Advertisement
ಮಾವಿನ ಹೂವುಗಳಿಗೆ ಪೂರಕವಾದ ವಾತಾವರಣವಿದ್ದು, ಕಳೆದ ಕೆಲವು ದಿನಗಳಿಂದ ಇಬ್ಬನಿ ಕವಿದ ವಾತಾವರಣವಿದೆ. ಉಡುಪಿ ಜಿಲ್ಲೆಯಲ್ಲಿ ರತ್ನಗಿರಿ, ನೀಲಂ, ಆಪೂಸ್ ತಳಿಯ ಮಾವು ಹೆಚ್ಚಾಗಿ ಬೆಳೆಯುತ್ತಿದ್ದು, ಕೆಲವರು ಮಲ್ಲಿಕಾ, ಮುಂಡಪ್ಪ ತಳಿಯನ್ನು ಬೆಳೆಯುತ್ತಾರೆ.
ಈ ಸಾಲಿನಲ್ಲಿ ಕಳೆದ ಡಿಸೆಂಬರ್‌ವರೆಗೂ ಮಳೆ ಇದ್ದುದರಿಂದ, ಹೂವು ಬಿಡುವ ಪ್ರಕ್ರಿಯೆ ವಿಳಂಬವಾಗಿದೆ. ಮಳೆ ಕಡಿಮೆಯಾಗುವವರೆಗೂ ಚಿಗುರು ಬಿಡುವ ಪ್ರಕ್ರಿಯೆ ಇದ್ದುದರಿಂದ ಹೂವು ಬಿಡುವ ಪ್ರಕ್ರಿಯೆ ತಡವಾಗಿ ಆರಂಭವಾಗಿದೆ. ಇದರಿಂದಾಗಿ ಉಪ್ಪಿನಕಾಯಿ ಇನ್ನಿತರ ಬಳಕೆಗೆ ತೊಂದರೆಯಿಲ್ಲದಿದ್ದರೂ, ಹಣ್ಣು ಮಾರಾಟ ಮಾಡುವವರಿಗೆ ವಿಳಂಬದಿಂದಾಗಿ ನಷ್ಟವಾಗುವ ಸಂಭವವೂ ಇದೆ. ಕೆಲವೆಡೆಗಳಲ್ಲಿ ಮಾವಿನ ಸೀಸನ್ ವಿಳಂಬದಿಂದಾಗಿ ಮಾವಿನ ತೋಟಗಳು 2 ಲಕ್ಷ ರೂ. ವರೆಗೆ ಏಲಂ ಆಗುತ್ತಿದ್ದುದು, ಈ ಬಾರಿ 45 ಸಾವಿರ ರೂ.ಗೆ ಸೀಮಿತವಾಗಿದೆ. ಕಳೆದ ವರ್ಷ ಮಾವಿನ ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಇದರಿಂದಾಗಿ ಸ್ಥಳೀಯ ಮಾವಿನ ಮಿಡಿ ಹಾಗೂ ಹಣ್ಣುಗಳು ಅಷ್ಟೊಂದು ಪ್ರಮಾಣದಲ್ಲಿ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಜಿಲ್ಲೆಯ ಬಹುತೇಕ ಎಲ್ಲ ಕಡೆಗಳಲ್ಲಿ ಉತ್ತಮ ಪ್ರಮಾಣದಲ್ಲಿ ಹೂವು ಬಿಟ್ಟಿದ್ದು, ಈ ಬಾರಿಯ ಮಾವಿನ ಸೀಸನ್ ಉತ್ತಮವಾಗಿರಬಹುದು ಎನ್ನುವ ನಿರೀಕ್ಷೆ ಮಾವಿನ ಬೆಳೆಗಾರರದ್ದಾಗಿದೆ.
Related Articles
ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ ಒಟ್ಟಾರೆ 440.49 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಪೈಕಿ ಕಾರ್ಕಳ ತಾಲೂಕಿನಲ್ಲಿ ಗರಿಷ್ಠ 164 ಹೆಕ್ಟೇರ್, ಬೈಂದೂರು ತಾಲೂಕಿನಲ್ಲಿ ಕನಿಷ್ಠ 8 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇನ್ನು ಕುಂದಾಪುರದಲ್ಲಿ 109 ಹೆಕ್ಟೇರ್, ಬ್ರಹ್ಮಾವರದಲ್ಲಿ 74 ಹೆಕ್ಟೇರ್, ಕಾಪುವಿನಲ್ಲಿ 33, ಹೆಬ್ರಿಯಲ್ಲಿ 30 ಹಾಗೂ ಉಡುಪಿ ತಾಲೂಕಿನಲ್ಲಿ 20 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.
Advertisement
ಉತ್ತಮ ಹವಾಗುಣಸಾಮಾನ್ಯವಾಗಿ ಡಿಸೆಂಬರ್ ವೇಳೆಗೆ ಮಾವಿನ ಹೂ ಬಿಡುತ್ತದೆ. ಆದರೆ ಈ ಬಾರಿ ಡಿಸೆಂಬರ್‌ವರೆಗೂ ಮಳೆ ಇದ್ದುದರಿಂದ ಹೂವು ಬಿಡುವ ಪ್ರಕ್ರಿಯೆ ತಡವಾಗಿ ಆರಂಭಗೊಂಡಿದೆ. ಆದರೆ ಈ ಬಾರಿ ಎಲ್ಲ ಕಡೆಗಳಲ್ಲಿ ಉತ್ತಮ ಹೂ ಬಿಟ್ಟಿದೆ. ಹವಾಮಾನ ಸಹ ಉತ್ತಮವಾಗಿರುವುದರಿಂದ ಈ ಬಾರಿ ಹೆಚ್ಚಿನ ಮಾವು ಇಳುವರಿ ಬರುವ ನಿರೀಕ್ಷೆಯಿದೆ.
– ಡಾ| ಧನಂಜಯ ಬಿ.,
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು,
ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ -ಪ್ರಶಾಂತ್ ಪಾದೆ