ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಮುಗಿದು ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡಿಗೆ ಜಾರಿದ್ದರೂ ಸೋಲು ಗೆಲುವಿನ ಲೆಕ್ಕಾಚಾರ ಮಾತ್ರ ವ್ಯಾಪಕವಾಗಿ ನಡೆಯುತ್ತಿದೆ. ಎರಡೂ ಪಕ್ಷದವರು ಗೆಲವು ನಮ್ಮದೇ ಎನ್ನುತ್ತಿದ್ದಾರೆ. ಮತ ದಾರರದ್ದು ಮಾತ್ರ ಇಬ್ಬರಿಗೂ ಫಿಫ್ಟಿ -ಫಿಫ್ಟಿ ಅವಕಾಶ ಎಂಬ ಅಂಬೋಣ.
ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಜಿಲ್ಲೆ ಬರುವುದರಿಂದ ಉಡುಪಿಯಲ್ಲಿ ನಾಲ್ವರು ಬಿಜೆಪಿ ಶಾಸಕರು ಹಾಗೂ ಚಿಕ್ಕಮಗಳೂರಿನ ನಾಲ್ಕೂ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಭಿನ್ನ ರೀತಿಯಲ್ಲಿ ಚುನಾವಣೆಯನ್ನು ವಿಶ್ಲೇಷಿಸ ಲಾಗುತ್ತಿದೆ.ಯಾರೇ ಗೆದ್ದರೂ ಅತ್ಯಂತ ಸಣ್ಣ ಮಾರ್ಜಿನ್‌ನಲ್ಲಿ ಗೆಲ್ಲಬಹುದು. ದಾಖಲೆಯ ಗೆಲುವು ಅಥವಾ ದೊಡ್ಡ ಅಂತರದ ಗೆಲವು ಸಿಗುವುದು ಕಷ್ಟ ಎಂಬುದು ಎರಡೂ ಪಕ್ಷದ ಮುಖಂಡರು ಒಪ್ಪಿಕೊಳ್ಳುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಪಕ್ಷದ ಅಭ್ಯರ್ಥಿಗೆ ಲೀಡ್ ಬಂದರೆ, ಇನ್ನೊಂದು ಪಕ್ಷದ ಅಭ್ಯರ್ಥಿ ತೀವ್ರ ಹೋರಾಟ ನೀಡಲಿದ್ದಾರೆ. ಹಾಗೆಯೇ ಚಿಕ್ಕಮಗಳೂರಿನಲ್ಲಿ ತೀವ್ರ ಪೈಪೋಟಿ ನೀಡಿದ ಪಕ್ಷದ ಅಭ್ಯರ್ಥಿಗೆ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಬರುವ ಸಾಧ್ಯತೆ ಯಿದೆ ಹಾಗೂ ಇನ್ನೊಂದು ಪಕ್ಷದ ಅಭ್ಯರ್ಥಿ ಇಲ್ಲಿ ಪ್ರಬಲ ಹೋರಾಟ ನೀಡಲಿದ್ದಾರೆ. ಹೀಗಾಗಿ ಯಾರೇ ಗೆದ್ದರೂ ಅದು ಕನಿಷ್ಠ ಅಂತರದ ಗೆಲುವಾಗಲಿದೆ ಎಂಬ ಮಾತುಗಳು ಕ್ಷೇತ್ರದುದ್ದಕ್ಕೂ ಕೇಳಿ ಬರುತ್ತಿವೆ.
ಪಕ್ಷಗಳ ಲೆಕ್ಕಾಚಾರ
ಚುನಾವಣೆ ಮುಗಿದ ದಿನದಿಂದಲೇ ಎರಡೂ ಪಕ್ಷದ ನಾಯಕರು ಪ್ರತಿ ಬೂತ್‌ಗಳಿಂದ ತಮ್ಮ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆದು ಕೊಂಡು ಯಾವ ವಿಧಾನಸಭಾ ಕ್ಷೇತ್ರದ ಯಾವ ಬೂತ್‌ನಲ್ಲಿ ತಮ್ಮ ಪಕ್ಷಕ್ಕೆ ಎಷ್ಟೆಷ್ಟು ಮತ ಬಂದಿರಬಹುದು ಎಂಬುದರ ಲೆಕ್ಕಾಚಾರ ಹಾಕಿದ್ದಾರೆ. ಎಲ್ಲ ಬೂತ್‌ಗಳ ಅಂದಾಜು ಮತ ಗಳನ್ನು ಕ್ರೋಡೀಕರಿಸಿಕೊಂಡು, ಜಾತಿ ಲೆಕ್ಕಾಚಾರದಲ್ಲಿ ನಿರ್ದಿಷ್ಟ ಮತಗಳ ಅಂತರದ ಗೆಲವು ಬರಲಿದೆ ಎಂಬುದನ್ನು ಎರಡೂ ಪಕ್ಷಗಳಲ್ಲೂ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಬೂತ್‌ಗಳಿಂದ ಬಂದಿರುವ ಮಾಹಿತಿ ಪಕ್ಷಗಳ ಲೆಕ್ಕಾಚಾರದ ಪ್ರಕಾರ ಪಕ್ಕ ಇರಲಿದೆ. ಹೀಗಾಗಿ ಎರಡೂ ಪಕ್ಷಗಳು ಗೆಲುವಿನ ನಿರೀಕ್ಷೆಯಲ್ಲಿವೆ.
ರಾಜ್ಯ ಸರಕಾರದ 5 ಗ್ಯಾರಂಟಿ ಒಂದು ಕಡೆಯಾದರೆ ಮೋದಿಯೇ ಗ್ಯಾರಂಟಿ ಇನ್ನೊಂದು ಕಡೆ ಪ್ರಚಾರದಲ್ಲಿ ಹೆಚ್ಚು ಬಳಕೆಯಾಗಿತ್ತು. ಈಗ ಎಲ್ಲೆಡೆ ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಪಡಸಾಲೆಯಿಂದ ಕೋಟ ಶ್ರೀನಿವಾಸ ಪೂಜಾರಿ ಜಯ ಸಾಧಿಸಲಿದ್ದಾರೆ ಎಂಬ ಧ್ವನಿ ಕೇಳಿಬಂದರೆ, ಕಾಂಗ್ರೆಸ್ ಪಡಸಾಲೆಯಿಂದ ಜಯಪ್ರಕಾಶ್ ಹೆಗ್ಡೆಯವರು ಜಯ ಸಾಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಾರ್ವಜನಿಕವಾಗಿ ಬಸ್ ನಿಲ್ದಾಣ, ಶಾಪಿಂಗ್ ಮಾಲ್ ಇತ್ಯಾದಿ ಕಡೆಗಳಲ್ಲಿ ಇಬ್ಬರಿಗೂ ಅವಕಾಶ ಇದೆ ಎಂಬುದು ಕೇಳ ಸಿಗುತ್ತಿದೆ. ಈ ಎಲ್ಲದರ ಮಧ್ಯೆ ರಾಜ್ಯ ಸರಕಾರದ ಗ್ಯಾರಂಟಿ, ಮೋದಿ ಅಲೆ, ಹಿಂದುತ್ವ ಇತ್ಯಾದಿಗಳು ಹೇಗೆ ಮತವಾಗಿ ಪರಿವರ್ತನೆಯಾಗಿದೆ ಎಂಬುದೂ ಮುಖ್ಯವಾಗುತ್ತದೆ.
ಜೂ. 4ರ ವರೆಗೆ ಕಾಯಲೇಬೇಕು
ಚುನಾವಣ ಕಾಳಗದಲ್ಲಿ ಯಾರು ವಿಜಯ ಮಾಲೆ ಹಾಕಿಕೊಳ್ಳುತ್ತಾರೆ ಎನ್ನುವುದು ಜೂ. 4ರಂದು ತಿಳಿಯಲಿದೆ. ಅಲ್ಲಿಯವರೆಗೂ ಕಾಯಲೇ ಬೇಕು. ಫಲಿತಾಂಶಕ್ಕೆ ಇನ್ನೂ ಒಂದುವರೆ ತಿಂಗಳು ಇರುವುದರಿಂದ ಬೆಟ್ಟಿಂಗ್ ದಂಧೆ ಕೂಡ ಅಲ್ಲಲ್ಲಿ ತಲೆ ಎತ್ತುತ್ತಿದೆ.