ಬ್ರಹ್ಮಾವರ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಅಂಗವಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಜೂ.18ರಂದು ಚೇರ್ಕಾಡಿಯಲ್ಲಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ ಎಂದು ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ಅವರು ಮಾಹಿತಿ ನೀಡಿದರು.
ಚೇರ್ಕಾಡಿ ಯುವಕ ಮಂಡಲದ ವಠಾರದಲ್ಲಿ ಬೆಳಗ್ಗೆ ವಿವಿಧ ಸವಲತ್ತು ವಿತರಣೆ ಮತ್ತು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಸಾಧ್ಯವಾದಷ್ಟು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುವುದು.
ಈಗಾಗಲೇ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ ಮತ್ತು ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ 15 ವಿದ್ಯಾರ್ಥಿಗಳ ತಂಡ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ, ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಬೇಕಾಗಿರುವ ಸವಲತ್ತುಗಳನ್ನು ಪಟ್ಟಿಯನ್ನು ಮಾಡಲಾಗಿದ್ದು, ಈ ದತ್ತಾಂಶಗಳ ಆಧಾರದ ಮೇಲೆ ಅಗತ್ಯವಿರುವ ಕುಟುಂಬಗಳಿಗೆ ಪಡಿತರ ಚೀಟಿ, ವಾಸ್ತವ್ಯ ಪ್ರಮಾಣ ಪತ್ರ ಮೊದಲಾದ ಸವಲತ್ತು ವಿತರಣೆ ಹಾಗೂ ಸಮೀಕ್ಷೆ ಆಧಾರದಲ್ಲಿ ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡದ ಮತ್ತು ಇತರ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಜರಗಲಿದೆ.
ಶಾಸಕ ರಘುಪತಿ ಭಟ್, ಜಿ.ಪಂ ಸಿ.ಇ.ಒ. ಪ್ರಸನ್ನ ಎಚ್., ಪಂಚಾಯತ್ ಅಧ್ಯಕ್ಷೆ ರೇಖಾ ಭಟ್ ಮೊದಲಾದವರು ಉಪಸ್ಥಿತರಿರುವರು. ರಾತ್ರಿ ಚೇರ್ಕಾಡಿ ಮಾ.ಹಿ.ಪ್ರಾ. ಶಾಲೆಯಲ್ಲಿ ಡಿಸಿ ವಾಸ್ತವ್ಯ ಹೂಡಲಿದ್ದು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ತಹಶೀಲ್ದಾರ್ ತಿಳಿಸಿದರು.