ಉಡುಪಿ: ಒಳ್ಳೆಯ ಕೆಲಸವನ್ನು ಮಾಡುವುದರ ಮೂಲಕ ಜನರ ಪ್ರೀತಿ ಗಳಿಸಿದ ವ್ಯಕ್ತಿಯ ಆತ್ಮವು ಅವರು ಗತಿಸಿದ ಅನಂತರ ದೇವರಪಾದ ಸೇರಿ ದೇವರು ಆ ಆತ್ಮವನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಜನರಲ್ಲಿದೆ. ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಆರ್. ಶೆಟ್ಟಿ ತಮ್ಮ ದುಡಿಮೆಯಲ್ಲಿ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವ ಮೂಲಕ ಸೇವೆ ಮಾಡಿದ್ದಾರೆ ಎಂದು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಜು. 29ರಂದು ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಆರ್.ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಹುಟ್ಟು ಸಾವಿನ ಮಧ್ಯೆ ಮಾಡಿದ ಸೇವೆಯಿಂದ ಕೀರ್ತಿ ಉಳಿಯಲಿದೆ ಎಂದು ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಅಶ್ವಿನಿ ಮಾಣಿಕ್ಯ ಒಡಹುಟ್ಟಿದವರಿಗಿಂತಲೂ ಒಡನಾಡಿಯವರೊಂದಿಗೆ ಹೇಗೆ ಬದುಕಬೇಕೆಂದು ಮಾನವ ಕುಲಕ್ಕೆ ತಿಳಿಸಿಕೊಟ್ಟವರು ಅಶ್ವಿನಿ. ಅವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ನಮ್ಮೆಲ್ಲರಲ್ಲಿ ಸಂಚಲನ ಮೂಡಿಸಿದ ಮಾಣಿಕ್ಯ ಎಂದು ಕನ್ನಡ ಉಪನ್ಯಾಸಕಿ ಸುಜಾತಾ ಶಿವಾನಂದ ಹೇಳಿದರು.
ತಾನು ಇರುವ ಸಮಾಜಕ್ಕೆ ಏನನ್ನಾದರೂ ನೀಡಬೇಕು ಎಂಬ ಹಂಬಲ ರಮಾನಂದ ಶೆಟ್ಟಿಯವರಲ್ಲಿ ಇತ್ತು ಎಂದು ವೈನ್ ಮರ್ಚಂಟ್ ಅಸೋಸಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿದರು. ಗುರುಗಳ ಮೇಲೆ ಅಪಾರ ಭಕ್ತಿ ಹೊಂದಿದ್ದ ಅವರಿಬ್ಬರೂ ಅಗಾಧ ಪ್ರತಿಭೆ ಹೊಂದಿದ್ದರು. ಇಬ್ಬರೂ ನನ್ನ ವಿದ್ಯಾರ್ಥಿಗಳಾಗಿದ್ದರು ಎಂದು ಆದಿಉಡುಪಿ ಹಿ.ಪ್ರಾ. ಶಾಲೆಯ ನಿವೃತ್ತ ಶಿಕ್ಷಕ ರಘುರಾಮ ಮಾಸ್ತರ್ ಅಭಿಪ್ರಾಯಪಟ್ಟರು.
ಭಾರತೀಯ ಸಂಸ್ಕೃತಿಯನ್ನು ಹೊಂದಿರುವ ಅಶ್ವಿನಿಯವರು ಸಂಘಟನ ಚತುರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು. ಅನನ್ಯ ಜೀವನ ನಡೆಸಿ ಸಾವಿನಲ್ಲೂ ಜತೆಯಾದ ಇಂಥವರು ಬಹಳ ವಿರಳ ಎಂದು ಯಕ್ಷಗಾನ ಪ್ರಸಂಗಕರ್ತ ಪವನ್ ಕುಮಾರ್ ಕೆರೆ ಹೇಳಿದರು.
ಲೀಲಾವತಿ ಶೆಟ್ಟಿ, ಗಂಗಾಧರ ಶೆಟ್ಟಿ, ಭಾಸ್ಕರ ಶೆಟ್ಟಿ, ಜಯಾನಂದ ಶೆಟ್ಟಿ, ಯಶೋದಾ ಶೆಟ್ಟಿ , ಶಾಂತಾ ಶೆಟ್ಟಿ, ರತ್ನಾಕರ ಶೆಟ್ಟಿ , ಸಂಜೀವ ಶೆಟ್ಟಿ, ವಿಟ್ಟಲ ಶೆಟ್ಟಿ, ಶ್ರೀಕಾಂತ್ ಉಡುಪಿಕಾರ್, ಮಕ್ಕಳಾದ ಅಂಶುಲಾ, ಅಭೀಕ್, ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ಪ್ರಮುಖರಾದ ಸುರೇಶ್ ಪೂಜಾರಿ, ಸತೀಶ್ ಕೋಟ್ಯಾನ್, ವಿಶ್ವನಾಥ ಬಿ. ಪಂದುಬೆಟ್ಟು, ಮನೋಹರ ಕಲ್ಮಾಡಿ, ಸತೀಶ್ ಪೂಜಾರಿ, ಹೇಮರಾಜ್ ಪೂಜಾರಿ, ಪ್ರಭಾಕರ ಶೆಟ್ಟಿ ಮತ್ತು ಕುಟುಂಬದ ಸದಸ್ಯರು, ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.
ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.