಲಯಗಳ ಮೇಲೆ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಹೆಗ್ಗಡೆಯವರು ಬೇಸರ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪೇಜಾವರಶ್ರೀ, ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ತೊಗಾಡಿಯಾ ಸೇರಿದಂತೆ ಹಲವು ಪ್ರಮುಖ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಜೋಡುಕಟ್ಟೆಯಿಂದ ಎಂಜಿಎಂ ಕಾಲೇಜು ಮೈದಾನದವರೆಗೆ (ಸುಮಾರು 5ಕಿ.ಮೀವರೆಗೆ) ಬೃಹತ್ ಶೋಭಾಯಾತ್ರೆ ನಡೆಯಿತು. ಸಾವಿರಾರು ಮಂದಿ ಕಾರ್ಯಕರ್ತರು, ಸಾಧು ಸಂತರು ಭಾಗವಹಿಸಿದ್ದರು.
ಚಿತ್ರಗಳು:ಶ್ರೀರಾಮ್, ಲಕ್ಷ್ಮಿ ಮಚ್ಚಿನ