Advertisement

Udupi: ಈ ರಸ್ತೆಯಲ್ಲಿ ಹೋಗಲು ವಾಹನಗಳಿಗೂ ಭಯ!

03:01 PM Dec 08, 2024 | Team Udayavani |

ಉಡುಪಿ: ಉಡುಪಿ – ಮೂಡುಬೆಳ್ಳೆ – ಕಾರ್ಕಳ ರಾಜ್ಯ ಹೆದ್ದಾರಿಯ ನಡುವೆ ಸಿಗುವ ರಾಂಪುರ – ನಡು ಅಲೆವೂರು ಭಾಗದ ಸರಿಸುಮಾರು 2 ಕಿ.ಮೀ. ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರವೇ ದುಸ್ತರವಾಗಿ ಪರಿಣಮಿಸಿದೆ. ವರ್ಷಕ್ಕೂ ಅಧಿಕ ಕಾಲ ಇಲ್ಲಿನ ಸ್ಥಿತಿ ಹೀಗೆಯೇ ಇದ್ದರೂ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅಲೆವೂರು ಭಾಗದಲ್ಲಿ ಒಂದು ಸರಕಾರಿ ಶಾಲೆ ಹಾಗೂ ರಾಂಪುರ ಭಾಗದಲ್ಲಿ 2 ಖಾಸಗಿ ಶಾಲೆಗಳಿದ್ದು, ಹಲವಾರು ವಿದ್ಯಾರ್ಥಿಗಳನ್ನು ಕರೆದೊಯ್ಯುವ ಶಾಲಾ ವಾಹನಗಳು ದಿನನಿತ್ಯ ಈ ಮಾರ್ಗದಲ್ಲಿಯೇ ಸಂಚರಿಸುತ್ತವೆ. ಒಂದೆಡೆ ರಸ್ತೆಗಳು ಹದಗೆಟ್ಟಿದ್ದರೆ ಮೊತ್ತೂಂದೆಡೆ ಸಂಪುರ್ಣ ಧೂಳು ಆವರಿಸಿದ ಕಾರಣ ಇಲ್ಲಿ ಮುಖಮುಚ್ಚಿಕೊಂಡು ಹೋಗಬೇಕಾದಂತಹ ಸ್ಥಿತಿ ಎದುರಾಗಿದೆ.

ವಾಹನ ಸವಾರರ ಪರದಾಟ
ದಿನನಿತ್ಯ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಪಾಡು ಅಯೋಮಯವಾಗಿದೆ. ಹೊಂಡದಿಂದಾಗಿ ಈಗಾಗಲೇ ಇಲ್ಲಿ ಹಲವಾರು ಮಂದಿ ಬಿದ್ದು ಏಟು ಮಾಡಿಕೊಂಡ ಘಟನೆಯೂ ನಡೆದಿದೆ. ಆಟೋರಿಕ್ಷಾ ಸಹಿತ ಕಾರುಗಳು ಕೂಡ ಇಲ್ಲಿ ನಿಧಾನವಾಗಿ ಹೋಗುವಂತಾಗಿದೆ.

ಹಲವು ಬಾರಿ ತೇಪೆ
ಮೂಡುಬೆಳ್ಳೆಯಿಂದ ದೆಂದೂರುಕಟ್ಟೆಯ ರಸ್ತೆಯ ಸ್ಥಿತಿಯೇನೋ ಉತ್ತಮವಾಗಿದೆ. ಆದರೆ ರಾಂಪುರದಿಂದ ನಡು ಅಲೆವೂರು ರಸ್ತೆಯ ಅವ್ಯವಸ್ಥೆಯಿಂದಾಗಿ ಜನರು ದಿನನಿತ್ಯ ಇಲ್ಲಿ ಹಿಡಿಶಾಪ ಹಾಕುವಂತಾಗಿದೆ. ಈ ಬಗ್ಗೆ ಪಂಚಾಯತ್‌ ಸಹಿತ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. 2-3 ವರ್ಷಗಳಿಂದಲೂ ಈ ಭಾಗಕ್ಕೆ ತೇಪೆಕಾರ್ಯ ಹಾಕಲಾಗುತ್ತಿದ್ದರೂ ಅದು ಕೆಲವೇ ದಿನಗಳ ಅಂತರದಲ್ಲಿ ಮತ್ತೆ ಹೊಂಡಮಯವಾಗುತ್ತಿದೆ. ಹೊಂಡಗಳಿಗೆ ತೇಪೆ ಹಾಕುವುದನ್ನು ಬಿಟ್ಟು ಶಾಶ್ವತ ಡಾಮರು ಹಾಕಬೇಕು ಎನ್ನುತ್ತಾರೆ ಪ್ರದ್ಯುಮ್ನ ಅಲೆವೂರು.

ಧೂಳುಮಯ ರಸ್ತೆ
ಈ ನಡುವೆ ರಸ್ತೆಯ ಇಕ್ಕೆಲಗಳಲ್ಲಿ ವಾರಾಹಿ ಯೋಜನೆಗಾಗಿ ಪೈಪ್‌ಲೈನ್‌ಗಳನ್ನು ತಂದಿರಿಸಲಾಗಿದ್ದು, ಒಂದೆಡೆ 100 ಮೀ.ಹೊಂಡ ಮಾಡಿ ಇಡಲಾಗಿದೆ. ಪೈಪ್‌ಗ್ಳನ್ನು ಹಲವು ಸಮಯಗಳಿಂದ ಇಲ್ಲಿಯೇ ಇಟ್ಟಿರುವ ಕಾರಣ ಸಂಪೂರ್ಣ ಧೂಳಿನಿಂದ ಆವೃತವಾಗಿದೆ. ವಾಹನ ಸವಾರರು ಅಷ್ಟೇ ಅಲ್ಲದೆ ಪಾದಚಾರಿಗಳಿಗೂ ಧೂಳಿನಿಂದಾಗಿ ಇಲ್ಲಿ ನಡೆದಾಡಲೂ ಕಷ್ಟಕರವಾಗುತ್ತಿದೆ. ಡಾಮಾರು ಸಂಪುರ್ಣ ಎದ್ದು ಹೋಗಿದ್ದು, ಅಡಿಭಾಗದ ಕಲ್ಲುಗಳು ಎದ್ದು ಕಾಣುತ್ತಿವೆ. ಈ ರಸ್ತೆಯ ಅರ್ಧ ಭಾಗ ಕಾಪು ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಮತ್ತೆ ಅರ್ಧ ಭಾಗ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಾರಣ ಶಾಸಕದ್ವಯರು ಈ ಬಗ್ಗೆ ಅನುದಾನ ಮೀಸಲಿರಿಸಿ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಸೂಕ್ತ ಕ್ರಮ
ನಡು ಅಲೆವೂರು- ರಾಂಪುರ ರಸ್ತೆ ಹದಗೆಟ್ಟಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಈಗಾಗಲೇ ಕೆಡಿಪಿ ಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದೇನೆ. ರಸ್ತೆ ದುರಸ್ತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next