ಉಡುಪಿ: ಕೋವಿಡ್ 19 ವೈರಸ್ ಈಗ ವಿಶ್ವವ್ಯಾಪಿ ಭಯ ಸೃಷ್ಟಿಸಿದೆ. ಈ ಡೆಡ್ಲಿ ವೈರಸ್‌ನ ಸಾಮ್ರಾಜ್ಯ ವಿಸ್ತರಣೆಗೆ ತಡೆಯೊಡ್ಡುವ ನಾನಾ ಪ್ರಯತ್ನಗಳು ವಿಶ್ವದಾದ್ಯಂತ ನಡೆಯುತ್ತಿದೆ. ಇದರ ನಡುವೆ ಉಡುಪಿ ನಗರದಲ್ಲಿ ಡೆಡ್ಲಿ ಕೋವಿಡ್ 19 ವೇಷ ಧರಿಸಿದ ವ್ಯಕ್ತಿಯೊಬ್ಬರು ಸೋಮವಾರ ಗಮನಸೆಳೆದರು.
ಕೋವಿಡ್ 19 ಸೋಂಕು ಹರಡದಂತೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಕೋವಿಡ್ 19 ಅಟ್ಟಹಾಸ ಎನ್ನುವ ಅಣುಕು ಪ್ರದರ್ಶನವನ್ನು ಸೋಮವಾರ ಹಮ್ಮಿಕೊಂಡಿದ್ದರು.
ಮಾರುಥಿ ವೀಥಿಕಾ ರಸ್ತೆಯಲ್ಲಿ ಈ ಅಣುಕು ಪ್ರದರ್ಶನ ನಡೆಯಿತು. ಕೊರೊನಾಸುರ ವೇಷವನ್ನು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಧರಿಸಿದ್ದರು. ಸಾರ್ವಜನಿಕರಲ್ಲಿ ಕೋವಿಡ್ 19 ಸೋಂಕುವಿನ ಕುರಿತು ಜಾಗೃತಿ ಮೂಡಿಸಲು ಈ ವೇಷ ಧರಿಸಲಾಗಿತ್ತು. ಮುಖಕ್ಕೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯು ಹೊರಡಿಸಿರುವ ಆರೋಗ್ಯ ಸುರಕ್ಷಾ ವಿಧಾನಗಳನ್ನು ಪಾಲಿಸುವಂತೆ ನಿತ್ಯಾನಂದ ಒಳಕಾಡು ಅರಿವು ಮೂಡಿಸಿದರು.
ಬೆಳಗ್ಗೆ ಹೊತ್ತು ವೇಷ ಕಂಡು ಬಂದಿದ್ದ ರಿಂದ ದಿನಸಿ ಕೊಂಡೊಯ್ಯಲು ಬಂದಿದ್ದ ಜನರೆಲ್ಲ ಅಚ್ಚರಿಯಿಂದ ವೇಷದ ಕಡೆ ನೋಡಿದರು. ಅಭಿಯಾನಕ್ಕೆ ಅಶ್ವಿನಿ ದೇವಾಡಿಗ, ಶ್ರೀಪಾದ್ ಭಟ್ ರಂಗಭೂಮಿ ಕಲಾವಿದ, ಕೆ. ಬಾಲಗಂಗಾಧರ ರಾವ್, ಲೊಕೇಶ್, ಶಿವಣ್ಣ, ರಾಘವೇಂದ್ರ ಪ್ರಭು ಮೊದಲಾದವರು ಸಹಕರಿಸಿದರು.