Advertisement

Udupi FCI: ಉಡುಪಿ ಎಫ್ ಸಿಐನಲ್ಲಿದೆ 11 ಸಾವಿರ ಮೆಟ್ರಿಕ್ ಟನ್‌ ಅಕ್ಕಿ

04:37 PM Aug 10, 2023 | Team Udayavani |

ಉಡುಪಿ: ಪೆರಂಪಳ್ಳಿಯಲ್ಲಿರುವ ಕೇಂದ್ರ ಆಹಾರ ನಿಗಮ (ಫುಡ್‌ ಕಾರ್ಪೋರೇಶನ್‌ ಆಫ್ ಇಂಡಿಯ-ಎಫ್ ಸಿಐ) ಉಡುಪಿ ಘಟಕದ ಗೋದಾಮಿನಲ್ಲಿ 11 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ಸಂಗ್ರಹವಿದೆ. ಉಡುಪಿಯ ಪೆರಂಪಳ್ಳಿಯಲ್ಲಿ ಕೇಂದ್ರ ಆಹಾರ
ನಿಗಮದ ಘಟಕ ಕಾರ್ಯಾಚರಿಸುತ್ತಿದ್ದು, ಶಿವಮೊಗ್ಗ ವಿಭಾಗೀಯ ಕಚೇರಿಯಡಿ 1998ರಲ್ಲಿ ಉಡುಪಿಯಲ್ಲಿ ನಿಗಮದ ಘಟಕ ಸ್ಥಾಪನೆಯಾಗಿದೆ. ಪ್ರಸ್ತುತ 10 ಎಕ್ರೆ ವಿಶಾಲ ಜಾಗದಲ್ಲಿ ಎರಡು ಬೃಹತ್‌ ಗೋದಾಮು ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ
ತಲಾ 6155 ಮೆ. ಟನ್‌ ಅಕ್ಕಿಯನ್ನು ಸಂಗ್ರಹಿಸುವ ಸಾಮರ್ಥ್ಯವಿದೆ. ಇಲ್ಲಿ 35ರಿಂದ 40 ಮಂದಿ ಹೊರಗುತ್ತಿಗೆ ಆದಾರದಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಾರೆ.

Advertisement

ಪ್ರತೀ ತಿಂಗಳು ಅಕ್ಕಿ ಪೂರೈಕೆ, ವಿತರಣೆ ಪ್ರಕ್ರಿಯೆ ನಡೆಯುತ್ತದೆ. ಎರಡು ಗೋದಾಮುಗಳಲ್ಲಿ ಅಪಾರ ಪ್ರಮಾಣದಲ್ಲಿ ಅಕ್ಕಿ ಮೂಟೆಗಳನ್ನು ಸಂಗ್ರಹಿಸಿಡಲಾಗಿದೆ. ಜಿಲ್ಲೆಯ ಜನರಿಗೂ ರಾಜ್ಯ ಸರಕಾರ ಆಹಾರ ಇಲಾಖೆ ಸಂಯೋಜನೆಯೊಂದಿಗೆ ಇಲ್ಲಿಂದ ಅಕ್ಕಿ ಪೂರೈಕೆಯಾಗುತ್ತದೆ. ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯ್ದೆ ಮಾರ್ಗಸೂಚಿ ಪ್ರಕಾರ ನಿಗಮದಲ್ಲಿ ಮೂರು ತಿಂಗಳವರೆಗೆ ಬೇಕಾಗುವಷ್ಟು ಶೇ.80 ಆಹಾರ ಧಾನ್ಯ ಸಂಗ್ರಹವಿರಬೇಕು. ಪ್ರಾಕೃತಿಕ ವಿಕೋಪ, ಕೋವಿಡ್‌ ನಂತ ಆರೋಗ್ಯ ತುರ್ತು ಪರಿಸ್ಥಿತಿ ವೇಳೆ ಜನರಿಗೆ ಆಹಾರ ಧಾನ್ಯ ಒದಗಿಸುವುದು ನಿಗಮದ ಪ್ರಮುಖ ಕರ್ತವ್ಯವಾಗಿದೆ. ಅದರಂತೆ ತುರ್ತು ಸಮಯದಲ್ಲಿ ಬಳಕೆಗೂ ಇಂತಿಷ್ಟು ಪ್ರಮಾಣದ ಅಕ್ಕಿ ದಾಸ್ತಾನು ಇರಬೇಕು ಎಂಬ ನಿಯಮವಿದೆ. ಮಾರುಕಟ್ಟೆಯಲ್ಲಿ
ಅಕ್ಕಿ ದರ ಏರಿಕೆಯಾದರೆ ಬೆಲೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಖಾಸಗಿ ಟೆಂಡರ್‌ ಮೂಲಕ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಕ್ರಿಯೆ ನಿಗಮದ ವತಿಯಿಂದ ನಡೆಯುತ್ತದೆ.

ತಿಂಗಳಿಗೆ 5 ಸಾವಿರ ಮೆಟ್ರಿಕ್ ಟನ್‌ ವಿತರಣೆ
ಉಡುಪಿ ಜಿಲ್ಲೆಗೆ ಪ್ರತೀ ತಿಂಗಳು 5 ಸಾವಿರ ಮೆ. ಟನ್‌. ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ರಾಜ್ಯ ಆಹಾರ ಇಲಾಖೆಯ ಗೋದಾಮಿಗೆ ಇಲ್ಲಿಂದ ಎಷ್ಟು ಪ್ರಮಾಣದಲ್ಲಿ ಹಂಚಿಕೆಯಾಗಬೇಕು ಎಂಬ ವರದಿ ಮೇರೆಗೆ ಇಂತಿಷ್ಟು ಪ್ರಮಾಣದಲ್ಲಿ‌ ಕುಂದಾಪುರ, ಕಾರ್ಕಳ, ಉಡುಪಿ, ಕಾಪು, ಬ್ರಹ್ಮಾವರ, ಬೈಂದೂರು ಗೋದಾಮುಗಳಿಗೆ ಅಕ್ಕಿ ಪೂರೈಕೆಯಾಗುತ್ತದೆ. ಈ ಗೋದಾಮಿನಿಂದ ಗ್ರಾಮಗಳಲ್ಲಿರುವ ಸೊಸೈಟಿ ಮೂಲಕ ಅಕ್ಕಿ ತಲುಪಿ ಸಾರ್ವಜನಿಕರಿಗೆ ಅಕ್ಕಿ ವಿತರಣೆಯಾಗುತ್ತದೆ.

ಹೊರರಾಜ್ಯದಿಂದ ಅಕ್ಕಿ ಪೂರೈಕೆ
ಉಡುಪಿ ಆಹಾರ ನಿಗಮದ ಗೋದಾಮಿಗೆ ಗರಿಷ್ಠ ಪ್ರಮಾಣದಲ್ಲಿ ತೆಲಂಗಾಣ, ಆಂದ್ರ ಪ್ರದೇಶದಿಂದ ಅಕ್ಕಿ ಪೂರೈಕೆಯಾಗುತ್ತಿದೆ.
ಅಲ್ಲದೆ ಈ ಭಾಗದಿಂದ ಪೂರೈಕೆ ಕಡಿಮೆಯಾದಲ್ಲಿ ಹರಿಯಾಣ, ಮಧ್ಯಪ್ರದೇಶ, ಪಂಜಾಬ್‌ನಿಂದಲೂ ಅಕ್ಕಿ ಪೂರೈಕೆಯಾಗುತ್ತದೆ. ಹೊರ ರಾಜ್ಯದಿಂದ ಗೂಡ್ಸ್‌ ರೈಲಿನಲ್ಲಿ ಜಿಲ್ಲೆಗೆ ತಲುಪಿ ಅಲ್ಲಿಂದ ಟ್ರಕ್‌, ಲಾರಿ ಮೂಲಕ ಪೆರಂಪಳ್ಳಿಯಲ್ಲಿರುವ ಆಹಾರ ನಿಗಮದ ಗೋದಾಮಿಗೆ ತಲುಪುತ್ತದೆ.

ನಿಗಮದ ಗೋದಾಮಿನಲ್ಲಿ ಪೂರೈಕೆ, ಬೇಡಿಕೆ ಅನುಗುಣವಾಗಿ ಮುಂದಿನ ಮೂರು ತಿಂಗಳವರೆಗೆ ಪೂರೈಕೆ ಮಾಡುವಷ್ಟು
ಆಹಾರ ಧಾನ್ಯ ದಾಸ್ತಾನು ಇರಬೇಕು. ಪ್ರಸ್ತುತ ಉಡುಪಿ ಗೋದಾಮಿನಲ್ಲಿ 11 ಸಾವಿರ ಮೆ. ಟನ್‌ ಅಕ್ಕಿ ಸಂಗ್ರಹವಿದ್ದು, ಉಡುಪಿಯಲ್ಲಿರುವ ಕೇಂದ್ರದ ನಿಗಮದಿಂದ ರಾಜ್ಯ ಸರಕಾರದ ಆಹಾರ ನಿಗಮಕ್ಕೆ ಪ್ರತೀ ತಿಂಗಳು 5 ಸಾವಿರ ಮೆ. ಟನ್‌ ಅಕ್ಕಿ ಪೂರೈಸಲಾಗುತ್ತದೆ.
ನಿಶಾಂತ್‌ ವೈ. ಎನ್‌., ಡಿಪೋ ವ್ಯವಸ್ಥಾಪಕ,
ಕೇಂದ್ರ ಆಹಾರ ನಿಗಮ, ಉಡುಪಿ

Advertisement

*ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next