Advertisement

ಉಡುಪಿ ಜಿಲ್ಲೆಯಲ್ಲಿ ಮುಚ್ಚಿವೆ 12 ಶಾಲೆ; ಶಿಕ್ಷಕ- ವಿದ್ಯಾರ್ಥಿ ಅನುಪಾತದಲ್ಲಿ ಅಜಗಜಾಂತರ

01:24 AM Jan 15, 2022 | Team Udayavani |

ಉಡುಪಿ: ಕೊರೊನಾದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗುವ ಜತೆಗೆ ಖಾಸಗಿ ಶಾಲೆಗಳಿಗೆ ಒಂದಷ್ಟು ಪೆಟ್ಟು ಬಿದ್ದಿದೆ. ಈ ಮಧ್ಯೆ ಜಿಲ್ಲೆಯಲ್ಲಿ ತಲಾ 3 ಸರಕಾರಿ ಶಾಲೆ ಹಾಗೂ ಖಾಸಗಿ (ಅನುದಾನ ರಹಿತ) ಶಾಲೆಗಳು ಮತ್ತು 6 ಅನುದಾನಿತ ಶಾಲೆಗಳು ಬಂದ್‌ ಆಗಿವೆ.

Advertisement

ಬ್ರಹ್ಮಾವರದ 4, ಬೈಂದೂರು, ಕಾರ್ಕಳ, ಉಡುಪಿ ಹಾಗೂ ಕುಂದಾಪುರದ ತಲಾ 2 ಶಾಲೆಗಳು ಸೇರಿವೆ. ಇದರಲ್ಲಿ ಬಹುತೇಕ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು. ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಸುಮಾರು 60 ಸಾವಿರ, ಖಾಸಗಿ ಶಾಲೆಗಳಲ್ಲಿ 75 ಸಾವಿರ ಹಾಗೂ ಅನುದಾನಿತ ಶಾಲೆಗಳಲ್ಲಿ 22 ಸಾವಿರ ಸೇರಿದಂತೆ ಒಟ್ಟು ಸುಮಾರು 1.50 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸರಕಾರಿ ಶಾಲೆ: 473 ಹುದ್ದೆ ಖಾಲಿ
ಜಿಲ್ಲೆಯ 650ಕ್ಕೂ ಅಧಿಕ ಸರಕಾರಿ ಶಾಲೆಗಳಲ್ಲಿ 473 ಸಹಾಯಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಇದರಲ್ಲಿ ಪ್ರೌಢಶಾಲಾ ವಿಭಾಗ ಬೇರೆ ಇರುವುದಿಂದ ಪ್ರೌಢಶಾಲೆಯಲ್ಲಿ ವಿಷಯವಾರು ಇಂಗ್ಲಿಷ್‌, ವಿಜ್ಞಾನ, ಗಣಿತ ಮೊದಲಾದ ಶಿಕ್ಷಕರ ಹುದ್ದೆಯೂ ಖಾಲಿಯಿದೆ. ಹುದ್ದೆ ಭರ್ತಿಗೆ ರಾಜ್ಯ ಸರಕಾರದಿಂದಲೇ ಕ್ರಮವಾಗಬೇಕು. ಸದ್ಯಕ್ಕೆ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

ವೇತನ ಕಡಿಮೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ಅತಿಥಿ ಶಿಕ್ಷಕರು ಬದಲಾಗುತ್ತಿರುತ್ತಾರೆ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೂ ಪ್ರಭಾವ ಬೀರುತ್ತದೆ.

30-40 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ
ಶಿಕ್ಷಕರ ಕೊರತೆ ಜತೆಗೆ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತದಲ್ಲೂ ಅಜಗಜಾಂತರವಿದೆ. ಸರಕಾರದ ನಿಯಮದಂತೆ 18ರಿಂದ 22 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ ಇರಬೇಕು. ಆದರೆ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ 30ರಿಂದ 40 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಿದ್ದಾರೆ. 583 ಸರಕಾರಿ ಪ್ರಾಥಮಿಕ ಶಾಲೆಗಳ ಪೈಕಿ 127ರಲ್ಲಿ ಮಾತ್ರ ಸರಕಾರದ ನಿಯಮದಂತೆ ಶಿಕ್ಷಕರಿದ್ದಾರೆ. 106 ಪ್ರೌಢ ಶಾಲೆಗಳ ಪೈಕಿ ಬಹುತೇಕ ಎಲ್ಲಡೆ ನಿಯಮದಂತೆ ಶಿಕ್ಷಕರಿದ್ದಾರೆ.

Advertisement

ಮಾಹಿತಿ ಸಂಗ್ರಹ
ಜಿಲ್ಲೆಯ ಪ್ರೌಢ ಶಾಲಾ ವಿಭಾಗದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ಚೆನ್ನಾಗಿದೆ. ಪ್ರಾಥಮಿಕ ವಿಭಾಗದಲ್ಲಿ ಸ್ವಲ್ಪ ಕಡಿಮೆಯಿದೆ. ಹೊಸ ಶಿಕ್ಷಕರ ನೇಮಕಾತಿಯಿಂದ ಇದು ಸರಿಯಾಗಲಿದೆ. ಶಾಲೆ ಮುಚ್ಚಿರುವ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ..
-ಮಲ್ಲೇಸ್ವಾಮಿ,
ಡಿಡಿಪಿಐ, ಉಡುಪಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next