Advertisement

“ಉಜ್ವಲ’ರ ಕೈ ಹಿಡಿದ ಉಡುಪಿ ಡಿಸಿ “ರಾಣಿ’

01:00 AM Feb 26, 2019 | Harsha Rao |

ಹುಬ್ಬಳ್ಳಿ/ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್‌ವಸತಿ ಹಾಗೂ ಪುನರ್‌ ನಿರ್ಮಾಣ ಆಯುಕ್ತ ಉಜ್ವಲ್‌
ಕುಮಾರ್‌ ಘೋಷ್‌ ಸೋಮ ವಾರ ಸರಳ ವಿವಾಹವಾಗಿದ್ದಾರೆ. 

Advertisement

ಝಾರ್ಖಂಡ್‌/ಪ. ಬಂಗಾಲ ಗಡಿಯಾದ ಸಾಹಿಬ್‌ಗಂಜ್‌ನ ಬಂಗಾಲಿ ಮೂಲದ ಘೋಷ್‌ 2008ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಆಂಧ್ರಪ್ರದೇಶ ವಿಜಯವಾಡ ಮೂಲದ ಕೊರ್ಲಪಾಟಿ 2011ರ ಬ್ಯಾಚ್‌ ಐಎಎಸ್‌ ಅಧಿಕಾರಿ. ಸೋಮವಾರ ಹುಬ್ಬಳ್ಳಿಯ ವಿವಾಹ ನೋಂದಣಿ ಕಚೇರಿಯಲ್ಲಿ ಕುಟುಂಬ ಸದಸ್ಯರು ಹಾಗೂ ಆಯ್ದ ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಘೋಷ್‌, ಬೀದರ್‌ ಜಿಪಂ ಸಿಇಒ ಆಗಿದ್ದ ವೇಳೆ ಹೆಪ್ಸಿಬಾ, ಬಸವಕಲ್ಯಾಣ ಎಸಿ ಆಗಿದ್ದರು. ಬಳಿಕ ಉಜ್ವಲ್‌, ಕಲಬುರಗಿ ಡಿಸಿ ಆಗಿದ್ದಾಗ ಹೆಪ್ಸಿಬಾ, ಕಲಬುರಗಿ ಜಿಪಂ ಸಿಇಒ ಆಗಿದ್ದರು. ಸೋಮವಾರ ವಿವಾಹವಾದ ಬಳಿಕ ಸಿಹಿ ಹಂಚಿದ ಜೋಡಿ, ನೋಂದಣಿ ಕಚೇರಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಇವಿಎಂನಲ್ಲಿ ಮಾದರಿ ಮತವನ್ನೂ ಚಲಾಯಿಸಿದರು.

ಹಿರಿಯ ಐಎಎಸ್‌ ಅಧಿಕಾರಿಗಳಾದ ಆರ್‌. ವಿಶಾಲ್‌, ಪಿ.ಸಿ. ಜಾಫ‌ರ್‌, ಸುನಿಲ್‌ ಪನ್ವಾರ್‌, ಸುಶೀಲಾ ಈ ಮದುವೆಗೆ ಸಾಕ್ಷಿಗಳಾಗಿ ದಾಖಲೆಗೆ ಸಹಿ ಹಾಕಿದರು. ಧಾರವಾಡ ಡಿಸಿ ದೀಪಾ ಚೋಳನ್‌, ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶ ಕುಮಾರ್‌ ನೂತನ ದಂಪತಿಗೆ ಶುಭ ಹಾರೈಸಿದರು. ಸಬ್‌ ರಿಜಿಸ್ಟ್ರಾರ್‌ ಕಚೇರಿ ಆವರಣದಲ್ಲಿಯೇ ಸರಳ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. 
ಘೋಷ್‌ ಅವರು ಉತ್ತರ ಕನ್ನಡ, ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಯಾಗಿದ್ದರು. ಬೆಳಗಾವಿ ಅಧಿವೇಶನದ ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಕಲಬುರಗಿ, ಚಾಮರಾಜನಗರದಲ್ಲಿ ಜಿ.ಪಂ. ಸಿಇಒ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ ಸ್ಪೆಶಲ್‌ ಪರ್ಪಸ್‌ ವೆಹಿಕಲ್‌ ಆಡಳಿತ ನಿರ್ದೇಶಕರಾಗಿದ್ದು ಫೆ. 7ರಂದು ಉಡುಪಿ ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ್ದರು. 

“ಒಂದು ತಿಂಗಳ ಹಿಂದೆಯೇ ನಾವು ಅರ್ಜಿ ಸಲ್ಲಿಸಿದ್ದೆವು. ಇಂದು ರಜೆ ತೆಗೆದುಕೊಂಡು ಬಂದು ವಿವಾಹವಾದೆವು. ನಮಗೆ ಸರಳ ರೀತಿ ಯಲ್ಲಿ ಮದುವೆಯಾಗಬೇಕೆಂದಿತ್ತು. ಅದರಂತೆ ಮದುವೆಯಾಗಿದೆ. ನಮ್ಮಿಬ್ಬರ ಕಡೆಯ ಹಿರಿಯರು ಆಗಮಿಸಿದ್ದರು’ ಎಂದು ಹೆಪ್ಸಿಬಾ ರಾಣಿ “ಉದಯವಾಣಿ’ಗೆ ತಿಳಿಸಿದ್ದಾರೆ. 

ಮದುವೆ ಮರುದಿನ ಪ್ರಶಸ್ತಿ
ಸ್ಮಾರ್ಟ್‌ ಸಿಟಿಯ ಸವಾಲುಗಳ ಬಗ್ಗೆ ತಯಾರಿಸಿದ ಯೋಜನೆಯಲ್ಲಿ ಹುಬ್ಬಳ್ಳಿ – ಧಾರವಾಡ ಸ್ಮಾರ್ಟ್‌ ಸಿಟಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಗಳವಾರ ದಿಲ್ಲಿಯಲ್ಲಿ ಪ್ರಶಸ್ತಿ ಸ್ವೀಕರಿಸಲಿರುವ ಹೆಪ್ಸಿಬಾ ರಾಣಿಯವರು ಸಂಜೆ ಉಡುಪಿಗೆ ಆಗಮಿಸಲಿದ್ದಾರೆ. 

Advertisement

ಇತ್ತೀಚೆಗೆ, ಫೆ.14ರಂದು ದಾವಣಗೆರೆಯ ಜಿಲ್ಲಾಧಿಕಾರಿಯಾಗಿದ್ದ ಡಾ| ಬಗಾದಿ ಗೌತಮ್‌ ಮತ್ತು ದಾವಣಗೆರೆ ಜಿಪಂ ಸಿಇಒ ಆಗಿದ್ದ ಅಶ್ವತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next