Advertisement

ಉಡುಪಿ ಸಹಜ ಸ್ಥಿತಿಗೆ; 7 ಪ್ರಕರಣ ದಾಖಲು,10 ಮಂದಿ ವಶಕ್ಕೆ

09:47 AM Sep 12, 2018 | Team Udayavani |

ಉಡುಪಿ: ಸೋಮವಾರದ ಭಾರತ ಬಂದ್‌ ಸಂದರ್ಭ ಉಡುಪಿಯಲ್ಲಿ ನಡೆದ ಕಾಂಗ್ರೆಸ್‌ – ಬಿಜೆಪಿ ನಡುವಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ಪೊಲೀಸ್‌ ವಶದಲ್ಲಿದ್ದಾರೆ. ಪೊಲೀಸರು ಸ್ವಯಂ ಪ್ರೇರಿತರಾಗಿ 3 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬಲವಂತದ ಬಂದ್‌ಗೆ ಸಂಬಂಧಿಸಿ 1, ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿ ಒಂದು ಹಾಗೂ ಪರಸ್ಪರ ಹಲ್ಲೆಗೆ ಸಂಬಂಧಿಸಿ 2 ಪ್ರಕರಣಗಳು ಉಡುಪಿ ಮತ್ತು ಮಣಿಪಾಲ ಠಾಣೆಗಳಲ್ಲಿ ದಾಖಲಾಗಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಒಟ್ಟು 30ರಿಂದ 40 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

Advertisement

ಗಾಯಾಳುಗಳಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಬಿಜೆಪಿಯ 6 ಮತ್ತು ಕಾಂಗ್ರೆಸ್‌ನ 4 ಮಂದಿ ಚಿಕಿತ್ಸೆ ಜತೆಗೆ ಪೊಲೀಸ್‌ ನಿಗಾದಲ್ಲಿದ್ದಾರೆ. ಆರೋಪಿಗಳೂ ಆಗಿರುವುದರಿಂದ ಇವರು ಪೊಲೀಸ್‌ ವಶದಲ್ಲಿರುತ್ತಾರೆ. ಘರ್ಷಣೆಗೆ ಸಂಬಂಧಿಸಿ ಎರಡೂ ಪಕ್ಷಗಳ ಕಾರ್ಯಕರ್ತರ ವಿರುದ್ಧವೂ ಒಂದೇ ರೀತಿಯ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹೆಚ್ಚುವರಿ ಪೊಲೀಸ್‌ ನಿಯೋಜನೆ
ಮಂಗಳವಾರ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಉಡುಪಿಯಲ್ಲಿ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋ ಜಿಸಲಾಗಿದೆ. ಕುಂದಾ ಪುರಕ್ಕೆ ಒಂದು ಕೆಎಸ್‌ಆರ್‌ಪಿ ತುಕಡಿ ಕಳುಹಿಸಿ ಕೊಡಲಾಗಿದೆ. ಲಾಠಿಚಾರ್ಜ್‌ ಮತ್ತು ಘರ್ಷಣೆ ಕುರಿತಾಗಿ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಮಂಗಳವಾರ ಕೂಡ ಮಾಹಿತಿ ಪಡೆದುಕೊಂಡಿದ್ದಾರೆ.

ರಾಡ್‌ನಿಂದ ಹಲ್ಲೆ
“ಕಾಂಗ್ರೆಸ್‌ ಕಾರ್ಯಕರ್ತರು ನ‌ನ್ನ ಮೇಲೆ ರಾಡ್‌ನಿಂದ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾರೆ. ಪಕ್ಷದ ಧ್ವಜ ವನ್ನು ಕಾಲಿನಿಂದ ತುಳಿದಿದ್ದಾರೆ’ ಎಂದು ಪ್ರಭಾಕರ ಪೂಜಾರಿ ಅವರು ಕಾಂಗ್ರೆಸ್‌ನ ಪ್ರಖ್ಯಾತ್‌ ಶೆಟ್ಟಿ, ರಮೇಶ್‌ ಕಾಂಚನ್‌, ಯತೀಶ್‌ ಕರ್ಕೇರ, ಸತೀಶ್‌ ಅಮೀನ್‌ ಪಡುಕೆರೆ, ಸುರೇಶ್‌ ಕುಂದರ್‌, ಜನಾರ್ದನ ಭಂಡಾರ್‌ಕರ್‌ ಸೇರಿದಂತೆ 25ಕ್ಕೂ ಅಧಿಕ ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಭಾಕರ ಪೂಜಾರಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರತಿ ದೂರು
ಪ್ರಭಾಕರ ಪೂಜಾರಿ, ದಿನಕರ ಪೂಜಾರಿ, ಯೋಗೀಶ್‌ ಸಾಲ್ಯಾನ್‌, ರಾಕೇಶ್‌ ಜೋಗಿ, ಶರತ್‌ ಬೈಲಕೆರೆ, ದಿನೇಶ್‌ ಅಮೀನ್‌, ಗಿರೀಶ್‌ ಅಂಚನ್‌ ಹಾಗೂ ಇತರರು ಕಲ್ಲಿನಿಂದ ಹಲ್ಲೆ ನಡೆಸಿರುವುದಾಗಿ ಕಾಂಗ್ರೆಸ್‌ನ ಗೋಪಾಲ ಪೂಜಾರಿ ದೂರು ನೀಡಿದ್ದಾರೆ. 

Advertisement

ಬಲವಂತದ ಬಂದ್‌ ವಿರುದ್ಧ  ಕೇಸ್‌
ಮಣಿಪಾಲ ಟೈಗರ್‌ ಸರ್ಕಲ್‌ ಬಳಿ ಆಟೋರಿಕ್ಷಾ ನಿಲ್ದಾಣ ಬಂದ್‌ ಮಾಡಬೇಕೆಂದು ಆಗ್ರಹಿಸಿ  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಿರುವ ಪ್ರಕರಣದಲ್ಲಿ ಕಾಂಗ್ರೆಸ್‌ನ ಪ್ರಖ್ಯಾತ್‌ ಶೆಟ್ಟಿ, ಪ್ರಶಾಂತ್‌ ಪೂಜಾರಿ, ಯತೀಶ್‌ ಕರ್ಕೇರಾ, ರಮೇಶ್‌ ಕಾಂಚನ್‌ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾಠಿಚಾರ್ಜ್‌ ಅನಿವಾರ್ಯವಾಗಿತ್ತು: ಎಸ್‌ಪಿ
“ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಮನವಿಗೆ ಸ್ಪಂದಿಸದೇ ಇದ್ದಾಗ ಲಾಠಿ ಚಾರ್ಜ್‌ ಮಾಡುವುದು ಅನಿವಾರ್ಯವಾಯಿತು.ಇಲ್ಲವಾದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು. ಬಳಿಕ ಪರಿಸ್ಥಿತಿ ಪೂರ್ಣ ಹತೋಟಿಗೆ ಬಂದಿತ್ತು. ಕೆಲವರ ವಿರುದ್ಧ ನಾವಾಗಿಯೇ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವೀಡಿಯೋ ಮತ್ತಿತರ ಮಾಹಿತಿಗಳ ಆಧಾರದಲ್ಲಿ ಮತ್ತಷ್ಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗುವುದು’ ಎಂದು ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next