Advertisement

Udupi: ಆಸ್ಪತ್ರೆ ಕಟ್ಟಡ ಹೊಂಡದಿಂದ ಅಪಾಯ!

06:25 PM Oct 23, 2024 | Team Udayavani |

ಉಡುಪಿ: ನಗರದ ಕೆಎಂ ಮಾರ್ಗ ನಗರಸಭೆ ಎದುರಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ತೋಡಿದ್ದ ಬೃಹತ್‌ ಹೊಂಡ ಹಲವು ವರ್ಷಗಳಿಂದ ಹಾಗೆಯೇ ಇದ್ದು, ಪ್ರಸ್ತುತ ಇದು ಅಪಾಯಕಾರಿ ಸ್ವರೂಪದಲ್ಲಿದೆ.

Advertisement

ಇದಕ್ಕೆ ತಾಗಿಕೊಂಡಿರುವ ರಸ್ತೆಯ ಕಾಂಪೌಂಡ್‌ ಗೋಡೆಯು ಸಹ ಬೀಳುವ ಹಂತದಲ್ಲಿದೆ. ಅಲ್ಲದೆ ಈ ಜಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದ್ದು, ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ. ಪರಿಸರದಲ್ಲಿ ಸೊಳ್ಳೆ ಹರಡುವ ಭೀತಿ ಜನರನ್ನು ಕಾಡುತ್ತಿದೆ.

ಈ ಗುಂಡಿಯ ಅಕ್ಕಪಕ್ಕ ಗಿಡಗಂಟಿಗಳ ರಾಶಿ ಬೆಳೆದುಕೊಂಡಿದೆ. ಇಲ್ಲಿ ವಿಷ ಜಂತುಗಳು, ಅಪಾಯಕಾರಿ ಸರೀಸೃಪಗಳು ವಾಸವಿರುವ ಸಾಧ್ಯತೆ ಇದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೆ ಸುರಕ್ಷತೆ ದೃಷ್ಟಿಯಿಂದ ಎತ್ತರದ ಕಬ್ಬಿಣ ಶೀಟ್‌ಗಳನ್ನು ಸುತ್ತಲೂ ಅಳವಡಿಸಲಾಗಿದ್ದರೂ, ಕೆಲವರು ಒಳಹೋಗಿ ತ್ಯಾಜ್ಯ ಎಸೆಯುವುದು ಸಹಿತ ಮದ್ಯಪಾನ, ಇನ್ನಿತರೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನಡೆಯುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭದಲ್ಲಿ ವ್ಯವಸ್ಥಿತವಾಗಿದ್ದರೂ ಅನಂತರ ದಿನಗಳಲ್ಲಿ ಕಾರಣಾಂತರಗಳಿಂದ ಇಡೀ ಯೋಜನೆಗೆ ಹಿನ್ನಡೆಯಾಗಿ ಇದೀಗ ಸಂಪೂರ್ಣ ಸರಕಾರಿ ಹಿಡಿತದಲ್ಲೆ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇಲ್ಲಿಯೂ ಮೂಲ ಸೌಕರ್ಯ ಮತ್ತು ನಿರ್ವಹಣೆ ಸಮಸ್ಯೆಗಳಿದ್ದರೂ, ಸದ್ಯಕ್ಕೆ ಆಸ್ಪತ್ರೆ ಸೇವೆ ಸರಕಾರಿ ಆಸ್ಪತ್ರೆ ಮಾದರಿಯಲ್ಲಿ ಎಂದಿನಂತೆ ನಡೆಯುತ್ತಿದೆ.

Advertisement

ಭೂಪದರ ಕುಸಿಯುವ ಆತಂಕ
ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಯೋಜನೆ ಭಾಗವಾಗಿ ತೋಡಲಾಗಿದ್ದ ಈ ಗುಂಡಿ ಅಡಿಪಾಯ ಕೆಲಸ ನಡೆಯುತ್ತಿರುವಾಗಲೇ ಅರ್ಧಕ್ಕೆ ನಿಂತಿದೆ. ಪಿಲ್ಲರ್‌ ಏರಿಸಲು ಸರಳುಗಳನ್ನು ಕಟ್ಟಿರುವುದು ಹಾಗೇ ಇದೆ. ಈಗಾಗಲೆ ಹಲವು ಮಳೆಗಾಲದಲ್ಲಿ ನೀರು ತುಂಬಿಕೊಂಡು ಬತ್ತಿರುವ ಪ್ರಕ್ರಿಯೆ ಕೆಲವು ವರ್ಷಗಳಿಂದ ನಡೆಯುತ್ತಿದೆ. ಸಾಕಷ್ಟು ಆಳವಾದ ಗುಂಡಿ ಖಾಲಿ ಇರುವುದರಿಂದ ಸುತ್ತಮುತ್ತಲಿನ ಭೂ ಪದರವು ಸಡಿಲಗೊಂಡು ಗುಂಡಿಯ ಕಡೆಗೆ ಜರಿಯುವ ಸಾಧ್ಯತೆ ಹೆಚ್ಚಿದೆ. ಪರಿಣಾಮ ರಸ್ತೆ ಮತ್ತು ಸುತ್ತಮುತ್ತಲಿನ ಕಟ್ಟಡಗಳಿಗೂ ಈ ಅಪಾಯ ಎದುರಾಗುವ ಸಾಧ್ಯತೆ ಇದೆ ತಜ್ಞರ ಅಭಿಪ್ರಾಯವಾಗಿದೆ.

ಮಣ್ಣು ತುಂಬಿಸಲು ಸಲಹೆ
ಕೆರೆಯಂತಾದ ಈ ಹೊಂಡಕ್ಕೆ ಮಣ್ಣು ತುಂಬಿಸಿ ಭರ್ತಿ ಮಾಡಲು ಬಹುತೇಕರು ಸಲಹೆ ನೀಡಿದ್ದಾರೆ. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಪ್ರತಿಭಟನೆಯನ್ನೂ ನಡೆಸಿದ್ದರು. ಸರಕಾರಿ ಸಂಬಂ ಧಿತ ಯೋಜನೆ, ರಸ್ತೆ ವಿಸ್ತರಣೆ ವೇಳೆ ದೊರೆಯುವ ಮಣ್ಣು, ಕಾಂಕ್ರಿಟ್‌ ತುಂಡುಗಳನ್ನು ಇಲ್ಲಿ ತುಂಬಿಸಿ ಎಂದಿನಂತೆ ಸಮತಟ್ಟು ಮಾಡುವಂತೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ನಗರಸಭೆ ಪೂರಕ ಕ್ರಮ ತೆಗೆದುಕೊಳ್ಳಲು ನಾಗರಿಕರು ಆಗ್ರಹಿಸಿದ್ದಾರೆ.

ಜಿಲ್ಲಾಡಳಿತದ ಸಹಕಾರ ಅಗತ್ಯ
ಆಸ್ಪತ್ರೆ ನಿರ್ಮಾಣ ಯೋಜನೆ ಅರ್ಧಕ್ಕೆ ನಿಂತ ಬಳಿಕ ಕಟ್ಟಡ ನಿರ್ಮಾಣಕ್ಕೆ ತೋಡಿದ್ದ ಗುಂಡಿ ಸಾಕಷ್ಟು ಆಳ ಹೊಂದಿದೆ. ನಗರದ ಮಧ್ಯೆ ಇರುವುದರಿಂದ ಹಲವು ಸಮಸ್ಯೆಗಳಿಗೂ ಕಾರಣವಾಗಿದೆ. ಇದಕ್ಕೆ ಪರಿಹಾರವಾಗಿ ಕ್ರಮ ತೆಗೆದುಕೊಳ್ಳಲು ನಗರಸಭೆಗೂ ಸಾಧ್ಯವಿಲ್ಲದಂತಾಗಿದೆ. ಮಣ್ಣು ತುಂಬಿಸಿ ಭರ್ತಿ ಮಾಡಲು ಸಾಕಷ್ಟು ಅನುದಾನ ಅಗತ್ಯವಿದೆ. ಜಿಲ್ಲಾಡಳಿತ ಸಹಕಾರ ನೀಡಿದಲ್ಲಿ ಈ ಬಗ್ಗೆ ಕ್ರಮವಹಿಸಿ ಪರಿಹಾರ ಕಂಡುಕೊಳ್ಳಬಹುದು.
– ಪ್ರಭಾಕರ್‌ ಪೂಜಾರಿ, ಅಧ್ಯಕ್ಷರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next