Advertisement

ಸಚಿವ ರೈ ರಾಜೀನಾಮೆಗೆ ಉಡುಪಿ ಜಿಲ್ಲಾ ಬಿಜೆಪಿ ಆಗ್ರಹ

02:52 PM Jun 20, 2017 | Team Udayavani |

ಉಡುಪಿ: ಹಿರಿಯ ಆರ್‌ಎಸ್‌ಎಸ್‌ ನಾಯಕ ಕಲ್ಲಡ್ಕ ಪ್ರಭಾಕರ ಭಟ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ 307ರ ಅಡಿ ಸುಳ್ಳು ಮೊಕದ್ದಮೆ ದಾಖಲಿಸಿ, ಅವರನ್ನು ಬಂಧಿಸುವಂತೆ ದ.ಕ. ಎಸ್‌ಪಿಗೆ ಸಚಿವ ಬಿ. ರಮಾನಾಥ ರೈ ಸೂಚನೆ ನೀಡಿರುವುದು ಖಂಡನೀಯ. ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಕೂಡಲೇ ಸಚಿವ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಸಿಎಂ ಅವರನ್ನು ತತ್‌ಕ್ಷಣ ವಜಾ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆಗ್ರಹಿಸಿದರು.

Advertisement

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರಿಮಿನಲ್‌ ಪ್ರಕರಣ ಯಾವ ಸಂದರ್ಭದಲ್ಲಿ ದಾಖಲಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ರೈ ಅವರಿಗಿಲ್ಲ. ಸ್ವತಃ ಎಸ್‌ಪಿಯೇ ಕಲ್ಲಡ್ಕ ಗಲಭೆಗೆ ಡ್ರಗ್‌ ಮಾಫಿಯಾ ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗಿರುವ ಯುವಕರು ಕಾರಣ ಎಂದಿದಿದ್ದರೂ ಗಲಭೆ ಪ್ರಕರಣದಲ್ಲಿ ಪ್ರಭಾಕರ ಭಟ್‌ ಅವರನ್ನು ಎಳೆದು ತಂದದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ಹಲವು ದಶಕಗಳಿಂದ ರಾಜಕೀಯದಲ್ಲಿರುವ ರೈ ಅವರಿಗೆ ಕಲ್ಲಡ್ಕ ಪ್ರಭಾಕರ ಭಟ್‌ ಅವರ ವ್ಯಕ್ತಿತ್ವದ ಪರಿಚಯ ಗೊತ್ತಿಲ್ಲದೆ ಹೋದದ್ದು ಮಾತ್ರ ದುರಂತ ಎಂದರು.

ಕೋಮು ಸಾಮರಸ್ಯಕ್ಕೆ ಹೆಸರಾದ ಕರಾವಳಿಯಲ್ಲಿ ಕೋಮುಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಸಚಿವ ರೈ ಮಾಡುತ್ತಿದ್ದಾರೆ. ಪ್ರಭಾಕರ ಭಟ್‌ ಅವರನ್ನು ಬಂಧಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವ ಸಚಿವ ರಮಾನಾಥ ರೈ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಒತ್ತಾಯಿಸಿದ್ದಾರೆ.

ಶಿಷ್ಟಾಚಾರ ಉಲ್ಲಂ ಸಿದ ಸಿಎಂ
ಉಡುಪಿಗೆ ರಾಷ್ಟ್ರಪತಿ ಭೇಟಿ ನೀಡಿದ ಸಂದರ್ಭ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಭಾಗವಹಿಸದೆ ಇರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ರಾಷ್ಟ್ರಪತಿ, ಪ್ರಧಾನಿ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಹಾಜರಿರಬೇಕಾದುದು ಕರ್ತವ್ಯ. ಆದರೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಉದ್ದೇಶ ಪೂರ್ವಕವಾಗಿ ಅವರು ಈ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದಾರೆ. ಶ್ರೀಕೃಷ್ಣ ಮಠದ ಬಗ್ಗೆ ಇದ್ದ ದ್ವಂದ್ವ ನಿಲುವನ್ನು ಸರಿಪಡಿಸಲು ಉತ್ತಮ ಅವಕಾಶವಿತ್ತು. ಆದರೆ ಹಾಗೇ ಮಾಡದೇ ಸಮಸ್ತ ಹಿಂದೂ ಸಮಾಜ, ಶ್ರೀಕೃಷ್ಣ ಮಠಕ್ಕೆ
ಅಗೌರವ ತೋರಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಅವರು ತತ್‌ಕ್ಷಣವೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಕಾಪು ಶಾಸಕ ವಿನಯಕುಮಾರ್‌ ಸೊರಕೆ ಅವರು, ತಮ್ಮ ಗೂಂಡಾ ಬೆಂಬಲಿಗರೊಂದಿಗೆ ಸೇರಿಕೊಂಡು ಎಲ್ಲೂರಿನ ಸ್ಥಳೀಯ ನಿವಾಸಿ ಸಂತೋಷ್‌ ಅವರಿಗೆ ನಿಂದಿಸಿ, ಜೀವ ಬೆದರಿಕೆ ಹಾಕಿರುವುದು ಖಂಡನೀಯ ಎಂದರು.

Advertisement

ಜೂ. 21: ಯೋಗ ದಿನಾಚರಣೆ
ಜಿಲ್ಲಾ ಬಿಜೆಪಿ ವತಿಯಿಂದ ವಿಶ್ವ ಯೋಗ ದಿನಾನಚರಣೆಯ ಪ್ರಯುಕ್ತ ಜೂ. 21ರ ಬೆಳಗ್ಗೆ 7.30ರಿಂದ 9 ಗಂಟೆ ವರೆಗೆ ಉಡುಪಿ ಕಿದಿಯೂರು ಹೊಟೇಲ್‌ನ ಶೇಷಶಯನ ಸಭಾಂಗಣದಲ್ಲಿ ವಿಶೇಷ ಯೋಗಾಸನ ಕಾರ್ಯಕ್ರಮ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next