ಉಡುಪಿ: ಆರ್ಥಿಕ ಅಭಿವೃದ್ಧಿ ಎಲ್ಲರ ಆದ್ಯತೆಯಾಗಬೇಕು. ದೇಶ ಆರ್ಥಿಕತೆಯಲ್ಲಿ ಬಹಳಷ್ಟು ಅಭಿವೃದ್ಧಿ ಸಾಧಿಸುತ್ತಿದೆ. ವಿವಿಧ ತಂತ್ರಜ್ಞಾನಗಳ ಮೂಲಕ ಆರ್ಥಿಕ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ಸಹಕಾರ ಕ್ಷೇತ್ರಗಳಲ್ಲೂ ಯುಪಿಐ ಮೂಲಕ ಹಲವಾರು ರೀತಿಯ ವ್ಯವಹಾರಗಳು ನಡೆದು ಜನರಿಗೆ ಮತ್ತಷ್ಟು ಅನುಕೂಲವಾಗುತ್ತಿದೆ. 2047ರಲ್ಲಿ ರಾಷ್ಟ್ರ ಮತ್ತಷ್ಟು ಅಭಿವೃದ್ಧಿ ಸಾಧಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಕೃತಕ ಬುದ್ಧಿಮತ್ತೆಯಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಕ್ರಾಂತಿ ಉಂಟಾಗಲಿದೆ. ಸುಸ್ಥಿರ ಅಭಿವೃದ್ಧಿಗೆ ಇದರ ಕೊಡುಗೆಯೂ ಅಪಾರ ಎಂದು ಕೇಂದ್ರದ ಮಾಜಿ ಸಚಿವ ಮತ್ತು ರಾಷ್ಟ್ರೀಯ ಹೊಸ ಸಹಕಾರಿ ನೀತಿಯ ಅಧ್ಯಕ್ಷ ಸುರೇಶ್ ಪ್ರಭು ಹೇಳಿದರು.
ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಜರಗಿದ ಸಂವಾದದಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ನೇರ ತೆರಿಗೆಯಾಗಿದೆ. ಆದಾಯ ತೆರಿಗೆ ಮೂಲಕ ಎಲ್ಲ ಸರಕಾರಿ ಅಧಿಕಾರಿಗಳು ಸಹಿತ ಮೂಲ ಸೌಕರ್ಯಗಳು ನಡೆಯುತ್ತಿವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನ ಬಹಳಷ್ಟು ಪ್ರಾಮುಖ್ಯ ಪಡೆದುಕೊಂಡಿದೆ. ಸಹಕಾರ
ಸಂಸ್ಥೆಗಳು ಗ್ರಾಮಾಂತರ ಭಾಗದಲ್ಲಿ ಮತ್ತಷ್ಟು ಸೇವೆ ನೀಡಲು ಯುಪಿಐಗಳ ಪಾತ್ರ ಮಹತ್ತರವಾಗಿದೆ ಎಂದರು.
ಯುವಜನತೆ ಸ್ಟಾರ್ಟಪ್ ಮಾಡಲು ಬಹಳಷ್ಟು ಅವಕಾಶವಿದೆ. ಗುಜರಾತ್‌ನ ಎಲ್ಲ ಜಿಲ್ಲೆಗಳಲ್ಲಿ ಬಹಳಷ್ಟು ಮಂದಿ ಸ್ಟಾರ್ಟಪ್‌ಗ್ಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ವಿವಿ, ಶಾಲೆಗಳಲ್ಲಿ ಇನ್‌ಕ್ಯುಬೇಷನ್ ಸೆಂಟರ್‌ಗಳು ಆರಂಭಗೊಂಡಿವೆ. ಮೀನುಗಾರರ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
ಉಡುಪಿ ಸಹಿತ ಕರಾವಳಿ ಜಿಲ್ಲೆಯ ಹಲವಾರು ರಾಷ್ಟ್ರೀಕೃತ ಬ್ಯಾಂಕ್‌ಗಳಿವೆ. ಭವಿಷ್ಯದಲ್ಲಿ ಕೈಗಾರಿಕೆಗಿಂತಲೂ ಪ್ರವಾಸೋದ್ಯಮ ಸಹಿತ ಇತರ ಕ್ಷೇತ್ರಗಳಲ್ಲಿ ಉದ್ಯೋಗಾ ವಕಾಶ ಹೆಚ್ಚಳವಾಗಲಿದೆ. ಆರ್ಥಿಕತೆ ಬೇರೆ ಬೇರೆ ರೀತಿಯಲ್ಲಿ ವಿಭಿನ್ನವಾಗಿ ನಡೆಯುತ್ತಿದೆ. ಮೈಕ್ರೋಸಾಫ್ಟ್, ಅಮೆಜಾನ್, ಇನ್ಫೋಸಿಸ್‌ಗಳ ಅಭಿವೃದ್ಧಿ ಸಾಧನೆಗಳು ಅಪಾರವಾಗಿದೆ. ಕೈಗಾರಿಕೆಗಳ ಉದ್ದೇಶ ತಿಳಿಯಬೇಕು. ಸರ್ವಿಸ್ ಕ್ಷೇತ್ರ ಹಾಗೂ ಕೈಗಾರಿಕೆ ಕ್ಷೇತ್ರದಲ್ಲಿ ಎಲ್ಲಿ ಉದ್ಯೋಗಾವಕಾಶ ಅಧಿಕವಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ಅಧ್ಯಕ್ಷ, ಶಾಸಕ ಯಶ್‌ಪಾಲ್ ಎ.ಸುವರ್ಣ, ಬ್ಯಾಂಕಿಂಗ್ ಕ್ಷೇತ್ರದ ಗಣ್ಯರು, ನ್ಯಾಯವಾದಿಗಳು, ಕೈಗಾರಿ ಕೋದ್ಯಮಿಗಳು, ಸಹಕಾರ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.
ಸಹಕಾರಿ ನೀತಿ ವರದಿ ಸಲ್ಲಿಕೆ
ರಾಷ್ಟ್ರೀಯ ಹೊಸ ಸಹಕಾರಿ ನೀತಿಯ ವರದಿಯನ್ನು ಈಗಾಗಲೇ ಕೇಂದ್ರ ಸರಕಾರಕ್ಕೆ ಒಪ್ಪಿಸಿದ್ದೇವೆ. ಕೇಂದ್ರ ಸರಕಾರ ಯಾವಾಗ ಬೇಕಾದರೂ ಇದರ ಘೋಷಣೆ ಮಾಡಬಹುದು. ಹೊಸ ನೀತಿಯಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ ನೀಡಿದ್ದೇವೆ. ಯಾವುದೇ ಸಹಕಾರಿ ಸಂಸ್ಥೆಯು ಜಗತ್ತಿನ ತಂತ್ರಜ್ಞಾನದ ಸೌಲಭ್ಯವನ್ನು ಸುಲಭವಾಗಿ ಪಡೆಯುವಂತೆ ಆಗಬೇಕು.
ಕರ್ನಾಟಕದ ಮಾದರಿಯಲ್ಲಿ ಸಹಕಾರಿ ಕ್ಷೇತ್ರವು ಸ್ವಾಯತ್ತವಾಗಿ ಬೆಳೆಯಬೇಕು. ಮಾತ್ರವಲ್ಲದೇ ತೀರಾ ಅಗತ್ಯ ಎದುರಾದಾಗ ಮಾತ್ರ ಸರಕಾರ ಮಧ್ಯಪ್ರವೇಶ ಮಾಡಬೇಕು. ಸಹಕಾರಿ ವಲಯದ ಲಾಭ ಕೆಲವೇ ಕೆಲವರಿಗೆ ಆಗಬಾರದು. ಅದು ಸಮಾಜಕ್ಕೆ ಆಗಬೇಕು ಎಂಬ ನೆಲೆಯಲ್ಲಿ ಕೆಲವು ಶಿಫಾರಸು ಮಾಡಿದ್ದೇವೆ ಎಂದು ಸುರೇಶ್ ಪ್ರಭು ತಿಳಿಸಿದ್ದಾರೆ.