Advertisement

ಉಡುಪಿ ಜಿಲ್ಲೆ: ಕಲ್ಲಂಗಡಿ ಉತ್ಪಾದನೆ ಗಣನೀಯ ಏರಿಕೆ

10:11 AM Mar 18, 2020 | mahesh |

ಉಡುಪಿ: ಕಳೆದ 10 ವರ್ಷಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣಿನ ಉತ್ಪಾದನೆ ಪ್ರಮಾಣ ವೃದ್ಧಿಯಾಗಿದೆ. 2010-11ರಲ್ಲಿ 13 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುತ್ತಿದ್ದ ಈ ಬೆಳೆ 2018-19ನೇ ಸಾಲಿನಲ್ಲಿ 55 ಹೆಕ್ಟೇರ್‌ ಪ್ರದೇಶಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಿಂದ ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಕರ್ನಾಟಕ, ಮುಂಬಯಿ ಭಾಗಕ್ಕೆ ಹಣ್ಣುಗಳ ಪೂರೈಕೆ ಆಗುತ್ತಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಸುಮಾರು 100 ಮಂದಿ ಕಲ್ಲಂಗಡಿ ಬೆಳೆಗಾರರಿದ್ದು ಅಕ್ಟೋಬರ್‌ ಹಾಗೂ ಜನವರಿ ಭಾಗದಲ್ಲಿ ಒಟ್ಟು 2 ಬೆಳೆಗಳನ್ನು ತೆಗೆಯುತ್ತಿದ್ದಾರೆ. ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಅಂಕಿ-ಅಂಶಗಳ ಪ್ರಕಾರ 2010-11ರಲ್ಲಿ 13 ಹೆಕ್ಟೇರ್‌ಗಳಲ್ಲಿ 520 ಮೆಟ್ರಿಕ್‌ ಟನ್‌ ಉತ್ಪಾದನೆಯಾಗುತ್ತಿತ್ತು. 1 ಹೆಕ್ಟೇರ್‌ ಪ್ರದೇಶದಲ್ಲಿ 40 ಮೆಟ್ರಿಕ್‌ ಟನ್‌ ಇಳುವರಿ ಇದ್ದು, ಅದರ ಒಟ್ಟು ಮೌಲ್ಯ 23 ಲಕ್ಷ ರೂ.ಗಳಾಗಿತ್ತು. ಪ್ರಸ್ತುತ 2018-19ರಲ್ಲಿ 55 ಹೆಕ್ಟೇರ್‌ ಪ್ರದೇಶದಲ್ಲಿ 2,200 ಮೆಟ್ರಿಕ್‌ ಟನ್‌ ಉತ್ಪಾದನೆಯಾಗುತ್ತಿದೆ. 1 ಹೆಕ್ಟೇರ್‌ ಪ್ರದೇಶದಲ್ಲಿ 40 ಮೆಟ್ರಿಕ್‌ ಟನ್‌ ಇಳುವರಿ ಆಗುತ್ತಿದೆ. ಒಟ್ಟು ಮೌಲ್ಯ 2.20 ಕೋ.ರೂ.ಗೆ ಏರಿಕೆಯಾಗಿದೆ.

ಬೆಳೆಗಾರರು-ಬೇಡಿಕೆ
ಉಡುಪಿ ಜಿಲ್ಲೆಯ ಮಟ್ಟು, ಕೋಟ, ಮಣೂರು, ಗಂಗೊಳ್ಳಿ, ಬೈಂದೂರು, ಶಿರೂರು, ಕಿರಿಮಂಜೇಶ್ವರ, ಹಿರಿಯಡಕ ಮೊದಲಾದ ಭಾಗಗಳಲ್ಲಿ ಬೆಳೆಗಾರರ ಪ್ರಮಾಣ ಹೆಚ್ಚು ಇದೆ. ಮುಖ್ಯವಾಗಿ ಕರಾವಳಿ ಭಾಗದಲ್ಲಿ ಜಾತ್ರೆ, ಭೂತಾರಾಧನೆ, ಯಕ್ಷಗಾನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಿರುವ ಕಾರಣ ಕಲ್ಲಂಗಡಿಗೆ ಬೇಡಿಕೆ ಹೆಚ್ಚಿದೆ. ಉಳಿದಂತೆ ಮಹಾರಾಷ್ಟ್ರದ ಭಾಗಕ್ಕೂ ಹಣ್ಣುಗಳು ಪೂರೈಕೆ ಆಗುವುದರಿಂದ ಬೆಳೆಗಾರರಿಗೂ ಅನುಕೂಲವಾಗಿದೆ.

ಹೆಚ್ಚಳಕ್ಕೆ ಕಾರಣ
ತೋಟಗಾರಿಕೆ ಇಲಾಖೆ ಕಲ್ಲಂಗಡಿ ಬೆಳೆಗಾರರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು. 2012-13ರಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹನಿ ನೀರಾವರಿ ಮಲ್ಚಿಂಗ್‌ ಶೀಟ್‌ಗಳ ಬಳಕೆಯ ಕುರಿತು ತರಬೇತಿ ನೀಡಿ ಹೆಚ್ಚಿನ ಒಲವು ಮೂಡಲು ಸಾಧ್ಯವಾಗಿದೆ. ಹೊಸದಾಗಿ ಕಲ್ಲಂಗಡಿ ಬೆಳೆ ಪ್ರಾರಂಭಿ ಸುವವರಿಗೆ ಹೆಕ್ಟೇರ್‌ ಪ್ರಕಾರ 20 ಸಾವಿರ ರೂ. ಸಬ್ಸಿಡಿ, ಹನಿ ನೀರಾವರಿಗಾಗಿ ಶೇ. 90ರಷ್ಟು ಸಬ್ಸಿಡಿ, ಪ್ಲಾಸ್ಟಿಕ್‌ ಮಲಿcಂಗ್‌ ಶೀಟ್‌ಗೆ ಹೆಕ್ಟೇರ್‌ಗೆ 16,000 ರೂ. ಸಬ್ಸಿಡಿಯನ್ನು ಇಲಾಖೆ ನೀಡುತ್ತಿದೆ.

ದ.ಕ.ದಲ್ಲಿ ಶೂನ್ಯ
ದ. ಕ. ಭಾಗದಲ್ಲಿ ಕಲ್ಲಂಗಡಿ ಬೆಳೆಗೆ ಕೃಷಿಕರು ಅಷ್ಟೊಂದು ಮನಮಾಡಿಲ್ಲ. ಸೀಮಿತ ಸಂಖ್ಯೆಯ ರೈತರು ಮಾತ್ರ ಗಮನ ಹರಿಸುತ್ತಿದ್ದಾರೆ. ಮಂಗಳೂರು ತೋಟಗಾರಿಕೆ ಇಲಾಖೆಯಲ್ಲಿ ಕಲ್ಲಂಗಡಿ ಬೆಳೆಗಾರರ ಅಂಕಿ-ಅಂಶ ಇಲ್ಲ. ಶೂನ್ಯ ದಾಖಲೆ ಆಗಿದೆ ಎಂದು ಮಂಗಳೂರು ತೋಟಗಾರಿಕೆ ಇಲಾಖೆ ಕೇಂದ್ರ ಕಚೇರಿ ಸಹಾಯಕ ಕೆ. ಪ್ರವೀಣ್‌ ತಿಳಿಸಿದ್ದಾರೆ.

Advertisement

ಮತ್ತಷ್ಟು ಮಂದಿಯನ್ನು ತಲುಪುವ ಯೋಜನೆ
ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಮೂಲಕ ಕಲ್ಲಂಗಡಿ ಬೆಳೆಗಾರರಿಗೆ ಪ್ರೋತ್ಸಾಹ, ಜತೆಗೆ ತರಬೇತಿ ನೀಡಲಾಗುತ್ತಿದೆ. ಉಳಿದಂತೆ ಹನಿ ನೀರಾವರಿಗೆ, ಹಣ್ಣಿನ ಹೊದಿಕೆಯ ಶೀಟ್‌ಗಳಿಗೆ ಸಬ್ಸಿಡಿ ನೀಡಲಾಗುತ್ತಿದ್ದು ಮತ್ತಷ್ಟು ಬೆಳೆಗಾರರ ನ್ನು ತಲುಪುವ ಯೋಜನೆ ಇದೆ.
– ಗುರುಪ್ರಸಾದ್‌ , ಉಡುಪಿ ಜಿಲ್ಲಾ ಸಹಾಯಕ ತೋಟಗಾರಿಕೆ ನಿರ್ದೇಶಕರು

– ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next