Advertisement

Udupi: ಗ್ರಾಮ ಪಂಚಾಯತ್ ನೌಕರರ ಕಷ್ಟ ಕೇಳ್ಳೋರಿಲ್ಲ !

03:22 PM Oct 06, 2024 | Team Udayavani |

ಉಡುಪಿ: ಊರಿನ ಎಲ್ಲ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಗ್ರಾಮ ಪಂಚಾಯತ್‌ ನೌಕರರು ಮಾತ್ರ ಅಸಹಾಯಕರಾಗಿದ್ದಾರೆ. ಗ್ರಾಮಾಡಳಿತದ ಅಸ್ತಿವಾರವಾಗಿರುವ ಪಂಚಾಯತ್‌ ಸಿಬಂದಿ ಕೆಲಸದ ಒತ್ತಡ, ಕನಿಷ್ಠ ವೇತನ ಸೇರಿದಂತೆ ಹಲವು ಸಂಕಷ್ಟಗಳಿಗೆ ಸಿಲುಕಿದ್ದಾರೆ. ಇದದ ಬಗ್ಗೆ ಸರಕಾರದ ಗಮನ ಸೆಳೆಯಲು ಅಕ್ಟೋಬರ್‌ 4ರಿಂದ ಮುಷ್ಕರ ನಡೆಸುತ್ತಿದ್ದರೂ ಸರಕಾರ ಅವರ ನೋವಿಗೆ ಸ್ಪಂದಿಸಿಲ್ಲ.

Advertisement

ಎಲ್ಲ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಪಂಚಾಯತ್‌ಗಳು ಸಿಬಂದಿ ಕೊರತೆಯಿಂದ ನಲುಗಿವೆ. ಮೂಲ ಸೌಕರ್ಯಗಳೂ ಇಲ್ಲ, ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸದ ಒತ್ತಡಕ್ಕೆ ಒಳಗಾಗಿದ್ದಾರೆ. ಕನಿಷ್ಠ ವೇತನ, ಸಿಬಂದಿ ನೇಮಕ ಸೇರಿದಂತೆ ತಮ್ಮ ಬೇಡಿಕೆ ಈಡೇರಿಸಲು ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು, ಸಚಿವರಿಗೆ ಮನವಿ ಸಲ್ಲಿಸುತ್ತಿದ್ದರೂ ಇದೂವರೆಗೆ ಯಾವುದೇ ಸರಕಾರ ತಮ್ಮ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎನ್ನುವುದು ಗ್ರಾ. ಪಂ. ನೌಕರರ ಅಳಲು.

ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಪಂಚಾಯತ್‌ರಾಜ್‌ ವ್ಯವಸ್ಥೆಯಡಿ ಇರುವ ಎಲ್ಲ ನೌಕರರು ಅ. 3ರಿಂದ ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆ ಬೇರೆ ಬೇರೆ ಸಂಘಟನೆಗಳ ಮೂಲಕ ಪ್ರತಿಭಟನೆ, ಮನವಿ ಸಲ್ಲಿಸುತ್ತಿದ್ದ ಇವರು ಇದೀಗ ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ, ಪಂಚ ನೌಕರರಾದ ವಾಟರ್‌ವೆುನ್‌, ಬಿಲ್‌ ಕಲೆಕ್ಟರ್‌, ಅಟೆಂಡರ್‌, ಡಾಟ ಎಂಟ್ರಿ ಆಪರೇಟರ್‌, ಸ್ವತ್ಛತ ಸಿಬಂದಿ ಸಹಿತ 11 ವೃಂದ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ನಡೆಯುತ್ತಿದ್ದು, ನೌಕರರು ಪಂಚಾಯತ್‌ ಮಟ್ಟದಲ್ಲಿ ಕೆಲಸ ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಇಡೀ ಗ್ರಾಮ ಪಂಚಾಯತ್‌ ಸೇವೆಗಳು ಅಸ್ತವ್ಯಸ್ತವಾಗಿವೆ.

ನೌಕರರಿಗೆ ಏನೇನು ಸಮಸ್ಯೆ?

  • 1993ರ ಪಂಚಾಯತ್‌ರಾಜ್‌ ಕಾಯ್ದೆ ಪ್ರಕಾರ ಗ್ರಾ.ಪಂ.ಗೆ ನಿಗದಿಪಡಿಸಲಾದ ಜನಸಂಖ್ಯೆ 2-3 ಪಟ್ಟು ಹೆಚ್ಚಳವಾಗಿದೆ. ಆದರೆ, ಸಿಬ್ಬಂದಿ ಸಂಖ್ಯೆ ಹೆಚ್ಚಾಗಿಲ್ಲ.
  • ಮೂರು ವರ್ಷಗಳಿಂದ ಖಾಲಿಯಾದ ಹುದ್ದೆಗೆ ನೇಮಕಾತಿ ನಡೆದಿಲ್ಲ. ನ್‌ಆರ್‌ಇಜಿಯಂಥ ಸಾವಿರಾರು ಕೋ. ರೂ. ಅನುದಾನ ಬರುವ ಮಹತ್ವದ ಯೋಜನೆ ಸಮರ್ಥವಾಗಿ ನಿರ್ವಹಿಸಲೂ ಸಿಬ್ಬಂದಿ ನೇಮಿಸಿಲ್ಲ.
  • ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ ಅವರಿಗೆ ಬಡ್ತಿ ಇಲ್ಲದೆ ಜೀವನ ಪರ್ಯಾಂತ ಒಂದೆ ಹುದ್ದೆಯಲ್ಲಿ ಕೆಲಸ ಮಾಡುವಂತಾಗಿದೆ.
  • ಹೇಳಿಕೊಳ್ಳಲು ಗ್ರಾ.ಪಂ. ಕೆಲಸ ಇದೆ ಎಂದರೂ ಇವರಿಗೆ ಬರುವ ಸಂಬಳ ಚಿಕ್ಕಾಸು. ವಾಟರ್‌ವೆುನ್‌, ಬಿಲ್‌ಕಲೆಕ್ಟರ್‌, ಡಾಟಾ ಎಂಟ್ರಿ ಆಪರೇಟರ್‌, ಸ್ವತ್ಛತಾ ಸಿಬಂದಿ ಅತ್ತ ಸರಕಾರಿ ನೌಕರರು ಆಗದೆ ಇತ್ತ ಹೊರಗುತ್ತಿಗೆ ನೌಕರರು ಆಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಪಿಎಫ್, ಇಎಸ್‌ಐ ಸೌಲಭ್ಯವೂ ಇಲ್ಲ.

ಒತ್ತಡ ಕಡಿಮೆ ಮಾಡಬೇಕು
ಪಿಡಿಒ, ಕಾರ್ಯದರ್ಶಿ ಸಹಿತ ಗ್ರಾ.ಪಂ. ನೌಕರರ ಎಲ್ಲ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಿ, ಪರಿಹಾರ ನೀಡುವ ಕೆಲಸ ಮಾಡಬೇಕು. ಅನಿರ್ದಿಷ್ಟಾವಧಿ ಹೋರಾಟಕ್ಕಾದರೂ ಸ್ಪಂದಿಸಿ ಸಿಬಂದಿ ನೇಮಕ ಮಾಡಬೇಕು. ಒತ್ತಡ ಕಡಿಮೆ ಮಾಡಬೇಕು.
-ಮಂಜುನಾಥ್‌ ಶೆಟ್ಟಿ , ಪಿಡಿಒ ಕ್ಷೇಮಾಭಿವೃದ್ಧಿ ರಾಜ್ಯ ಸಂಘದ ವಿಭಾಗೀಯ ಕಾರ್ಯಾಧ್ಯಕ್ಷ

Advertisement

ಜನಪ್ರತಿನಿಧಿಗಳ ಜತೆ ತಿಕ್ಕಾಟ
ಸರಕಾರ ದಿನಕ್ಕೊಂದು ಹೊಸ ಯೋಜನೆ ಆದೇಶ ಹೊರಡಿಸುತ್ತದೆ. ಇರುವ ಸಿಬ್ಬಂದಿಯೇ ಅದನ್ನು ನಿಭಾಯಿಸಬೇಕು. ಸಿಬ್ಬಂದಿ ಇಲ್ಲ ಎಂದರೆ ಕೇಳುವವರು ಯಾರೂ ಇಲ್ಲ. ಕೆಲಸ ಆಗದೆ ಇದ್ದರೆ ಜನಪ್ರತಿನಿಧಿಗಳ ಆಕ್ರೋಶಕ್ಕೆ ಗುರಿಯಾಗಬೇಕು!

ಮುಷ್ಕರದಿಂದ ಹಲವು ಸೇವೆ ವ್ಯತ್ಯಯ
ಕೆಲವು ದಿನಗಳ ಹಿಂದೆ ವಿಎಗಳ ಪ್ರತಿಭಟನೆಯಿಂದ ಆಡಳಿತ ಹಳಿ ತಪ್ಪಿತ್ತು. ಈಗ ಗ್ರಾ.ಪಂ. ನೌಕರರ ಮುಷ್ಕರದಿಂದ ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆ, 9-11 ಖಾತೆ ಸೇವೆ, ಕಟ್ಟಡ ಲೈಸೆನ್ಸ್‌, ನಿಧನ ಪ್ರಮಾಣ ಪತ್ರ, ಉದ್ದಿಮೆ ಪರವಾನಿಗೆ ಪತ್ರ, ಉದ್ಯೋಗ ಖಾತ್ರಿ ಯೋಜನೆ, ಅರ್ಜಿ ವಿಲೇವಾರಿ, ತ್ವರಿತ ಕಾರ್ಯಗಳ ಆದೇಶ ಮತ್ತಿತರ ಸೇವೆಗಳಿಗೆ ತೊಂದರೆಯಾಗಿದೆ.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next