“ಈ ಜಗತ್ತಿನ ಸೃಷ್ಟಿಕರ್ತ ನಾನೇ ಆದ ಕಾರಣ ಜಗತ್ತು ಹೇಗೆ ಆಯಿತು ಎನ್ನುವುದು ನನಗೆ ಗೊತ್ತಿದೆ. ಎಲ್ಲರ ತಂದೆಯೂ ನಾನೇ ಆದ್ದರಿಂದ ನಾನು ಮೊದಲೇ ಬಂದೆ. ನಾನು ಮಾತ್ರ ಎಲ್ಲಿಂದ ಬಂದೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ನನ್ನನ್ನು ಅಜ (ಅನಾದಿ), ಲೋಕ ಮಹೇಶ್ವರ ಎಂದು ಯಾರು ತಿಳಿಯುತ್ತಾರೋ ಸರ್ವಪಾಪಗಳಿಂದ ಮುಕ್ತರಾಗುತ್ತಾರೆ’ ಎನ್ನುತ್ತಾನೆ ಶ್ರೀಕೃಷ್ಣ. ಸರ್ವೋತ್ತಮ ಜ್ಞಾನಕ್ಕೂ, ಅಜತ್ವಜ್ಞಾನಕ್ಕೂ ಸಂಬಂಧವಿದೆ. ಅಜತ್ವ =ಹುಟ್ಟಿಲ್ಲದವ. ಭಗವಂತನಿಗೆ ಹುಟ್ಟಿಲ್ಲ, ಹುಟ್ಟಿಲ್ಲದವನೇ ಸರ್ವೋತ್ತಮ.
ಈ ಜ್ಞಾನ ಸಾತ್ವಿಕ, ದೈವೀ ಸಂಪತ್ತಿನಲ್ಲಿ ಮೂಡುವಂಥದ್ದು. ದೈವೀ ಸಂಪತ್ತೇ ಮೋಕ್ಷಕ್ಕೆ ಕಾರಣ. ಭಗವಂತನ ವಿಭೂತಿಯನ್ನು ತಿಳಿದವರು ಸರ್ವಪಾಪದಿಂದ ಮುಕ್ತನಾಗುತ್ತಾರೆ. ಇಲ್ಲಿ ಭಾವಸಮನ್ವಯ ಬೇಕು. ಎಲ್ಲವನ್ನೂ ಸಮರ್ಪಣೆ ಮಾಡುವಷ್ಟು ಭಾವನೆ ಬೇಕು.. “…. ಭಕ್ತ್ಯಾಭಗವದರಾಧನಮೇವ..’ ಎನ್ನುವುದಕ್ಕೆ ಇದು ಪೂರಕ. ಭಗವಂತನನ್ನು ಇಷ್ಟು ತಿಳಿದುಕೊಂಡರೆ ಅಂತಹ ಜೀವಿಗಳ ಮೇಲೆ ಭಗವದನುಗ್ರಹ ಪ್ರಾಪ್ತವಾಗುತ್ತದೆ ಅಂದರೆ ಅದು ನಮ್ಮ ಮಾನವ ಬುದ್ಧಿಯ ಅನುಭವದ ಅಳತೆಗೋಲಿನಿಂದಲ್ಲ. “ಸತ್ಯವನ್ನು ತಿಳಿಯುತ್ತಾನಲ್ಲ ಈ ಮನುಷ್ಯ’ ಎಂಬ ಪ್ರೀತಿಗಾಗಿ ಭಗವಂತನ ವಿಶೇಷ ಅನುಗ್ರಹವಿದು. ಅರ್ಜುನ ಒಬ್ಬ ಸುಜೀವಿಯಾದ ಕಾರಣ ತಾನು ಕೊಟ್ಟ ಜ್ಞಾನವನ್ನು ಅರಗಿಸಿಕೊಳ್ಳಲು ಕೃಷ್ಣ ಆತನಿಗೆ ವಿಶೇಷ ಜ್ಞಾನವನ್ನೂ ಕೊಡುತ್ತಾನೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811