ಕೊಟ್ಟಿಗೆಹಾರ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸೋಮವಾರ ಬಣಕಲ್, ಬಾಳೂರು ಹೋಬಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಮಧ್ಯಾಹ್ನ ಬಣಕಲ್ ಕೆ.ಎಂ.ರಸ್ತೆಯಲ್ಲಿ ಹಾಗೂ ಬಾಳೂರಿನಲ್ಲಿ ಸಂಜೆ ಚುನಾವಣ ಪ್ರಚಾರ ಮಾಡಿ ಬಹಿರಂಗ ಸಭೆ ನಡೆಸಿದರು.
10ವರ್ಷವಾದರೂ ಹೆದ್ದಾರಿ ಕಾಮಗಾರಿ ಪೂರ್ಣವಾಗಿಲ್ಲ.. ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ
ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ ಅವರು ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ಕುರಿತು ಕೇಂದ್ರ ಸಚಿವೆ , ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು. ಇಲ್ಲಿನ ರಾಜ್ಯ ಹೆದ್ದಾರಿ ನಾನು ಸಂಸದನಾಗಿದ್ದ ವೇಳೆ ಅನುಮೋದನೆಯಾಗಿದ್ದು ಆಗ ಆಸ್ಕರ್ ಫರ್ನಾಂಡಿಸ್ ಅವರು ಭೂ ಸಾರಿಗೆ ಸಚಿವರಾಗಿದ್ದರು. ಕಡೂರು-ಚಿಕ್ಕಮಗಳೂರು-ಮೂಡಿಗೆರೆ -ಬಿ.ಸಿ.ರೋಡ್ ರಸ್ತೆ, ತುಮಕೂರಿನಿಂದ ಶಿವಮೊಗ್ಗ ಮತ್ತು ತೀರ್ಥಹಳ್ಳಿಯಿಂದ ಮಲ್ಪೆಯ ರಸ್ತೆ ಕಾಮಗಾರಿ ಕುರಿತು ನಾನೇ ಪತ್ರ ಬರೆದಿದ್ದೆ. ಅದರ ಅನುಮೋದನೆ ಆವತ್ತು ಆಗಿತ್ತು. ಆದರೆ 10 ವರ್ಷವಾದರೂ ಕಾಮಗಾರಿ ಪೂರ್ಣವಾಗಿಲ್ಲ. 10 ವರ್ಷಗಳ ಕಾಲ ಒಂದು ರಸ್ತೆ ಮಾಡಲು ಬೇಕಾ? ಕಾಮಗಾರಿ 10 ವರ್ಷ ಮುಂದಕ್ಕೆ ಹೋದರೆ ಅದರ ನಿಮಾಣ ವೆಚ್ಚ ಎಷ್ಟಾಗುತ್ತದೆ? ತಡವಾದದ್ದು ಮಾತ್ರವಲ್ಲ ಅದರಿಂದ ಅಪಘಾತಗಳು ಎಷ್ಟಾಗಿವೆ ಎಂದು ಪ್ರಶ್ನಿಸಿದರು.
ಉಡುಪಿಯಲ್ಲಿ ಹೆದ್ದಾರಿ ಅಂಡರ್ ಪಾಸ್ ಮಾಡುತ್ತಿದ್ದಾರೆ, ಅಲ್ಲಿಯೂ ಕಾಮಗಾರಿ ವರ್ಷಗಟ್ಟಲೆ ಹಾಗೆ ನಿಂತಿದೆ. ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಜನ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಮೀನುಗಾರ ಮುಖಂಡರು ಉಡುಪಿಯಲ್ಲಿ ಸಂಸದೆಯನ್ನು ಪ್ರಶ್ನಿಸಿದ್ದರು. ಆಗ ಅವರು ಜಯಪ್ರಕಾಶ್ ಹೆಗ್ಡೆ ಅವರನ್ನು ಏಕೆ ಪ್ರಶ್ನಿಸಲಿಲ್ಲ ಎಂದು ಕೇಳಿದರು. ನನಗೆ ಸಿಕ್ಕಿದ್ದು ಎರಡೇ ವರ್ಷ, ಮುಂದಿನ ಐದು ವರ್ಷ ಸಿಕ್ಕಿದ್ದೇ ಆದರೆ ಕಾಮಗಾರಿ ಪೂರ್ಣ ಗೊಳಿಸುತ್ತಿದ್ದೆ ಎಂದು ತಿರುಗೇಟು ನೀಡಿದರು.
ಸಂಸದೆ ಶೋಭಾ ಕರಂದ್ಲಾಜೆ ಅವರು ಮಾಡಿದ ಹಾಗೆ ನಾನೂ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಅದರ ಅರ್ಥ ಅವರೂ ಮಾಡಲಿಲ್ಲ, ಇವರೂ ಮಾಡುವುದಿಲ್ಲ ಎಂದರು.
ಕಡೂರು-ಬಿ.ಸಿ.ರೋಡ್ ರಸ್ತೆ ತುಂಬಾ ಅಗತ್ಯವಿದೆ. ಜನಪ್ರತಿನಿಧಿಗಳು ಸ್ಥಳವೀಕ್ಷಣೆ ಮಾಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕಾದ ಕೆಲಸ ಮಾಡಬೇಕಾಗಿದೆ ಎಂದರು.
ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವೆ ಮೋಟಮ್ಮ,ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಗೌಡ, ಬಣಕಲ್ ಹೋಬಳಿ ಘಟಕದ ಅಧ್ಯಕ್ಷ ಟಿ.ಎಂ.ಸುಬ್ರಮಣ್ಯ, ಬಣಕಲ್ ಘಟಕದ ಅಧ್ಯಕ್ಷ ಟಿ.ಎಂ.ಸುಬ್ರಮಣ್ಯ ಮತ್ತಿತರ ಮುಖಂಡರು ಭಾಗವಹಿಸಿದ್ದರು.