Advertisement

Udupi: ಜೆಮ್ಸ್‌ ಆ್ಯಂಡ್‌ ಜುವೆಲರಿಗೆ ಸ್ವಂತ ಕಟ್ಟಡ ಭಾಗ್ಯ

02:19 PM Sep 10, 2024 | Team Udayavani |

ಉಡುಪಿ: ಕೇಂದ್ರ ಸರಕಾರದ ಅಧೀನದಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಚಿನ್ನಾಭರಣ ಕೌಶಲ ತರಬೇತಿ ಸಂಸ್ಥೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಜೆಮ್ಸ್‌ ಆ್ಯಂಡ್‌ ಜುವೆಲರಿಗೆ (ಐಐಜಿಜೆ) ಕೊನೆಗೂ ಸ್ವಂತ ಕಟ್ಟಡ ಭಾಗ್ಯ ದೊರೆತಿದೆ. 2017ರಲ್ಲಿ ರಲ್ಲಿ ಶಂಕುಸ್ಥಾಪನೆಯಾಗಿ 2018ರಲ್ಲಿ ಮೊದಲ ಬ್ಯಾಚ್‌ ಉದ್ಘಾಟನೆಗೊಂಡಿದ್ದ ಸಂಸ್ಥೆಯು ಕರಾವಳಿ ಬೈಪಾಸ್‌ನ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಇದೀಗ ಐದು ವರ್ಷಗಳ ಅನಂತರ ಬನ್ನಂಜೆಯ ಹಳೆ ಜಿ. ಪಂ. ಕಟ್ಟಡ ಎರಡನೇ ಮಹಡಿಗೆ ಸ್ಥಳಾಂತರಗೊಂಡಿದೆ.

Advertisement

ಇದೀಗ ಮತ್ತಷ್ಟು ವ್ಯವಸ್ಥಿತ ಮತ್ತು ವಿಶಾಲವಾಗಿ ಸಂಸ್ಥೆಯನ್ನು ರೂಪಿಸಲಾಗಿದೆ. 5 ಸಾವಿರ ಚ. ಅಡಿಯಲ್ಲಿ ಸಾಕಷ್ಟು ಸ್ಥಳಾವಕಾಶ ಹೊಂದಿದ್ದು. ಆತ್ಯಧುನಿಕ ಉಪಕರಣಗಳನ್ನು ಹೊಂದಲು ಸಹಕಾರಿಯಾಗಿದೆ. ಹೊಸ ಕಟ್ಟಡದಲ್ಲಿ ತ್ರೀಡಿ ಪ್ರಿಂಟರ್‌, ಆಟೊ ಕಾಸ್ಟಿಂಗ್‌ ಲಕ್ಷಾಂತರ ಮೌಲ್ಯದ ಉಪಕರಣಗಳನ್ನು ಜೋಡಿಸಲಾಗಿದೆ.

ಲೇಸರ್‌ ಮಾರ್ಕರ್‌, ಲೇಸರ್‌ ವೆಲ್ಡರ್‌, ಚಿನ್ನದ ಗುಣಮಟ್ಟ ಪರಿಶೀಲಿಸುವ ಯಂತ್ರ ಸಹಿತ ನಾನಾ ಮಾದರಿಯ ಆತ್ಯಾಧುನಿಕ ಯಂತ್ರೋಪಕರಣ ಹೊಸ ಕಟ್ಟಡದಲ್ಲಿ ಅಳವಡಿಸಲಾಗಿದೆ.

ವೃತ್ತಿಜೀವನ ರೂಪಿಸಲು ಅನುಕೂಲ
ಐಐಜಿಜೆ ಸಂಸ್ಥೆಯು ತನ್ನ ವಿಶೇಷ ಕಾರ್ಯಕ್ರಮದಡಿ ಆಭರಣ ತಯಾರಿಕೆ ಮತ್ತು ವಿನ್ಯಾಸ ತಾಂತ್ರಿಕತೆ ಬೋಧಿಸುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಆಭರಣ ಸಿದ್ಧಪಡಿಸುವ ಪ್ರಾಯೋಗಿಕ ಕೌಶಲ ಕಲಿಸಿಕೊಡಲಾಗುತ್ತದೆ. ಯುವಜನರಿಗೆ ರತ್ನ ಮತ್ತು ಆಭರಣ ಉದ್ಯಮದಲ್ಲಿ ವೃತ್ತಿಜೀವನ ಮುಂದುವರಿಸಲು ಅನುವು ಮಾಡಿಕೊಡಲು ಈ ಕೌಶಲವು ಅತ್ಯಗತ್ಯವಾಗಿದೆ. ಇಲ್ಲಿಯವರೆಗೆ 670 ವಿದ್ಯಾರ್ಥಿಗಳು ತರಬೇತಿ ಪಡೆದು ವಿವಿಧ ಚಿನ್ನಾಭರಣ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. 17 ಮಂದಿ ಸ್ವಂತ ಚಿನ್ನಾಭರಣ ತಯಾರಿಕೆ ಸ್ವಂತ ಉದ್ದಿಮೆಯನ್ನು ಆರಂಭಿಸಿ ಜೀವನ ರೂಪಿಸಿಕೊಂಡಿದ್ದಾರೆ.

ಪ್ರಸ್ತುತ 1 ವರ್ಷ ಅಥವಾ 6 ತಿಂಗಳು ಕಾಲ ಕಲಿಯುವ ಕೋರ್ಸ್‌ನಲ್ಲಿ 20 ಮಂದಿ ಕಲಿಯು ತ್ತಿದ್ದಾರೆ. ಪಿ. ಎಂ. ವಿಶ್ವಕರ್ಮ ಯೋಜನೆ ಅಡಿ ಯಲ್ಲಿನ ವಾರದ ತರಬೇತಿಯಲ್ಲಿ 45 ಮಂದಿ ಕೌಶಲ ತರಬೇತಿ ಪಡೆಯುತ್ತಿದ್ದಾರೆ. ಈ ಯೋಜನೆ ಸಂಬಂಧಿಸಿ ಇಲ್ಲಿಯವರೆಗೂ 179 ಮಂದಿ ತರಬೇತಿ ಪಡೆದಿದ್ದಾರೆ. ಆಭರಣ ಕ್ಷೇತ್ರದ ಮೂವರು ನುರಿತ ಬೋಧಕರು, ಇಬ್ಬರು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ದಕ್ಷಿಣ ಭಾರತದಲ್ಲಿ ಏಕೈಕ ಸಂಸ್ಥೆ
ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಐಐಜಿಜೆ ದಿಲ್ಲಿ, ಮುಂಬಯಿ, ಜೈಪುರ್‌, ವಾರಾಣಸಿ ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಉಡುಪಿಯಲ್ಲಿ ಮಾತ್ರ ಐಐಜಿಜೆ ಕ್ಯಾಂಪಸ್‌ ಹೊಂದಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿಶೇಷ ಮುತುವರ್ಜಿ ವಹಿಸಿ ಉಡುಪಿಯಲ್ಲಿ ಕೇಂದ್ರ ಸ್ಥಾಪನೆಯಾಗುವಂತೆ ಸಂಸದರ ನಿಧಿಯಿಂದ ಅನುದಾನ ಒದಗಿಸಿದ್ದರು.

ಕೇಂದ್ರ ಸಿದ್ಧ
ಐಐಜಿಜೆ ಸ್ವಂತ ಕಟ್ಟಡದ ಬೇಡಿಕೆ ಈಡೇರಿದ್ದು, ವಿಶಾಲವಾದ ಒಳಾಂಗಣ ಮತ್ತು ಅತ್ಯಾಧುನಿಕ ಯಂತ್ರೋಪಕರಣ ಒಳಗೊಂಡ ಕೇಂದ್ರ ಸಿದ್ಧಗೊಂಡಿದೆ. ಕಟ್ಟಡದ ಉದ್ಘಾಟನೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದ ನೆರವೇರಲಿದ್ದು, ಈ ತಿಂಗಳ ಅಂತ್ಯದೊಳಗೆ ಉದ್ಘಾಟನೆ ಕಾರ್ಯಕ್ರಮ ನಡೆಯಬಹುದು.
– ಕೋಟ ಶ್ರೀನಿವಾಸ್‌ ಪೂಜಾರಿ, ಸಂಸದರು

ವಿದ್ಯಾರ್ಥಿನಿಯರಿಗೆ ತರಬೇತಿ ಕಾರ್ಯಾಗಾರ
ಉಡುಪಿ ನಗರದ ಸರಕಾರಿ ಹಾಸ್ಟೆಲ್‌ಗ‌ಳಲ್ಲಿದ್ದು ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಐಐಜಿಜೆಯಲ್ಲಿ ಅಲ್ಪಾವಧಿಯ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ಈಗಾಗಲೇ ಒಂದು ಬ್ಯಾಚ್‌ನ ವಿದ್ಯಾರ್ಥಿನಿಯರು ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ವೃತ್ತಿ ಕೌಶಲತೆ ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯಡಿ ತರಬೇತಿಯನ್ನು ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next