Advertisement

ಉಡುಪಿ ಹೈಟೆಕ್‌ ಮೀನುಮಾರುಕಟ್ಟೆ: ಇನ್ನೂ ಮುಗಿಯದ ಬವಣೆ

06:00 AM Jul 14, 2018 | Team Udayavani |

ಉಡುಪಿ: ಉಡುಪಿ ನಗರದ ಪಿಪಿಸಿ ರಸ್ತೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಂಡು 2017ರಲ್ಲಿ ನಗರಸಭೆಗೆ ಹಸ್ತಾಂತರಗೊಂಡಿರುವ ಹೈಟೆಕ್‌ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳ ಕೊರತೆ, ಅಸಮರ್ಪಕ ಕಾಮಗಾರಿಯಿಂದಾಗಿ ಅವ್ಯವಸ್ಥೆ ಉಂಟಾಗಿದೆ.

Advertisement

ಮುಖ್ಯವಾಗಿ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ಶುಚಿತ್ವದ ಸಮಸ್ಯೆ ಉಂಟಾಗಿದೆ. ತಳದ ಟೈಲ್ಸ್‌ಗಳು ನಾಜೂಕಾಗಿದ್ದು ಜಾರಿ ಬೀಳುವ ಸ್ಥಿತಿ ಉಂಟಾಗಿದೆ ಎಂದು ಇಲ್ಲಿ ಮೀನು ಮಾರಾಟ ಮಾಡುವ ಮಹಿಳಾ ಮೀನುಗಾರರು ಅಸಮಾಧಾನ ತೋಡಿಕೊಂಡಿದ್ದಾರೆ.

200ಕ್ಕೂ ಅಧಿಕ ಮಾರಾಟಗಾರರು
ಈ ಕಟ್ಟಡದ ತಳಅಂತಸ್ತಿನಲ್ಲಿ 12 ಮಂದಿ ಸಗಟು ಮೀನು ಮಾರಾಟಗಾರ ಮಹಿಳೆಯರು ಸೇರಿದಂತೆ 197 ಮಂದಿ ಮೀನು ಮಾರಾಟ ಮಾಡುತ್ತಿದ್ದಾರೆ. ಮೊದಲ ಮಹಡಿಯಲ್ಲಿ ಸುಮಾರು 6 ಮಂದಿ ಒಣಮೀನು ಹಾಗೂ 5ರಷ್ಟು ಮಂದಿ ಮರುವಾಯಿ ಮಾರಾಟ ಮಾಡುವವರಿದ್ದಾರೆ. ಮೊದಲ ಅಂತಸ್ತಿನಲ್ಲಿ ಇನ್ನೂ ಕೂಡ ಸುಮಾರು 100ರಷ್ಟು ಮಂದಿ ಮೀನು ಮಾರಾಟ ಮಾಡಲು ಸ್ಥಳಾವಕಾಶವಿದೆ. ಆದರೆ ಅಗತ್ಯ ಸೌಕರ್ಯಗಳ ಅಲಭ್ಯತೆಯಿಂದಾಗಿ ತೊಂದರೆಯಾಗಿದೆ.

ಶುಚಿತ್ವ ಸವಾಲು
ಮೀನು ಮಾರುಕಟ್ಟೆಯ ಸ್ವತ್ಛತೆಯನ್ನು ಕೂಡ ನಾವೇ ಮಾಡುತ್ತಿದ್ದೇವೆ. ಆದರೆ ಅಗತ್ಯವಿರುವಷ್ಟು ನೀರು ಇಲ್ಲ. ಬಾವಿಯ ನೀರನ್ನು ಬಳಸುತ್ತಿದ್ದೇವೆ. ವಿದ್ಯುತ್‌ ಇಲ್ಲದಾಗ ನೀರು ಅಲಭ್ಯವಾಗುತ್ತದೆ. ಮಾರುಕಟ್ಟೆಯ ಒಳಗೆ ಅಳವಡಿಸಿರುವ ನಳ್ಳಿಗಳು ಕೂಡ ಅಸಮರ್ಪಕವಾಗಿವೆ. ಮಾರುಕಟ್ಟೆಯ ಒಳಗೆ ತ್ಯಾಜ್ಯ ನೀರು ಸಂಗ್ರಹವಾಗಿ ಅದರ ಮೇಲೆ ಇಡೀ ದಿನ ನಿಂತು ವ್ಯಾಪಾರ ಮಾಡಲಾಗದ ಸ್ಥಿತಿ ಇದೆ. ತ್ಯಾಜ್ಯ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಬೇಕು. ಕಟ್ಟಡದೊಳಗೆ ಗಾಳಿ ಹರಿದಾಡುವುದಿಲ್ಲ. ಫ್ಯಾನ್‌ ಕೂಡ ಇಲ್ಲ. ಮೊದಲ ಮಹಡಿಯಲ್ಲಿ ಶೌಚಾಲಯಗಳಿಲ್ಲ. ಮಾರುಕಟ್ಟೆ ಪ್ರವೇಶಿಸುವಲ್ಲಿ ಇಳಿಜಾರಾದ ಜಾಗ ಕೂಡ ಅಪಾಯಕಾರಿಯಾಗಿದ್ದು ಅಲ್ಲಿ ನಮ್ಮದೇ ವೆಚ್ಚದಲ್ಲಿ ಮ್ಯಾಟ್‌ಗಳನ್ನು ತಂದು ಹಾಕಿದ್ದೇವೆ. ಇದನ್ನು ಕೂಡ ಸರಿಪಡಿಸಬೇಕು. ಮೀನು ಸಂರಕ್ಷಿಸಿಡುವ ವ್ಯವಸ್ಥೆ ಕೂಡ ಮಾಡಿಕೊಡಬೇಕು ಎನ್ನುತ್ತಾರೆ ಮೀನು ಮಾರಾಟಗಾರ ಮಹಿಳೆಯರು.

ಜಾರಿ ಬಿದ್ದು ಮನೆ ಸೇರಿದರು
ಮಾರುಕಟ್ಟೆಯ ಒಳಗಿನ ತಳದ ಟೈಲ್ಸ್‌ ಜಾರುತ್ತಿದೆ. ಈಗಾಗಲೇ ಮೂವರು ಮೀನು ಮಾರಾಟಗಾರ ಮಹಿಳೆಯರು ಜಾರಿ ಬಿದ್ದು ಮೂಳೆ ಮುರಿದುಕೊಂಡು ಮನೆಯಲ್ಲಿದ್ದಾರೆ. ಮೀನು ಖರೀದಿಗೆ ಬಂದವರಲ್ಲಿಯೂ ಹಲವು ಮಂದಿ ಜಾರಿ ಬಿದ್ದಿದ್ದಾರೆ ಎನ್ನುತ್ತಾರೆ ಮೀನು ಮಾರಾಟ ಮಾಡುವ ಲೀಲಾ ಜಿ.ಕುಂದರ್‌ ಅವರು. 

Advertisement

ಆಮೆಗತಿಯಲ್ಲಿ ಕಟ್ಟಡ ನಿರ್ಮಾಣ ನಡೆದ ಪರಿಣಾಮ ಬೀಡಿನಗುಡ್ಡೆಯಲ್ಲಿ ಅವ್ಯವಸ್ಥೆಯಿಂದ ಕೂಡಿದ ಜಾಗದಲ್ಲಿ ಮೀನು ಮಾರಾಟ ಮಾಡಿ ಬವಣೆ ಪಟ್ಟಿದ್ದ ಮಹಿಳಾ ಮೀನುಗಾರರು ಇದೀಗ ಹೊಸ ಮಾರುಕಟ್ಟೆಗೆ ಬಂದರೂ ಇಲ್ಲಿಯೂ ಸಮಸ್ಯೆ ಎದುರಾಗಿದೆ. ಪ್ರಾಧಿಕಾರಕ್ಕೆ ಹಲವು ಬಾರಿ ತಾಕೀತು ಮಾಡಿರುವ ನಗರಸಭೆ ಇದೀಗ ಮೀನುಗಾರರ ಹಿತದೃಷ್ಟಿಯಿಂದ ತಾನೇ ಅಗತ್ಯ ಕೆಲಸಗಳನ್ನು ಮಾಡಿಕೊಡಲು ಮುಂದಾಗಿದೆ.  

ಪ್ರಾಧಿಕಾರ ಮಾಡದಿದ್ದರೆ ನಾವೇ ಮಾಡುತ್ತೇವೆ
ಮಾರುಕಟ್ಟೆಯನ್ನು ಪ್ರಾಧಿಕಾರ ನಗರಸಭೆಗೆ ಇತ್ತೀಚೆಗೆ ಹಸ್ತಾಂತರಿಸಿದೆ. ಅವ್ಯವಸ್ಥೆ ಸರಿಪಡಿಸಿಕೊಡುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ ಹಲವು ಬಾರಿ ತಿಳಿಸಿದ್ದೇವೆ. ಎಲ್ಲಾ ಅಗತ್ಯ ಸಾಕರ್ಯಗಳನ್ನು ಮಾಡಿಕೊಟ್ಟ ಅನಂತರವೇ ನಿರ್ವಹಣೆಯ ಟೆಂಡರ್‌ ಕರೆಯುತ್ತೇವೆ. ಒಂದು ವೇಳೆ ಪ್ರಾಧಿಕಾರದವರು ಸರಿ ಮಾಡದಿದ್ದರೆ ನಗರಸಭೆಯಿಂದಲೇ ಮಾಡಲು ಸಿದ್ಧರಿದ್ದೇವೆ. ಮಹಿಳಾ ಮೀನುಗಾರರ ಸಮಸ್ಯೆ ಪರಿಹರಿಸಲು ಬದ್ಧರಿದ್ದೇವೆ. ಮಾರುಕಟ್ಟೆಗೆ ನಗರಸಭೆಯಿಂದ 9.92 ಲ.ರೂ. ನೀಡಿದ್ದೇವೆ. ಮಾತ್ರವಲ್ಲದೆ 6.25 ಲ.ರೂ. ವೆಚ್ಚದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ನಗರಸಭೆಯಿಂದಲೇ ಮಾಡಿಕೊಟ್ಟಿದ್ದೇವೆ.
– ಮೀನಾಕ್ಷಿ ಮಾಧವ ಬನ್ನಂಜೆ, ಅಧ್ಯಕ್ಷರು ಉಡುಪಿ ನಗರಸಭೆ 

ಹೆಸರಿಗೆ ಮಾತ್ರ ಹೈಟೆಕ್‌ 
ಹೆಸರಿಗೆ ಮಾತ್ರ ಹೈಟೆಕ್‌. ಇಲ್ಲಿ ಅಗತ್ಯ ಸೌಕರ್ಯಗಳಿಲ್ಲ. ಸದ್ಯ ನಾವೇ ಮಾರುಕಟ್ಟೆಯ ಸ್ವತ್ಛತೆ ಕೆಲಸ, ಇತರ ನಿರ್ವಹಣೆ ಕೂಡ ಮಾಡಿಕೊಂಡಿದ್ದೇವೆ. ಮಾಡಿದ ಕಾಮಗಾರಿಯೂ ಸರಿಯಾಗಿಲ್ಲ. ಇದನ್ನು ಸರಿ ಮಾಡಿಕೊಟ್ಟ ಅನಂತರವಷ್ಟೇ ನಿರ್ವಹಣೆಗೆ ಟೆಂಡರ್‌ ಕರೆಯಬೇಕು. ನಿರ್ವಹಣೆಯ ಗುತ್ತಿಗೆ ನಮಗೆ ನೀಡಿದರೆ ನಾವು ವಹಿಸಿಕೊಳ್ಳಲು ಸಿದ್ಧರಿದ್ದೇವೆ. ಆಗ ನಿರ್ವಹಣೆಯ ಸಮಸ್ಯೆ ಉಂಟಾಗದು. 
– ರತ್ನಾಕರ ಕೋಟ್ಯಾನ್‌,  ಬೇಬಿ ಎಚ್‌. ಸಾಲ್ಯಾನ್‌, ಅಧ್ಯಕ್ಷರು  ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರ ಸಂಘ 

Advertisement

Udayavani is now on Telegram. Click here to join our channel and stay updated with the latest news.

Next