Advertisement

ಉತ್ತಮ ಆಡಳಿತದ ಇಚ್ಛಾಶಕ್ತಿ: ಹೆಪ್ಸಿಬಾ ರಾಣಿ

12:30 AM Feb 08, 2019 | |

ಉಡುಪಿ: ಉತ್ತಮ ಆಡಳಿತ ವ್ಯವಸ್ಥೆಗೆ ಉಡುಪಿ ಹೆಸರು ಪಡೆದಿದೆ. ಇದಕ್ಕೆ ತಕ್ಕಂತೆ ಎಲ್ಲರ ಸಹಕಾರ ದೊಂದಿಗೆ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇನೆ ಎಂದು ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

Advertisement

ಈ ಸಂದರ್ಭ “ಉದಯವಾಣಿ’ ಜತೆ ಮಾತನಾಡಿದ ಅವರು “ಉತ್ತಮ ಕೆಲಸ ಮಾಡುವ ಇಚ್ಛಾಶಕ್ತಿ ಇದೆ. ಸರಕಾರದ ನಿರ್ದೇಶನದಂತೆ ನಿಗದಿತವಾದ ಕೆಲಸ ಗಳ ಜತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುತ್ತೇನೆ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಆಡಳಿತ ವ್ಯವಸ್ಥೆಯನ್ನು ಉತ್ತಮ ಸ್ಥಿತಿ ಯಲ್ಲಿಟ್ಟುಕೊಂಡಿದ್ದು, ಅದನ್ನು ಮುಂದು 
ವರಿಸುವೆ. ಜನರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸುವೆ’ ಎಂದು ಹೇಳಿದರು.

ಮರಳು ಸವಾಲು
ಜಿಲ್ಲೆಯಲ್ಲಿ ಮರಳುಗಾರಿಕೆ (ಮರಳು ದಿಬ್ಬಗಳ ತೆರವು) ಪೂರ್ಣ ಪ್ರಮಾಣದಲ್ಲಿ ನಡೆಯದಿರುವ ಬಗ್ಗೆ ಹಲವು ಬಾರಿ ಪ್ರತಿಭಟನೆ, ಧರಣಿಗಳು ನಡೆದಿವೆ. ನಿರ್ಗಮನ ಜಿಲ್ಲಾಧಿಕಾರಿ ಪ್ರಿಯಾಂಕಾ ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಜರಗಿಸಿದ್ದರು. ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಖುದ್ದಾಗಿ ತೆರಳಿ ದಾಳಿಯ ನೇತೃತ್ವ ವಹಿಸಿದ್ದರು. ಮಾತ್ರವಲ್ಲದೆ ಎಲ್ಲ 171 ಮಂದಿ ಸಾಂಪ್ರದಾಯಿಕ ಪರವಾ ನಿಗೆದಾರರಿಗೂ ಲೀಸ್‌ ನೀಡಬೇಕೆಂಬ ಬೇಡಿಕೆಗೆ ಕಾನೂನಿನ ತೊಡಕನ್ನು ಮುಂದಿಟ್ಟು  ನಿರಾಕರಿಸಿದ್ದರು. ಮರಳು ಸಮಸ್ಯೆ ಈಗಲೂ ಪೂರ್ಣವಾಗಿ ಪರಿಹಾರವಾಗಿಲ್ಲ. ಹಾಗಾಗಿ ನೂತನ ಜಿಲ್ಲಾಧಿಕಾರಿಯವರಿಗೂ ಮರಳು ಸಮಸ್ಯೆ ಬಗೆಹರಿಸುವುದು ಸವಾಲಾಗಲಿದೆ. ಇದರೊಂದಿಗೆ ಹಕ್ಕುಪತ್ರ, ಡೀಮ್ಡ್ ಫಾರೆಸ್ಟ್‌, ಕುಡಿಯುವ ನೀರಿನ ಸಮಸ್ಯೆ, ಗ್ರಾ.ಪಂ. ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಮೊದಲಾದ ಸವಾಲುಗಳು ಕೂಡ ಜಿಲ್ಲಾಧಿಕಾರಿ ಮುಂದಿವೆ.

ಐಎಎಸ್‌ 20ನೇ ರ್‍ಯಾಂಕ್‌
ಹೆಪ್ಸಿಬಾ ರಾಣಿ ಮೂಲತಃ ಆಂಧ್ರಪ್ರದೇಶದ ವಿಜಯವಾಡದವರು. ಹೈದರಾಬಾದ್‌ ಒಸ್ಮಾನಿಯಾ ವಿ.ವಿ.ಯಿಂದ ಬಿ.ಎ. ಪದವಿ, ಡೆಲ್ಲಿ ಸ್ಕೂಲ್‌ ಆಫ್ ಇಕನಾಮಿಕ್ಸ್‌ ನಲ್ಲಿ ಎಂ.ಎ. ಪದವಿ ಪಡೆದಿರುವ ಹೆಪ್ಸಿಬಾ ಅವರು ಐಎಎಸ್‌ 2011ರ ಬ್ಯಾಚ್‌ನವರಾಗಿದ್ದು 20ನೇ ರ್‍ಯಾಂಕ್‌ ಗಳಿಸಿದ್ದಾರೆ. ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ಸಬ್‌ ಡಿವಿಜನ್‌ನ ಸಹಾಯಕ ಕಮಿಷನರ್‌ ಆಗಿ, ಮಂಗಳೂರು ಮನಪಾ ಆಯುಕ್ತರಾಗಿ, ಹುಬ್ಬಳ್ಳಿ- ಧಾರವಾಡದ ವಿಶೇಷ ಉದ್ದೇಶ ವಾಹನ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ತೃಪ್ತಿಕರ ಸೇವೆ: ಪ್ರಿಯಾಂಕಾ
ನಿರ್ಗಮನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾತನಾಡಿ, ಕೆಲವು ಜನರಿ ಗಾದರೂ ನನ್ನ ಕೆಲಸದಿಂದ ತೃಪ್ತಿಯಾಗಿದೆ ಎಂಬುದು ಖುಷಿ ಕೊಟ್ಟಿದೆ. ಆಳುಪೋತ್ಸವ, ಎಸ್‌ಎಲ್‌ಆರ್‌ಎಂ ಮೂಲಕ ತ್ಯಾಜ್ಯ ವಿಲೇವಾರಿ, ಸ್ವತ್ಛತಾ ಕಾರ್ಯ ಮೊದಲಾದವು ತೃಪ್ತಿ ಕೊಟ್ಟಿವೆ. ಎಸ್‌ಎಲ್‌ಆರ್‌ಎಂ ಬಗ್ಗೆ ಜಿಲ್ಲೆಯ ಜನತೆ ಮತ್ತಷ್ಟು ಅರ್ಥ ಮಾಡಿಕೊಂಡು ಅನುಷ್ಠಾನಗೊಳಿ ಸಬೇಕಾಗಿದೆ. ಕುಡಿಯುವ ನೀರು ಸಮಸ್ಯೆ ಪರಿಹಾರ ಕುರಿತು ಸಭೆಗ ಳನ್ನು ನಡೆಸಿ ಸ್ಥಳೀಯಾಡಳಿತಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 1 ಕೋ.ರೂ.,ಹಾಗೂ ಪ್ರತಿ ತಾಲೂಕಿಗೆ 25 ಲ.ರೂ. ಬಿಡುಗಡೆಯಾಗಿದೆ. ನಗರದಲ್ಲಿ ಮೀಟರ್‌ ಅಳವಡಿಸಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೂ ಸಿದ್ಧತೆ ನಡೆದಿದೆ. ಮರಳುಗಾರಿಕೆ ಕಾನೂನಿನಂತೆಯೇ ನಡೆಯಲಿದೆ. ಕಚೇರಿ ಯಲ್ಲಿ ಎಲ್ಲ ಇಲಾಖೆಗಳಲ್ಲಿಯೂ ಶೇ. 30ರಿಂದ 40ರಷ್ಟು ಸಿಬಂದಿ ಕೊರತೆ ಇದೆ. ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಕೊರತೆ ಹೆಚ್ಚಾ ಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next