ಉಡುಪಿ: ಶ್ರೀಕೃಷ್ಣನಿಗೆ ಪ್ರಿಯವಾದ ಲೀಲೆಯೊಂದಿಗೆ ಹಿಂದಿನಿಂದಲೂ ನಡೆದು ಬಂದ ಜಾನಪದ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಬಾರಿ ವಿಶೇಷವಾಗಿ ಕ್ರೀಡೋತ್ಸವವನ್ನು ಆಚರಿಸಲಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಪ್ರಾಚೀನ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.
ಪರ್ಯಾಯ ಶ್ರೀಕೃಷ್ಣ ಮಠ, ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿರುವ ಶ್ರೀಕೃಷ್ಣ ಮಾಸೋತ್ಸವದ “ಕ್ರೀಡೋತ್ಸವ’ವನ್ನು ಕನಕ ಗೋಪುರದ ಮುಂಭಾಗದಲ್ಲಿ ರವಿವಾರ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕ್ರೀಡಾ ಜ್ಯೋತಿ ಬೆಳಗಿಸಿದ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಸಾಂಪ್ರದಾಯಿಕ ಕ್ರೀಡೆಗಳ ಉಳಿವಿಗೆ ವಿಶೇಷ ಒತ್ತು ನೀಡುವ ಮೂಲಕ ಸನಾತನ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.
ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್, ಹಿಂದಿನ ಕ್ರೀಡೆಗಳು ಉಳಿಯಬೇಕಾದರೆ ಪ್ರತಿಯೊಬ್ಬರೂ ಕ್ರೀಡಾಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದರು.
ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಹುಬ್ಬಳ್ಳಿಯ ಶ್ರೀಕಾಂತ ಕೆಮ್ತೂರು, ಕೋಶಾಧಿಕಾರಿ ರಂಜನ್ ಕಲ್ಕೂರ, ಶ್ರೀ ಮಠದ ದಿವಾನ ನಾಗರಾಜ ಆಚಾರ್ಯ, ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ರಮೇಶ್ ಭಟ್ ಕೆ., ರವೀಂದ್ರ ಆಚಾರ್ಯ, ಮಹಿತೋಷ್ ಆಚಾರ್ಯ, ರಾಮಚಂದ್ರ ಉಪಾಧ್ಯಾಯ, ಸಂಚಾಲಕ ಈಶ್ವರ ಚಿಟ್ಪಾಡಿ, ಸ್ವಾಗತ ಸಮಿತಿ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
“ಮಿಮಿಕ್ರಿಯೋತ್ಸವ’ವೂ ನಡೆಯಲಿ
ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ, ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಲಾದ ಲೀಲೋತ್ಸವದೊಂದಿಗೆ ಕ್ರೀಡೋತ್ಸವ, ಲಡ್ಡೋತ್ಸವ, ಭಾಗವತೋತ್ಸವಾದಿಗಳನ್ನು ಆಚರಿಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣ. ಶ್ರೀಕೃಷ್ಣ ಬಾಲ್ಯದಲ್ಲಿ ಪ್ರಾಣಿ, ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುತ್ತಿರುವ ನೆಲೆಯಲ್ಲಿ ಮುಂದಿನ ವರ್ಷ “ಮಿಮಿಕ್ರಿಯೋತ್ಸವ’ವೂ ನಡೆಯಲಿ ಎಂದು ಆಶಿಯ ವ್ಯಕ್ತಪಡಿದರು.
ಸಾಂಪ್ರದಾಯಿಕ ಕ್ರೀಡೆಗಳು
ಶ್ರೀಕೃಷ್ಣ ಜ್ಯೋತಿಯನ್ನು ಬೆಳಗಿಸಿದ ಅನಂತರ ರಥಬೀದಿಯಲ್ಲಿ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು. ಮುಖ್ಯವಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ಸೊಪ್ಪಿನ ಆಟ, ಜುಬಿಲಿ, ಸೈಕಲ್ ಚಲಾಯಿಸುವುದು, ಬಂಡಿ ಓಟ, ಟೊಂಕ ಆಟ, ಗೋಣಿಚೀಲ ಓಟ, ವಿಶಲ್ ಚೇರ್, ತಟ್ಟೆ ಓಟ/ನಡಿಗೆ, ಬೆಲ್ಚೆಂಡು, ಹಗ್ಗ ಗಂಟು ಹಾಕುವಿಕೆ, ಸ್ಲೋ ಸೈಕಲ್ ರೇಸ್, ಕಾಳುಗಳ ವಿಂಗಡಿಸುವಿಕೆ, ದೇವರ ನಾಮದಿಂದ ಆಟ ಹೀಗೆ ಹತ್ತು ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳಲ್ಲಿ ಮಕ್ಕಳು, ವಯಸ್ಕರು, ಮಹಿಳೆಯರು, ಸಾರ್ವಜನಿಕರು ಭಾಗವಹಿಸಿದ್ದರು.
ಚಿತ್ರ: ಆಸ್ಟ್ರೋ ಮೋಹನ್