Advertisement

ಉಡುಪಿ ಜಿಲ್ಲೆ: 8 ಮಂಗಗಳ ಮೃತ ದೇಹ ಪತ್ತೆ

12:50 AM Jan 22, 2019 | Team Udayavani |

ಉಡುಪಿ/ಕುಂದಾಪುರ: ಜಿಲ್ಲೆಯಲ್ಲಿ ಸೋಮವಾರ ಎಂಟು ಮಂಗಗಳ ಮೃತದೇಹ ಪತ್ತೆಯಾಗಿದೆ.
ಕಮಲಶಿಲೆ, ಸಿದ್ದಾಪುರದ ಹೊಸಂಗಡಿ, ಶಿರ್ವ, ಜಪ್ತಿ, ಬೆಳ್ಮಣ್ಣು, ಮಂದಾರ್ತಿ, ಕುಂಜಾಲು, ಹೇರೂರಿನಲ್ಲಿ ಮಂಗಗಳು ಸತ್ತಿವೆ. ಕುಂಜಾಲಿನಲ್ಲಿ ಸಿಕ್ಕಿದ ಮಂಗನ ಮೃತದೇಹವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದವುಗಳಲ್ಲಿ ಎರಡು ಬೇರೆ ಕಾರಣದಿಂದ ಸತ್ತವು, ಕೆಲವು ಕಡೆ ಸತ್ತಿರುವ ಮೃತದೇಹಗಳನ್ನು ಈಗಾಗಲೇ ಕಳುಹಿಸಲಾಗಿದೆ, ಎರಡು ಕಡೆ ಕೊಳೆತು ಹೋಗಿವೆ.

Advertisement

ಕಬ್ಬಿನಾಲೆ ಸಮೀಪ ದೊರೆತ ಮಂಗನ ಶವದ ಅಂಶಗಳ ಪ್ರಯೋಗಾಲಯ ವರದಿಯಲ್ಲಿ ಮಂಗನ ಕಾಯಿಲೆಯಿಂದಲೇ ಸಾವು ಸಂಭವಿಸಿದ್ದು ಎಂದು ದೃಢಪಟ್ಟಿದೆ. ಮಣಿಪಾಲ ಮತ್ತು ಶಿವಮೊಗ್ಗಕ್ಕೆ ದೇಹದ ಕೆಲವು ಅಂಶಗಳನ್ನು ಕಳುಹಿಸಲಾಗಿತ್ತು. ಈ ಪೈಕಿ ಮಣಿಪಾಲ ಪ್ರಯೋಗಾಲಯದ ವರದಿ ವೈದ್ಯಾಧಿಕಾರಿಗಳ ಕೈಸೇರಿದೆ.
ಕಾಡಿನ ಅಂಚಿನಲ್ಲಿರುವ ಜನರಿಗೆ ವಿತರಿಸಲು ಡಿಪಿಎಂ ತೈಲ ಬಾಟಲಿಗಳ ಅಗತ್ಯವಿದ್ದು ವಿವಿಧ ಸಂಘ ಸಂಸ್ಥೆಗಳು ದೇಣಿಗೆ ನೀಡಿ ಆರೋಗ್ಯ ಇಲಾಖೆ ಮೂಲಕ ತರಿಸಿ ವಿತರಿಸಲು ಸಜ್ಜಾಗಿವೆ.

ಮಣಿಪಾಲ: 28 ಮಂದಿಗೆ ಚಿಕಿತ್ಸೆ
ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಇದುವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ 107 ಮಂದಿ ದಾಖಲಾಗಿದ್ದಾರೆ. 42 ಮಂದಿಗೆ ಮಂಗನ ಕಾಯಿಲೆ ಇರುವುದು ದೃಢವಾಗಿದೆ. 28 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ ಮರುಕಳಿಸಿದ ಹಿನ್ನೆಲೆಯಲ್ಲಿ ಇಬ್ಬರು ಮರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಗರ: ಆರು ಮಂಗ ಸಾವು
ಸಾಗರ:
ತಾಲೂಕಿನ ಅರಳಗೋಡು ಪ್ರಾ. ಆರೋಗ್ಯ ಕೇಂದ್ರದಿಂದ ಶಂಕಿತ ಮಂಗನ ಕಾಯಿಲೆಯ 1 ಪ್ರಕರಣವನ್ನು ಮಣಿಪಾಲ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿದೆ. ಸಾಗರದಲ್ಲಿ ಈ ದಿನ ಒಟ್ಟು 6 ಮಂಗಗಳು ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next