ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಶ್ರೀಕೃಷ್ಣಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ಫಲ ಕಾಣಿಕೆಯನ್ನು ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಮೂಲಕ ಸಚಿವರು ಸಮರ್ಪಿಸಿದರು.
ಸ್ಮರಣಿಕೆ, ಶಾಲಿನೊಂದಿಗೆ ಫಲ ಮಂತ್ರಾಕ್ಷತೆಯನ್ನು ನೀಡಿದ ಸ್ವಾಮೀಜಿಯವರು ಇನ್ನಷ್ಟು ದೇಶ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್, ತಹಶೀಲ್ದಾರ್ ಅರ್ಚನಾ ಭಟ್, ನಿರ್ಮಲಾ ಸೀತಾರಾಮನ್ ಅವರ ಸಮೀಪದ ಬಂಧು, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಕಾರ್ಯನಿರ್ವಹಣ ನಿರ್ದೇಶಕ ಲಕ್ಷ್ಮೀನಾರಾಯಣನ್, ಮಠದ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ
“ತಾಯಿ ಮೂಕಾಂಬಿಕೆಯ ಕೃಪೆಯಿಂದ ಸಚಿವ ಸ್ಥಾನ ಪ್ರಾಪ್ತಿ’
ಕೊಲ್ಲೂರು: ಬಾಲ್ಯದಿಂದಲೂ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಆಗಮಿಸಿ, ದರ್ಶನ ಪಡೆಯುವ ಪರಿಪಾಠ ಹೊಂದಿದ್ದೇನೆ. ತಾಯಿಯ ಸನ್ನಿಧಿಗೆ ಬಂದಾಗಲೆಲ್ಲ ಅತೀ ಹೆಚ್ಚು ಖುಷಿ ಮತ್ತು ಸಂತೃಪ್ತಿ ಲಭಿಸುತ್ತದೆ. ಭಕ್ತರ ಇಷ್ಟಾರ್ಥ ಪೂರೈಸುವ ಮಾತೃ ಹೃದಯಿ ಆಕೆ. ನಾವೆಲ್ಲ ನಿಮಿತ್ತ ಮಾತ್ರ. ಆಕೆಯ ಕೃಪೆಯಿಂದಲೇ ಕೇಂದ್ರ ವಿತ್ತ ಸಚಿವೆಯಾಗಿದ್ದೇನೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಮೇ 14ರ ಬೆಳಗ್ಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಋತ್ವಿಜರ ಮೂಲಕ ವಿಶೇಷ ಪೂಜೆ ಸಲ್ಲಿಸಿ, ದೇಗುಲದ ವ್ಯವಸ್ಥಾಪನ ಸಮಿತಿ ವತಿಯಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ದೇಗುಲದ ಶಿಖರ ಕಳಶದ ನಡುವಿನ ಅಂತರದಲ್ಲಿ ಮಳೆಗಾಲ ನೀರು ಸೋರುವ ಬಗ್ಗೆ ಗಮನ ಸೆಳೆದಾಗ ಪೂರಕ ಮಾಹಿತಿ, ಮನವಿ ಸಲ್ಲಿಸುವಂತೆ ಸೂಚಿಸಿದರು. ಕೇಂದ್ರದಲ್ಲಿ ಸಂಬಂಧಪಟ್ಟ ಇಲಾಖೆಯವರೊಡನೆ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು.
ದೇಗುಲದ ಹಿರಿಯ ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗ ಮತ್ತು ಎನ್. ಪರಮೇಶ್ವರ ಅಡಿಗ ಅವರ ನೇತೃತ್ವದಲ್ಲಿ ಸಚಿವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಸಚಿವೆಯವರು ಮೂಕಾಂಬಿಕೆ, ಆದಿಶಂಕರಾಚಾರ್ಯ ಮತ್ತು ಶ್ರೀ ವೀರಭದ್ರ ಸನ್ನಿ ಧಿಗೆ ಭೇಟಿ ನೀಡಿ, ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ದೇಗುಲದ ಕಾರ್ಯನಿರ್ವಹಣಾ ಧಿಕಾರಿ ಮಹೇಶ, ತಹಶೀಲ್ದಾರ್ ಶೋಭಾಲಕ್ಷ್ಮೀ, ನಿರ್ಮಲಾ ಸೀತಾರಾಮನ್ ಅವರ ಸಂಬಂ ಧಿ ಲಕ್ಷ್ಮೀ ನಾರಾಯಣನ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ ಕೆರಾಡಿ, ಮಾಜಿ ಅಧ್ಯಕ್ಷ ಹರೀಶ ಕುಮಾರ್ ಶೆಟ್ಟಿ, ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ, ರತ್ನಾ ಆರ್. ಕುಂದರ್, ಸಂಧ್ಯಾ ರಮೇಶ, ಉದ್ಯಮಿ ಕೃಷ್ಣಮೂರ್ತಿ ಮಂಜರು ಉಪಸ್ಥಿತರಿದ್ದರು.
ಮೂಕಾಂಬಿಕೆಯ ಸನ್ನಿಧಾನದಲ್ಲಿ ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗ ಅವರು ನಿರ್ಮಲಾ ಸೀತಾರಾಮನ್ ಅವರನ್ನು ಸಂಕಲ್ಪ ಮತ್ತು ಪ್ರಾರ್ಥನೆಗಾಗಿ ವಿನಂತಿಸಿದಾಗ ದೇಶದ ಸುಭಿಕ್ಷೆ ಮತ್ತು ಅಭಿವೃದ್ಧಿಯನ್ನು ಕರುಣಿಸುವಂತೆ ಪ್ರಾರ್ಥಿಸಿದರು.
ದೇಗುಲ ಭೇಟಿಯ ಬಳಿಕ ಕಂಚಿ ಕಾಮಕೋಟಿ ಮಠದ ಜಯೇಂದ್ರ ಸರಸ್ವತಿ ವೇದ ಪಾಠಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕುಶಲೋಪರಿ ನಡೆಸಿದರು. ದೇಗುಲದ ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗರ ಮನೆಗೆ ಭೇಟಿ ನೀಡಿದ ಸಚಿವೆ ತಮ್ಮ ಹಿಂದಿನ ದಿನಗಳ ನಾರ್ಸಿ ಕುಟುಂಬದ ಒಡನಾಟ ಸ್ಮರಿಸಿಕೊಂಡರು.