Advertisement

MAHE ಸವಾಲು ಎದುರಿಸಲು ಶಿಕ್ಷಣ ಜತೆಗೆ ಕೌಶಲ ಅಗತ್ಯ: ಪ್ರೊ| ಸೀತಾರಾಮ್‌

11:37 PM Nov 25, 2023 | Team Udayavani |

ಮಣಿಪಾಲ: ಆಧುನಿಕತೆಗೆ ತಕ್ಕಂತೆ ಕೌಶಲದ ಉನ್ನತೀಕರಣವೂ ಆಗಬೇಕು. ಶಿಕ್ಷಣ ಸಂಸ್ಥೆಗಳು ವಿವಿಧ ಕೋರ್ಸ್‌ಗಳ ಪಠ್ಯಕ್ರಮದಲ್ಲಿ ಶೇ. 20ರಷ್ಟಾದರೂ ಕೌಶಲಕ್ಕೆ ಆದ್ಯತೆ ನೀಡ ಬೇಕು. ಮುಂದಿನ 25 ವರ್ಷಗಳಲ್ಲಿ (ಅಮೃತಕಾಲದಲ್ಲಿ) ಭಾರತವೂ ವಿಶ್ವಗುರುವಾಗಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮುಖ್ಯ ಭೂಮಿಕೆಯಾಗಲಿದೆ.

Advertisement

ವಿಶ್ವಗುರು ಹೇಗಾಗಬೇಕು ಎಂಬುದನ್ನು ಮಾಹೆ ವಿಶ್ವವಿದ್ಯಾನಿಲಯವು ಶೈಕ್ಷಣಿಕವಾಗಿ ಬೆಳೆದು ತೋರಿಸಿದೆ ಎಂದು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ| ಟಿ.ಜಿ. ಸೀತಾರಾಮ್‌ ಹೇಳಿದರು.

ಕೆಎಂಸಿ ಗ್ರೀನ್ಸ್ ನಲ್ಲಿ ಶನಿವಾರ ನಡೆದ ಮಾಹೆ ವಿ.ವಿ.ಯ 31ನೇ ಘಟಿಕೋತ್ಸವದ ಮೂರನೆಯ ದಿನದ ಕಾರ್ಯ ಕ್ರಮದಲ್ಲಿ ಪದವೀಧರರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಡಿಜಿಟಲ್‌ ಯುಗದಲ್ಲಿ ನಾವಿದ್ದು, ವೇಗವಾಗಿ ಆಗುತ್ತಿರುವ ಬದಲಾ ವಣೆಗೆ ಒಗ್ಗಿಕೊಳ್ಳಬೇಕು. ವಿದ್ಯಾರ್ಥಿ ಕೇಂದ್ರಿತವಾಗಿರುವ ಎನ್‌ಇಪಿಗೆ ಭಾರತ ವನ್ನು ಶೈಕ್ಷಣಿಕ ರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಎಲ್ಲ ಶಕ್ತಿಯಿದೆ. ನಮ್ಮಲ್ಲಿರುವ ಅಗಾಧ ಜ್ಞಾನವನ್ನು ಸಂಪತ್ತಾಗಿ ಪರಿರ್ತಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಒನ್‌ ಸ್ಟೂಡೆಂಟ್‌ ಒನ್‌ ಐಡೆಂಟಿಟಿ, ಅಕಾಡೆಮಿ ಬ್ಯಾಂಕ್‌ ಆಫ್ ಕ್ರೆಡಿಟ್ಸ್‌ ಹೀಗೆ ಹಲವು ನವೀನ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಪ್ರಸ್ತುತ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸದ ಜತೆಗೆ ಕೌಶಲವನ್ನು ನೀಡುವ ಆವಶ್ಯಕತೆ ಹೆಚ್ಚಿದೆ ಎಂದರು.

Advertisement

ಪದವಿ ಪಡೆದು ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡುವಾಗ ಹಲವು ಸವಾಲುಗಳು ಎದುರಾಗುತ್ತವೆ. ಕಲಿತ ವಿದ್ಯೆಯ ಸದ್ವಿನಿಯೋಗಕ್ಕೆ ಕೌಶಲವೂ ಅಗತ್ಯವಿದೆ. ಕೌಶಲದ ಮೂಲಕ ಸವಾಲು ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಿದೆ ಎಂದು ಹೇಳಿದರು.

ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಘಟಿಕೋತ್ಸವ ಪ್ರಕ್ರಿಯೆ ನಡೆಸಿಕೊಟ್ಟರು. ಮಾಹೆ ಟ್ರಸ್ಟ್ ನ ಟ್ರಸ್ಟಿ ವಸಂತಿ ಆರ್‌. ಪೈ ಪದವೀ ಧರರಿಗೆ ಪದವಿ ಪ್ರದಾನ ಮಾಡಿದರು.

ಸಹಕುಲಪತಿಗಳಾದ ಡಾ| ಮಧು ವೀರರಾಘವನ್‌, ಡಾ| ಎನ್‌. ಎನ್‌. ಶರ್ಮ, ಡಾ| ದಿಲೀಪ್‌ ನಾಯಕ್‌, ಡಾ| ಕೆ. ಶರತ್‌ ಕುಮಾರ್‌ ರಾವ್‌, ಕುಲಸಚಿವ ಡಾ| ಗಿರಿಧರ ಕಿಣಿ, ಮೌಲ್ಯಮಾಪನ ಕುಲಸಚಿವ ಡಾ| ವಿನೋದ್‌ ಥಾಮಸ್‌, ವಿವಿಧ ವಿಭಾಗಗಳ ನಿರ್ದೇಶಕರು, ಜಂಟಿ ನಿರ್ದೇಶಕರು, ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.

ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಪ್ರಸ್ತಾವನೆಗೈದರು. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌ ಸ್ವಾಗತಿಸಿ, ಎಂಐಟಿ ನಿರ್ದೇಶಕ ಕ| ಡಾ| ಅನಿಲ್‌ ರಾಣ ಅತಿಥಿ ಪರಿಚಯ ಮಾಡಿದರು. ವಾಗಾÏ ಪ್ರಾಂಶುಪಾಲ ಚೆಫ್‌ ಡಾ| ಕೆ. ತಿರುಜ್ಞಾನಸಂಬಾತಮ್‌ ವಂದಿಸಿದರು. ಮೌಲ್ಯಮಾಪನ ವಿಭಾಗದ ಡೆಪ್ಯೂಟಿ ರಿಜಿಸ್ಟ್ರಾರ್‌ ಡಾ| ಶ್ರೀಜಿತ್‌ ಜಿ. ಪ್ರತಿಜ್ಞಾವಿಧಿ ಬೋಧಿಸಿದರು. ಸ್ಟೂಡೆಂಟ್ಸ್‌ ಅಫೈರ್ ನಿರ್ದೇಶಕಿ ಡಾ| ಗೀತಾ ಮಯ್ಯ ಚಿನ್ನದ ಪದಕ ವಿಜೇತರ ಪಟ್ಟಿ, ಸೆಂಟರ್‌ ಫಾರ್‌ ಡಾಕ್ಟೋರಲ್‌ ಸ್ಟಡೀಸ್‌ನ ಡೆಪ್ಯೂಟಿ ಡೈರೆಕ್ಟರ್‌ ಡಾ| ವಸುಧಾ ದೇವಿ ಪಿಎಚ್‌ಡಿ ಪದವೀಧರರ ಪಟ್ಟಿ, ಆನ್‌ಲೈನ್‌ ಎಜುಕೇಶನ್‌ ನಿರ್ದೇಶಕ ಡಾ| ಮನೋಜ್‌ ಕುಮಾರ್‌ ನಾಗಸಂಪಿಗೆ ವಿದೇಶಿ ಪದವೀಧರರ ಪಟ್ಟಿ ವಾಚಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಡಾ| ಇವೆರಿಲ್‌ ಜಾಕ್ಲಿನ್‌ ಫೆರ್ನಾಂಡಿಸ್‌ ನಿರೂಪಿಸಿದರು.

ಕೆಎಂಸಿ ಮಣಿಪಾಲದ ಮಾಧವಿ ಪೈ ಮತ್ತು ಮಣಿಪಾಲ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಆ್ಯಂಡ್‌ ಪ್ಲಾನಿಂಗ್‌ನ ಭಾವನಾ ಚೌಧರಿ ಅವರಿಗೆ ಬೆಸ್ಟ್‌ ಔಟ್‌ಸ್ಟಾಂಡಿಂಗ್‌ ಸ್ಟೂಡೆಂಟ್ಸ್‌ಗಾಗಿ ನೀಡುವ ಡಾ| ಟಿಎಂಎ ಪೈ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಶನಿವಾರ 2 ಚಿನ್ನದ ಪದಕ, 44 ಪಿಎಚ್‌ಡಿ, 8 ಆನ್‌ಲೈನ್‌ ಪದವಿ ಸಹಿತ ವಿವಿಧ ವಿಭಾಗದ 1,338 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next