ಉಡುಪಿ: ಜನಸಾಮಾನ್ಯರು ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಇರುವ ಮುಂಜಾಗ್ರತಾ ಕ್ರಮಗಳನ್ನು ಅರಿತು ಅವುಗಳನ್ನು ಪಾಲಿಸಿ ದಲ್ಲಿ ಮಾತ್ರ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ದಿನೇದಿನೆ ಉಲ್ಬಣಗೊಳ್ಳುತ್ತಿರುವ ಡೆಂಗ್ಯೂ ನಿಯಂತ್ರಣ ಹಾಗೂ ನಿರ್ಮೂಲಕ್ಕಾಗಿ ಜನಜಾಗೃತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಪ್ರತೀ ಶುಕ್ರವಾರ ಸೊಳ್ಳೆ ನಿರ್ಮೂಲನ ದಿನವಾಗಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ. ಶುಕ್ರವಾರ ಕೊಡಂಕೂರು ವಾರ್ಡ್‌ನ ಪ್ರಮೋದ್ ಬಡಾವಣೆಯಲ್ಲಿ ಮನೆಮನೆಗೆ ತೆರಳಿ ಡೆಂಗ್ಯೂ ಜಾಗೃತಿ ಕರಪತ್ರ ವಿತರಿಸುವ ಹಾಗೂ ಸಾರ್ವಜನಿಕರನ್ನು ಸಂದರ್ಶಿಸುವ ಮೂಲಕ ಡೆಂಗ್ಯೂ ಜಾಗೃತಿ ಕಾರ್ಯ ಕ್ರಮಕ್ಕೆ ಅವರು ಚಾಲನೆ ನೀಡಿದರು.
ವಿಶೇಷವಾಗಿ ಮಹಿಳೆ ಯರು ಮತ್ತು ಮಕ್ಕಳು ಡೆಂಗ್ಯೂ ನಿಯಂತ್ರಣದ ಬಗ್ಗೆ ತಿಳಿವಳಿಕೆ ಹೊಂದುವುದರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಡೆಂಗ್ಯೂ ನಿಯಂತ್ರಿಸಿ, ನಿರ್ಮೂಲ ಮಾಡಲು ಮುಂದಾಗಬೇಕು ಎಂದರು.
ಮನೆ ಮನೆಗೆ ಭೇಟಿ: ಪ್ರಮೋದ್ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಗೃಹಿಣಿಯರಿಗೆ ಮನೆಯಲ್ಲಿನ ಲಾರ್ವಾ ನಾಶದ ಬಗ್ಗೆ ಹಾಗೂ ಈಡಿಸ್ ಸೊಳ್ಳೆಗಳ ಉತ್ಪತ್ತಿ ಕುರಿತು ಜಿಲ್ಲಾಧಿಕಾರಿಗಳು ಸ್ವತಃ ಮಾಹಿತಿ ನೀಡಿದರು. ಮಳೆಯಿಂದ ನಿಂತ ನೀರಿಗೆ ಆರೋಗ್ಯ ಹಾಗೂ ನಗರಸಭಾ ಸಿಬಂದಿ ರಾಸಾಯನಿಕ ಸಿಂಪಡಣೆ ಮಾಡಿದರು.
ಡಿಎಚ್‌ಒ ಡಾ| ಐ.ಪಿ ಗಡಾದ್, ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್ ಭಟ್, ತಾಲೂಕು ವೈದ್ಯಾಧಿಕಾರಿ ಡಾ| ವಾಸುದೇವ ಮತ್ತಿತರರು ಉಪಸ್ಥಿತರಿದ್ದರು.