ಹೇಗೆ ಒಂದೇ ದೇಹದಲ್ಲಿ ಕೌಮಾರ್ಯ, ಯೌವ್ವನ, ವಾರ್ಧಕ್ಯಗಳು ಬಂದರೂ ಆತ್ಮವು ಒಬ್ಬನೇ ಇದ್ದು ದೇಹ ಬದಲಾಗುತ್ತ ಹೋಗುತ್ತದೋ ಹಾಗೆಯೇ ದೇಹಾಂತರ ಪ್ರಾಪ್ತಿಯಲ್ಲೂ ಆತ್ಮ ಬೇರೆಯೇ ಆಗಿರುತ್ತದೆ. ಆದ್ದರಿಂದ ದೇಹ -ಆತ್ಮವು ಒಂದೇ ಅಲ್ಲ ಎಂದು ಶ್ರೀಕೃಷ್ಣ ಸಮರ್ಥನೆಯನ್ನು ಮೊದಲು ಮಾಡುತ್ತಾನೆ. ಈ ಮಾತಿಗೆ ಅಸ್ಮಾತ್ “ಶರೀರಾತ್ ಊಧ್ವ೯ ಅಮುಷಿನ್ ಸ್ವರ್ಗೇಲೋಕೇ….’ (ಈ ದೇಹದಿಂದ ಆತ್ಮ ಊಧ್ವ೯ಲೋಕಕ್ಕೆ ಹೋಗುತ್ತದೆ) ಎಂಬ ಶ್ರುತಿ ಪ್ರಮಾಣವೂ ಇದೆ. “ದೇಹ ನಮ್ಮೆದುರಿಗೇ ಸುಟ್ಟು ಹೋಗುತ್ತದೆ. ಹಾಗಿದ್ದರೆ ಆತ್ಮ -ದೇಹ ಬೇರೆ ಎಂದು ಶ್ರುತಿ ಹೇಳಿದೆ ಎಂದು ಏಕೆ ಒಪ್ಪಬೇಕು?’ ಎಂದು ಪ್ರಶ್ನೆ. ಶ್ರುತಿಯನ್ನು ಪ್ರಮಾಣದಿಂದ ಒಪ್ಪುವುದಿಲ್ಲವಾದರೆ, ಪ್ರತ್ಯಕ್ಷವನ್ನು ಹೇಗೆ ಪ್ರಮಾಣವೆಂದು ಹೇಗೆ ಒಪ್ಪಿಕೊಳ್ಳುತ್ತೀರಿ? ಪ್ರತ್ಯಕ್ಷದಲ್ಲಿಯೂ ಕೆಲವು ವೇಳೆ ಅಪ್ರಮಾಣವಾಗುವುದಿದೆ. ಆದರೂ ಪ್ರತ್ಯಕ್ಷ ಪ್ರಾಮಾಣ್ಯವನ್ನು ಒಪ್ಪುವುದಿಲ್ಲವೋ? ಹಾಗೆಯೇ ಆಗಮಾದಿಗಳಲ್ಲಿ ಕೆಲ ಆಕ್ಷೇಪಗಳು ಇದ್ದರೂ ಪ್ರಾಮಾಣ್ಯವನ್ನು ಒಪ್ಪಬೇಕು.
ಪುತ್ರಕಾಮೇಷ್ಟಿ ಯಾಗ ಮಾಡಿದರೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಎಂದಿದೆ. ಕೆಲವು ಕಡೆ ಆಗದೆ ಇರಬಹುದು. ಪ್ರಮಾಣವನ್ನು ನಿರಾಕರಿಸಲು ಕೇವಲ ಒಂದು ಆಕ್ಷೇಪವನ್ನು ಒಪ್ಪಿಕೊಳ್ಳಲಾಗದು. ಒಂದು ಸುಳ್ಳಾದರೆ ಎಲ್ಲವೂ ಅಪ್ರಮಾಣ ಎಂದು ಹೇಳಲಾಗದು. ಪ್ರತ್ಯಕ್ಷದಲ್ಲೂ ಒಂದು ತಪ್ಪಾದರೆ ಎಲ್ಲ ಪ್ರತ್ಯಕ್ಷವನ್ನು ಅಲ್ಲಗಳೆಯುತ್ತೀರಾ ಎಂಬ ಪ್ರತಿಪ್ರಶ್ನೆ ಬರುತ್ತದೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811