Advertisement

ಕೃಷ್ಣನೂರಲ್ಲಿ ತಾವರೆಯ ಕಂಪು: 5 ಕ್ಷೇತ್ರಗಳು

12:54 AM Feb 01, 2023 | Team Udayavani |

ಕರಾವಳಿಯ ಮತ್ತೊಂದು ಜಿಲ್ಲೆ ಉಡುಪಿಯೂ ಈಗ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. ಆರಂಭದಿಂದಲೂ ಈ ಜಿಲ್ಲೆ ಕಾಂಗ್ರೆಸ್‌ನ ಗಟ್ಟಿ ನೆಲೆಯಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಬದಲಾದ ರಾಜಕೀಯದಲ್ಲಿ ಬಿಜೆಪಿಯತ್ತ ತಿರುಗಿತು. ಕಳೆದ ಬಾರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆದ್ದಿತ್ತು. ಅತ್ತ ಕೊಡಗು ಜಿಲ್ಲೆ ಕೂಡ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಭದ್ರ ನೆಲೆಯಾಗಿ ಪರಿವರ್ತನೆಯಾಗಿದೆ.

Advertisement

ಉಡುಪಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಕರಾವಳಿಯ ಸಮುದ್ರ ಹಾಗೂ ಮಲೆನಾಡಿನ ಹಸುರು ವನಸಿರಿಯ ಸೆರಗಿನಲ್ಲಿರುವ ಉಡುಪಿಯಲ್ಲೂ ವಿವಿಧ ಪಕ್ಷಗಳ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. 2004ರ ಮೊದಲು ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಬ್ರಹ್ಮಾವರ ಹಾಗೂ ಕಾಪು ಹೀಗೆ ಆರು ವಿಧಾನಸಭಾ ಕ್ಷೇತ್ರಗಳಿದ್ದವು. 2004ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರ ಮರುವಿಂಗಡಣೆಯ ಅನಂತರದಲ್ಲಿ ಒಂದು ಕ್ಷೇತ್ರ ಕಡಿಮೆಯಾಯಿತು, ಮಾತ್ರವಲ್ಲದೆ ಉಳಿದ ಐದು ಕ್ಷೇತ್ರಗಳ ವ್ಯಾಪ್ತಿಯೂ ವಿಸ್ತಾರವಾಯಿತು. ಬ್ರಹ್ಮಾವರ ಕ್ಷೇತ್ರದ ಬಹುಪಾಲು ಗ್ರಾಮಗಳು ಉಡುಪಿ, ಕುಂದಾಪುರ ಕ್ಷೇತ್ರದ ಪಾಲಾದವು. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ವ್ಯತ್ಯಾಸಗಳಾಗಿವೆ. ಹೊಸ ರೀತಿಯ ರಾಜಕೀ ಯವು ಆರಂಭವಾಯಿತು. ಮೂರು ಬಾರಿ ಶಾಸಕರಾದವರು ಕ್ಷೇತ್ರ ಹೋದ ಅನಂತರ ಶಾಸಕರಾಗಲೂ ಸಾಧ್ಯವಾಗಿಲ್ಲ.

ಉಡುಪಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆ ಬೇರ್ಪಟ್ಟ ಅನಂತರದಲ್ಲಿ ಜಿಲ್ಲಾ ಕೇಂದ್ರವಾಗಿರುವ ಉಡುಪಿ ವಿಧಾನಸಭೆ ಕ್ಷೇತ್ರಕ್ಕೆ ತನ್ನದೇ ಇತಿಹಾಸವಿದೆ. 1952ರಲ್ಲಿ ಮದ್ರಾಸ್‌ ವಿಧಾನಸಭೆ ಚುನಾವಣೆ ನಡೆದಾಗ ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ತೋನ್ಸೆ ಅನಂತ ಪೈ(ಟಿ.ಎ.ಪೈ) ಅವರು ಸ್ಪರ್ಧಿಸಿ, ಜಯ ಸಾಧಿಸಿದ್ದರು. ಕಿಶಾನ್‌ ಮಜ್ದೂರ್‌ ಪ್ರಜಾಪಾರ್ಟಿ(ಕೆಎಂಪಿಪಿ)ಯ ಕೆ.ರಾಮರಾವ್‌, ಸಮಾಜವಾದಿ ಪಾರ್ಟಿಯಿಂದ ವಿಟಲ್‌ದಾಸ್‌ ಎನ್‌. ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. 1957ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಜಾ ಸೋಶಿಯಲಿಸ್ಟ್‌ ಪಾರ್ಟಿ(ಪಿಎಸ್‌ಪಿ)ಯ ಉಪೇಂದ್ರ ನಾಯಕ್‌ ಜಯ ಸಾಧಿಸಿದ್ದರು. 1962ರಲ್ಲಿ ಮಲ್ಪೆ ಮಧ್ವರಾಜ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. 1967ರಲ್ಲಿ  ಕಾಂಗ್ರೆಸ್‌ನ ಎಸ್‌.ಕೆ.ಅಮೀನ್‌ ಈ ಕ್ಷೇತ್ರದಿಂದ ಶಾಸಕರಾಗಿದ್ದರು. 1972 ಹಾಗೂ 1978ರಲ್ಲಿ ಮನೋರಮಾ ಮಧ್ವರಾಜ್‌(ಮಲ್ಪೆ ಮಧ್ವರಾಜ್‌ ಅವರ ಪತ್ನಿ) ಕಾಂಗ್ರೆಸ್‌ನಿಂದ ಶಾಸಕಿಯಾಗಿ ಮೆರೆದಿದ್ದರು. 1983ರಲ್ಲಿ ಬಿಜೆಪಿಯ ವಿ.ಎಸ್‌. ಆಚಾರ್ಯ ಶಾಸಕರಾದರು. 1985 ಮತ್ತು 1989ರಲ್ಲಿ ನಡೆದ ಚುನಾವಣೆಯಲ್ಲಿ ಮನೋರಮಾ ಮಧ್ವರಾಜ್‌ ಕಾಂಗ್ರೆಸ್‌ನಿಂದ ಮರು ಆಯ್ಕೆಯಾದರು. ಅನಂತರ 1994ರಲ್ಲಿ ಕರ್ನಾಟಕ ಕಾಂಗ್ರೆಸ್‌ ಪಾರ್ಟಿಯಿಂದ ಯು.ಆರ್‌.ಸಭಾಪತಿ ಶಾಸಕರಾದರು. ಅನಂತರ ಅವರು ಕಾಂಗ್ರೆಸ್‌ ಪಕ್ಷ ಸೇರಿ 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದರು. 2004 ಮತ್ತು 2008ರಲ್ಲಿ ಬಿಜೆಪಿಯಿಂದ ಕೆ.ರಘುಪತಿ ಭಟ್‌ ಶಾಸಕರಾದರೆ, 2013ರಲ್ಲಿ ಕಾಂಗ್ರೆಸ್‌ನಿಂದ ಪ್ರಮೋದ್‌ ಮಧ್ವರಾಜ್‌ ಶಾಸಕರಾಗಿದ್ದರು. 2018ರಲ್ಲಿ ಪುನಃ ರಘುಪತಿ ಭಟ್‌ ಶಾಸಕರಾಗಿ ಆಯ್ಕೆಯಾದರು. ಈ ಕ್ಷೇತ್ರವು ಮುತ್ಸದ್ಧಿ ರಾಜಕಾರಣಿಗಳನ್ನು ಕಂಡಿದೆ. ಇಲ್ಲಿ ಜಯ ಸಾಧಿಸಿದವರು ಸಚಿವರಾಗಿಯೂ ವಿವಿಧ ಮುಖ್ಯಮಂತ್ರಿಗಳ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಮಧ್ವರಾಜ್‌ ಕುಟುಂಬ ಹಾಗೂ ವಿ.ಎಸ್‌.ಆಚಾರ್ಯರು ಈ ಕ್ಷೇತ್ರದಲ್ಲಿ ಸದಾ ಸ್ಮರಣೀಯರು. ಹಾಲಿ ಶಾಸಕ ಕೆ.ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಇಬ್ಬರೂ ಸಕ್ರಿಯ ರಾಜಕಾರಣದಲ್ಲಿ ಒಂದೇ ಪಕ್ಷದಲ್ಲಿದ್ದಾರೆ.

ಕಾಪು
ಕಾಪು ಕ್ಷೇತ್ರದಿಂದ ಕಾಂಗ್ರೆಸ್‌ನ ಬಿ.ಭಾಸ್ಕರ್‌ ಶೆಟ್ಟಿಯವರು 1972 ಮತ್ತು 1978ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದರು. ಅನಂತರ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ ವಸಂತ್‌ ವಿ. ಸಾಲ್ಯಾನ್‌ ಅವರು 1983 ಮತ್ತು 1999ರಲ್ಲಿ ಶಾಸಕರಾಗಿ, ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮುಂದೆ ಬಿಜೆಪಿಯ ಯುಗಾರಂಭವಾಯಿತು. 2004 ಮತ್ತು 2008ರಲ್ಲಿ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್‌. ಮೆಂಡನ್‌ ಶಾಸಕರಾಗಿ ಸೇವೆ ಸಲ್ಲಿಸಿದರು. ಅನಂತರ ಪುತ್ತೂರಿನಿಂದ ಕಾಪುಗೆ ವಲಸೆ ಬಂದ ವಿನಯ ಕುಮಾರ್‌ ಸೊರಕೆಯವರು 2013ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದು ಮಾತ್ರವಲ್ಲದೆ  ಸಚಿವರಾಗಿಯೂ ಕೆಲಸ ಮಾಡಿದರು. 2018ರಲ್ಲಿ ಪುನಃ ಬಿಜೆಪಿಯ ಲಾಲಾಜಿ ಮೆಂಡನ್‌ ಅವರು ಶಾಸಕರಾದರು. ಹಾಲಿ ಶಾಸಕ‌ ಲಾಲಾಜಿ ಮೆಂಡನ್‌ ಮತ್ತು ವಿನಯ್‌ ಕುಮಾರ್‌ ಸೊರಕೆ ಸಕ್ರಿಯ ರಾಜಕಾರಣದಲ್ಲಿದ್ದಾರೆ.

ಕುಂದಾಪುರ
ಉಡುಪಿ ಜಿಲ್ಲೆಯ ಒಂದು ವಿಶೇಷ ಕ್ಷೇತ್ರವಿದು. ಕಾರಣ 1972ರಿಂದ ಈವರೆಗೂ ಈ ಕ್ಷೇತ್ರ ನೋಡಿರುವುದು ಕೇವಲ ನಾಲ್ಕು ಮಂದಿ ಶಾಸಕರನ್ನು ಮಾತ್ರ. 1972ರಲ್ಲಿ ಕಾಂಗ್ರೆಸ್‌ನ ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಈ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. 1978ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದಿದ್ದ ಕಾಪು ಸಂಜೀವ ಶೆಟ್ಟಿಯವರು ಜಯ ಸಾಧಿಸಿದ್ದರು. ಅನಂತರದಲ್ಲಿ ಕಾಂಗ್ರೆಸ್‌ನ ಕೆ. ಪ್ರತಾಪ್‌ಚಂದ್ರ ಶೆಟ್ಟಿಯವರು 1983ರಿಂದ 1994ರ ವರೆಗೆ ನಿರಂತರ ನಾಲ್ಕು ಬಾರಿ ಶಾಸಕರಾಗಿದ್ದರು. 1999ರಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಈ ಕ್ಷೇತ್ರದಲ್ಲಿ ಸೋಲಿಸಲು ಯಾರಿಗೂ ಸಾಧ್ಯವಾಗಿಲ್ಲ. ಈಗಲೂ ಅವರೇ ಶಾಸಕರಾಗಿದ್ದಾರೆ. 1999 ಮತ್ತು 2008ರ ವರೆಗೆ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಇವರು 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯ ದಾಖಲಿಸಿಕೊಂಡಿದ್ದರು. 2018ರ ಚುನಾವಣೆಯಲ್ಲಿ ಪುನಃ ಬಿಜೆಪಿಯಿಂದ ಟಿಕೆಟ್‌ ಪಡೆದು ಜಯ ಸಾಧಿಸಿದ್ದರು. ಈಗಲೂ ಈ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಸೆಣಸಾಡಿ ಗೆಲ್ಲುವುದು ಅಷ್ಟು ಸುಲಭವಲ್ಲ ಎಂಬ ಮಾತಿದೆ. ಕ್ಷೇತ್ರದಲ್ಲಿ ಅಷ್ಟೊಂದು ಜಯಪ್ರಿಯತೆ ಪಡೆದಿದ್ದಾರೆ. ಇನ್ನು ಪ್ರತಾಪ್‌ಚಂದ್ರ ಶೆಟ್ಟಿಯವರು ವಿಧಾನಸಭೆಯಲ್ಲಿ ನಾಲ್ಕು ಬಾರಿ ಸೇವೆ ಸಲ್ಲಿಸಿದರೆ ಅನಂತರ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿ,  ಸಭಾಪತಿಯೂ ಆಗಿ ಸೇವೆ ಸಲ್ಲಿಸಿರುವುದು ಇವರ ಹಿರಿಮೆ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಪ್ರತಾಪ್‌ ಚಂದ್ರ ಶೆಟ್ಟಿ ಸಕ್ರಿಯ ರಾಜಕಾರಣದಲ್ಲಿದ್ದಾರೆ.

Advertisement

ಬೈಂದೂರು
ಜಿಲ್ಲೆಯ ಗಡಿಭಾಗವಾದ ಶಿರೂರು, ಕೊಲ್ಲೂರು ಒಳಗೊಂಡಿರುವ ಈ ಕ್ಷೇತ್ರದಲ್ಲಿ 1972ರಲ್ಲಿ ಕಾಂಗ್ರೆಸ್‌ನಿಂದ ಎ.ಜಿ. ಕೊಡ್ಗಿ, 1978ರಲ್ಲಿ ಕಾಂಗ್ರೆಸ್‌ನಿಂದ ಗೋಪಾಲ ಕೃಷ್ಣ ಕೊಡ್ಗಿ, 1983ರಲ್ಲಿ ಜನತಾ ಪಾರ್ಟಿಯಿಂದ ಅಪ್ಪಣ್ಣ ಹೆಗ್ಡೆ, 1985 ಮತ್ತು 1989ರಲ್ಲಿ ಕಾಂಗ್ರೆಸ್‌ನ ಜಿ.ಎಸ್‌.ಆಚಾರ್‌ 1994ರಲ್ಲಿ ಬಿಜೆಪಿ ಮೊದಲ ಬಾರಿಗೆ ಇಲ್ಲಿ ಗೆದ್ದಿದ್ದು, ಐ.ಎಂ. ಜಯರಾಮ್‌ ಶೆಟ್ಟಿ ಈ ಕ್ಷೇತ್ರದ ಮೊದಲ ಬಿಜೆಪಿ ಶಾಸಕ. ಅನಂತರ 1999 ಹಾಗೂ 2004ರಲ್ಲಿ ಕಾಂಗ್ರೆಸ್‌ನ ಗೋಪಾಲ ಪೂಜಾರಿಯವರು ಗೆದ್ದಿದ್ದರು. 2008ರಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ಅವರು ಜಯ ಸಾಧಿಸಿದ್ದರೆ, 2013ರಲ್ಲಿ ಪುನಃ ಗೋಪಾಲ ಪೂಜಾರಿ ವಿಜಯ ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ(2018) ಬಿಜೆಪಿ ಸುಕುಮಾರ ಶೆಟ್ಟಿಯವರು ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಈ ಕ್ಷೇತ್ರದಲ್ಲಿ ಹೊರಗಿನಿಂದ ಬಂದವರು ಜಯಿಸಿ ವಿಧಾನಸಭೆ ಪ್ರವೇಶ ಮಾಡುವುದು ಹೆಚ್ಚು ಎಂಬ ಮಾತು ಜನರ ಮಧ್ಯೆ ಇದೆ. ಎ.ಜಿ.ಕೊಡ್ಗಿಯವರು ಕಾಂಗ್ರೆಸ್‌ನಿಂದ ಶಾಸಕರಾಗಿ, ಅನಂತರ ಬಿಜೆಪಿ ಸೇರಿ ಬಹುಕಾಲ ಬಿಜೆಪಿಯಲ್ಲೆ ಇದ್ದರು. ಗೋಪಾಲ ಪೂಜಾರಿ ಹಾಗೂ ಸುಕುಮಾರ ಶೆಟ್ಟಿ ಹೊರತುಪಡಿಸಿ, ಈ ಕ್ಷೇತ್ರದಲ್ಲಿ ಗೆದ್ದಿರುವ ಬಹುತೇಕರು ಸಕ್ರಿಯ ರಾಜಕಾರಣದಲ್ಲಿಲ್ಲ.

ಕಾರ್ಕಳ
ಕಾರ್ಕಳವು ಉಡುಪಿ ಜಿಲ್ಲೆಯಿಂದ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರ. ಈ ಕ್ಷೇತ್ರದಿಂದ 1972ರಿಂದ 1994ರವರೆಗೂ ನಿರಂತರವಾಗಿ ಕಾಂಗ್ರೆಸ್‌ನಿಂದ  ಶಾಸಕರಾಗಿ ಬಹುಕಾಲ ರಾಜ್ಯ ರಾಜಕಾರಣದಲ್ಲಿದ್ದು ಮಂತ್ರಿ, ಮುಖ್ಯಮಂತ್ರಿಯಾಗಿದ್ದ ವೀರಪ್ಪ ಎಂ.ಮೊಲಿಯವರು ಅನಂತರ ದೇಶದ ರಾಜಕಾರಣದಲ್ಲೂ ಹೆಸರು ಮಾಡಿದ್ದರು. ರಾಜಕಾರಣದ ಜತೆಗೆ ಸಾಹಿತಿಯೂ ಹೌದು. ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.1999ರಲ್ಲಿ ಕಾಂಗ್ರೆಸ್‌ನ ಎಚ್‌.ಗೋಪಾಲ ಭಂಡಾರಿಯವರು ಶಾಸಕರಾದರು. 2004ರಲ್ಲಿ ಮೊದಲ ಬಾರಿಗೆ ಬಿಜೆಪಿ ವಿ.ಸುನಿಲ್‌ ಕುಮಾರ್‌ ಅವರ ಮೂಲಕ ಈ ಕ್ಷೇತ್ರದಲ್ಲಿ ಖಾತೆ ತೆರೆಯಿತು. 2008ರಲ್ಲಿ ಕಾಂಗ್ರೆಸ್‌ನ ಎಚ್‌.ಗೋಪಾಲ ಭಂಡಾರಿ ಪುನರ್‌ ಆಯ್ಕೆಯಾದರು. 2013ರಲ್ಲಿ ಬಿಜೆಪಿಯಿಂದ ಪುನರ್‌ ಆಯ್ಕೆಯಾದ ವಿ.ಸುನಿಲ್‌ ಕುಮಾರ್‌, 2018ರಲ್ಲೂ ಕ್ಷೇತ್ರ ಉಳಿಸಿಕೊಂಡು, ಈಗ ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸುದೀರ್ಘ‌ ಕಾಲ ವೀರಪ್ಪ ಮೊಲಿಯವರು ಶಾಸಕರಾಗಿದ್ದರು. ಎರಡು ಬಾರಿ ಗೋಪಾಲ ಭಂಡಾರಿಯವರು ಹಾಗೂ ಮೂರು ಬಾರಿ ಸುನಿಲ್‌ ಕುಮಾರ್‌ ಆಯ್ಕೆಯಾಗಿದ್ದಾರೆ. ಬಹುಕಾಲ ಈ ಕ್ಷೇತ್ರ ಕಾಂಗ್ರೆಸ್‌ ಪಕ್ಷದ ವಶದಲ್ಲಿತ್ತು. ಹಾಲಿ ಶಾಸಕ ಸುನಿಲ್‌ ಕುಮಾರ್‌, ವೀರಪ್ಪ ಮೊಲಿಯವರು ಸಕ್ರಿಯ ರಾಜಕಾರಣದಲ್ಲಿದ್ದಾರೆ.

ಬ್ರಹ್ಮಾವರ  (ಅಸ್ತಿತ್ವದಲ್ಲಿ ಇಲ್ಲ)
2004ರವರೆಗೂ ಬ್ರಹ್ಮಾವರ ಕ್ಷೇತ್ರ ಇತ್ತು. ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರ ಮರು ವಿಂಗಡಣೆಯ ಅನಂತರದಲ್ಲಿ ಜಿಲ್ಲೆಯಲ್ಲಿ ಒಂದು ಕ್ಷೇತ್ರ ಕಡಿಮೆಯಾಯಿತು. ಈ ಕ್ಷೇತ್ರದಲ್ಲಿ ಕೆ.ಜಯಪ್ರಕಾಶ್‌ ಹೆಗ್ಡೆ ಪಾರಮ್ಯ ಮೆರೆದಿದ್ದರು. 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಕೆ.ಜಯಪ್ರಕಾಶ್‌ ಹೆಗ್ಡೆಯವರು, 1999 ಹಾಗೂ 2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದರು. 1985, 1989ರಲ್ಲಿ ಕಾಂಗ್ರೆಸ್‌ನ ಪಿ.ಬಸವರಾಜ್‌, 1983ರಲ್ಲಿ ಬಿಜೆಪಿಯ ಬಿ.ಬಿ. ಶೆಟ್ಟಿ, ಹಾಗೂ 1978ರಲ್ಲಿ ಕಾಂಗ್ರೆಸ್‌ನಿಂದ ಆನಂದ ಕುಂದ ಹೆಗ್ಡೆ ಸ್ಪರ್ಧಿಸಿ ಜಯ ಸಾಧಿಸಿದ್ದರು. ಈ ಕ್ಷೇತ್ರದ ವಿಶೇಷವೆಂದರೆ 1999, 2004ರಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿಯವರು ಸ್ಪರ್ಧಿಸಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಪ್ರಮೋದ್‌ ಮಧ್ವರಾಜ್‌, 1999ರಲ್ಲಿ ಕಾಂಗ್ರೆಸ್‌ನಿಂದ ಸರಳಾ ಕಾಂಚನ್‌ ಸ್ಪರ್ಧಿಸಿದ್ದರು. ಕೋಟ ಶ್ರೀನಿವಾಸ ಪೂಜಾರಿಯವರು ಅನಂತರ ಸ್ಥಳೀಯ ಸಂಸ್ಥೆಯಿಂದ ಮೇಲ್ಮನೆಗೆ ಆಯ್ಕೆಯಾಗಿ ಮೂರು ಬಾರಿ ಸಚಿವ ರಾದರು. ಪ್ರಮೋದ್‌ ಮಧ್ವರಾಜ್‌ ಉಡುಪಿಯಿಂದ ವಿಧಾನಸಭೆಗೆ ಆಯ್ಕೆಯಾಗಿ ಮೊದಲ ಬಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು.

ಕೊಡಗು 2 ಕ್ಷೇತ್ರಗಳು
ಕೊಡಗು ಜಿಲ್ಲೆಯ ರಾಜಕೀಯ ಇತಿಹಾಸವು ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸ್ವಲ್ಪ ಭಿನ್ನವಾಗಿದೆ. ಬ್ರಿಟಿಷರ ಕಾಲದಿಂದಲೂ ಕೂರ್ಗ್‌ ವಿಧಾನ ಪರಿಷತ್‌ ಇತ್ತು.1924ರಿಂದಲೇ ಇದು ಸೇವೆ ಸಲ್ಲಿಸುತ್ತಿತ್ತು. 18 ಕ್ಷೇತ್ರಗಳಿಂದ 24 ಸದಸ್ಯರು ಆಯ್ಕೆಯಾಗುತ್ತಿದ್ದರು. 1952ರಲ್ಲಿ ನಡೆದ ಚುನಾವಣೆಯಲ್ಲಿ 18 ಕ್ಷೇತ್ರಗಳಲ್ಲಿ 15 ಕಾಂಗ್ರೆಸ್‌ ಹಾಗೂ 9 ಸ್ವತಂತ್ರ ಅಭ್ಯರ್ಥಿಗಳು ಜಯ ಸಾಧಿಸಿದ್ದರು.

ಮಡಿಕೇರಿ
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1978ರಿಂದ 1989ರ ವರೆಗೂ ಕಾಂಗ್ರೆಸ್‌ ಪಾರಮ್ಯ ಮೆರೆದಿತ್ತು. 1978ರಲ್ಲಿ ಎಂ.ಸಿ.ನಾಣಯ್ಯ ಅವರು ಆಯ್ಕೆಯಾದರೆ, 1983 ಮುಂದಾನಂದ ಎಂ. ನಾಣಯ್ಯ ಆಯ್ಕೆಯಾದರು. 1985 ಮತ್ತು 1989ರಲ್ಲಿ ಡಿ.ಎ.ಚಿನ್ನಪ್ಪ ಈ ಕ್ಷೇತ್ರದಿಂದ ಶಾಸಕರಾಗಿದ್ದರು. 1994ರಲ್ಲಿ ಡಿ. ಸುಬ್ಬಯ್ಯ ಮಾದಪ್ಪ ಬಿಜೆಪಿಯಿಂದ ಶಾಸಕರಾದರು. 1999ರಲ್ಲಿ ಮುಂದಾನಂದ ಎಂ. ನಾಣಯ್ಯ ಪುನರ್‌ ಆಯ್ಕೆಯಾದರು. 2004ರಲ್ಲಿ ಬೋಪಯ್ಯ ಅವರು ಈ ಕ್ಷೇತ್ರದಿಂದ ಶಾಸಕರಾಗಿದ್ದರು. ಅನಂತರ 2008ರಿಂದ ಈವರೆಗೂ ಅಪ್ಪಚ್ಚು ರಂಜನ್‌ ಅವರು ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಷೇತ್ರ ಮರುವಿಂಗಡಣೆಯ ಅನಂತರದಲ್ಲಿ ಅಪ್ಪಚ್ಚು ರಂಜನ್‌ ಅವರಿಗೆ ಬಿಜೆಪಿಯಿಂದ ಇಲ್ಲಿ ಟಿಕೆಟ್‌ ಸಿಕ್ಕಿತು.

ವಿರಾಜಪೇಟೆ
1957ರಲ್ಲಿ ವಿರಾಜಪೇಟೆ ವಿಧಾನ ಸಭಾಕ್ಷೇತ್ರದಿಂದ ಎಂ.ಸಿ.ಪೂಣಚ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. 1962ರಲ್ಲಿ ಕಾಂಗ್ರೆಸ್‌ನ ಎ.ಪಿ.ಅಪ್ಪಣ್ಣ  ಜಯ ಸಾಧಿಸಿದರೆ 1967ರಲ್ಲಿ ಜನ ಸಂಘ ಖಾತೆ ತೆರೆಯಿತು. ಜನ ಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್‌. ಲೋಕಯ್ಯ ನಾಯಕ್‌ ಶಾಸಕರಾದರು. ಅನಂತರ 1972ರಿಂದ 1983ರವರೆಗೂ ಕಾಂಗ್ರೆಸ್‌ನ ಜಿ.ಕೆ.ಸುಬ್ಬಯ್ಯ, 1985, 1989ರಲ್ಲಿ ಕಾಂಗ್ರೆಸ್‌ನ ಸುಮಾ ವಸಂತ್‌ ಶಾಸಕರಾದರು. 1994ರಲ್ಲಿ ಎಚ್‌.ಡಿ. ಬಸವರಾಜು ಶಾಸಕರಾದರೆ, 1999ರಲ್ಲಿ ಸುಮಾ ವಸಂತ್‌ ಪುನರ್‌ ಆಯ್ಕೆಯಾದರೆ 2004ರಲ್ಲಿ ಎಚ್‌.ಡಿ.ಬಸವರಾಜು ಪುನರ್‌ ಆಯ್ಕೆಯಾದರೆ, ಅನಂತರ 2008ರಿಂದ ಈವರೆಗೂ ಕೆ.ಜಿ. ಬೋಪಯ್ಯ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಬೋಪಯ್ಯ ಅವರು ವಿಧಾನಸಭಾಧ್ಯಕ್ಷರು, ಉಪಸಭಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಬೋಪಯ್ಯ ಅವರು ಈಗಲೂ ಸಕ್ರಿಯ ರಾಜಕಾರಣದಲ್ಲಿದ್ದಾರೆ.

-ರಾಜು ಖಾರ್ವಿ

Advertisement

Udayavani is now on Telegram. Click here to join our channel and stay updated with the latest news.

Next