Advertisement

ಉಡುಪಿ: 41 ಹಾಸ್ಟೆಲ್‌ಗ‌ಳಿಗೆ 16 ವಾರ್ಡನ್‌ 

01:00 AM Feb 11, 2019 | Team Udayavani |

ಮಣಿಪಾಲ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 41 ದೇವರಾಜ ಅರಸು ವಿದ್ಯಾರ್ಥಿನಿಲಯಗಳಿದ್ದರೂ ಕೇವಲ 16 ಮಂದಿ ವಾರ್ಡನ್‌ಗಳಿದ್ದಾರೆ. ಇದರಿಂದಾಗಿ ಒಬ್ಬರು ಎರಡೆರಡು ಮತ್ತೆ ಕೆಲವರು ಮೂರು ಹಾಸ್ಟೆಲ್‌ಗ‌ಳ ಉಸ್ತುವಾರಿಯನ್ನು ನೋಡಿಕೊಳ್ಳುವಂತಾಗಿದೆ. 

Advertisement

ನೀರಿನದ್ದೇ ಸಮಸ್ಯೆ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 6 ಹಾಸ್ಟೆಲ್‌ಗ‌ಳಿದ್ದು, ನಗರಸಭೆ ಪೂರೈಸುವ ನೀರನ್ನೇ ಅವಲಂಬಿಸಿವೆ. ನೀರು ಬಾರದಿದ್ದಾಗ ಖಾಸಗಿಯಾಗಿ ಟ್ಯಾಂಕರ್‌ ಮೂಲಕ ನೀರು ಪಡೆದುಕೊಳ್ಳಬೇಕಾಗುತ್ತದೆ. ಬಾಡಿಗೆ ಕಟ್ಟಡದಲ್ಲಿ 5 ಹಾಸ್ಟೆಲ್‌ಗ‌ಳಿದ್ದು, ಅವುಗಳಿಗೆ ಸ್ವಂತವಾಗಿ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನಗರದಲ್ಲಿ ಒಟ್ಟು 660 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಫೆಬ್ರವರಿಯಿಂದ ಜೂನ್‌ ವರೆಗೆ ನೀರಿನ ಸಮಸ್ಯೆ ಉಂಟಾಗುತ್ತಿರುತ್ತದೆ. ಇವಷ್ಟೇ ಅಲ್ಲದೆ ಉಡುಪಿ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ 5 ಹಾಸ್ಟೆಲ್‌ಗ‌ಳೂ ಇವೆ.

ಸ್ವಂತ ಕಟ್ಟಡ ಏಕಿಲ್ಲ?
ಕಟ್ಟಡ ಕಟ್ಟಲು ಇಲಾಖೆಯಿಂದ ಅನುದಾನ ದೊರೆಯುವ ಎಲ್ಲ ಸಾಧ್ಯತೆಗಳಿದ್ದರೂ, ಪೂರಕ ಶಿಕ್ಷಣ ಸಂಸ್ಥೆಗಳಿರುವ ಅನುಕೂಲಕರ ಜಾಗದಲ್ಲಿ ನಿವೇಶನ ದೊರೆಯುತ್ತಿಲ್ಲ. ನಿವೇಶನ ದೊರೆತಲ್ಲಿ ಸ್ವಂತ ಕಟ್ಟಡ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದ್ದು ಸಮಸ್ಯೆಗಳು ಪರಿಹಾರವಾಗಲಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕಿದೆ. ಕೆಲವು ನಿವೇಶನಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ನಡೆಯುತ್ತಿದೆ. 

ಪ್ರಿ ರಿಸೀಟ್‌ ಗ್ಯಾಸ್‌/ಪಡಿತರ ಬೇಕು
ಗ್ಯಾಸ್‌, ಪಡಿತರ ಇತ್ಯಾದಿಗಳಿಗೆ ಪಾವತಿ ಮಾಡಿ ಸೇವೆ ಪಡೆಯಬೇಕಿದೆ. ಹಾಗಾಗಿ ಮುಂಗಡ ಪಾವತಿಗೆ ದುಡ್ಡು ಹೊಂದಿಸಲು ನಿಲಯ ಮೇಲ್ವಿಚಾರಕರು ಪರದಾಡುವಂತಾಗುತ್ತದೆ. ಪ್ರಿ ರಿಸೀಟ್‌ ವ್ಯವಸ್ಥೆ ಇದ್ದಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ. ಕೆಲವು ವರ್ಷಗಳ ಹಿಂದೆ ಈ ವ್ಯವಸ್ಥೆ ಇತ್ತು.

ಅಡುಗೆಯವರಿಗೆ ತರಬೇತಿ ಅಗತ್ಯ
50 ಮಕ್ಕಳಿಗೆ ಇಬ್ಬರು ಅಡುಗೆಯವರು ಮತ್ತು ಓರ್ವ ಸಹಾಯಕರು ಇದ್ದರೆ, ಮೆಟ್ರಿಕ್‌ ಬಳಿಕದ ಹಾಸ್ಟೆಲ್‌ಗ‌ಳಲ್ಲಿ ಮೂವರು ಅಡುಗೆಯವರು ಮತ್ತು ಇಬ್ಬರು ಸಹಾಯಕರು ಇದ್ದಾರೆ. 4 ತಿಂಗಳ ಹಿಂದೆ 70 ಸಿಬಂದಿ ನೇಮಕಾತಿಗೊಂಡಿದ್ದು, ಹೊಸದಾಗಿ ಆಯ್ಕೆಯಾದವರಿಗೆ ಸೂಕ್ತ ಅಡುಗೆ ತರಬೇತಿ ನೀಡುವ ಅಗತ್ಯವಿದೆ. ಹೊಸದಾಗಿ ನೇಮಕಾತಿ ಆದವರಲ್ಲಿ ಬಿಇ ಸಹಿತ ಉನ್ನತ ವ್ಯಾಸಂಗ ಮಾಡಿದವರೂ ಇದ್ದಾರೆ ಎಂಬುದು ವಿಶೇಷ.

Advertisement

ದಾಖಲಾತಿ ಹೇಗೆ?
ಮೆಟ್ರಿಕ್‌ ಪೂರ್ವದ ವಿದ್ಯಾರ್ಥಿಗಳಿಗೆ ವರ್ಗವಾರು ನೇರ ದಾಖಲಾತಿ ಇದ್ದರೆ, ಮೆಟ್ರಿಕ್‌ ಅನಂತರದ ವಿದ್ಯಾರ್ಥಿನಿಲಯಗಳಿಗೆ ವರ್ಗವಾರು ಆನ್‌ಲೈನ್‌ ಮೂಲಕ ಮೆರಿಟ್‌ ಆಧಾರದಲ್ಲಿ ದಾಖಲಾತಿ ನಡೆಯುತ್ತದೆ. ಅತೀ ಹೆಚ್ಚು ವಿಧಾನಸಭಾ ಕ್ಷೇತ್ರವ್ಯಾಪ್ತಿ ಇರುವ ಶಾಸಕರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. 

ಒತ್ತಡದಿಂದ ಇಕ್ಕಟ್ಟು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿನಿಲಯಗಳಿಗೆ ದಾಖಲಾತಿ ಪಡೆಯುವುದು ಸಾಧ್ಯವಾಗುತ್ತದೆ. ಒಂದೊಮ್ಮೆ ದಾಖಲಾತಿ ಸಿಗದ ವಿದ್ಯಾರ್ಥಿಗಳು ಬೇರೆ ಬೇರೆ ಮೂಲಗಳಿಂದ ಒತ್ತಡ ತಂದಾಗ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುತ್ತಾರೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದವರಿಗೆ ದಾಖಲಾತಿ ನೀಡಲು ಅವಕಾಶವೇ ಇಲ್ಲ.

ಬಯೋಮೆಟ್ರಿಕ್‌ ಹಾಜರಾತಿ 
ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಬಯೋಮೆಟ್ರಿಕ್‌ ಮೂಲಕ ಪಡೆಯಲಾಗುತ್ತದೆ. ಹಾಜರಾತಿ ಇರುವಷ್ಟೇ ಮೊತ್ತದಲ್ಲಿ ಪ್ರತಿ ವಿದ್ಯಾರ್ಥಿಗೆ ಸಿಗುವ ನಿಗದಿತ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. 

ಹುಡುಗಿಯರ ಹಾಸ್ಟೆಲ್‌ ಸಂಖ್ಯೆ ಹೆಚ್ಚಾಗಬೇಕು
ಉಡುಪಿಯಲ್ಲಿ ಮೆಟ್ರಿಕ್‌ ಬಳಿಕದ ಹುಡುಗಿಯರ ಹಾಸ್ಟೆಲ್‌ಗ‌ಳ ಸಂಖ್ಯೆ ಹೆಚ್ಚಾಗಬೇಕಾದ ತೀವ್ರ ಅಗತ್ಯವಿದೆ. ನೂರಾರು ವಿದ್ಯಾರ್ಥಿನಿಯರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಹೆಚ್ಚುವರಿ 2-4 ಹಾಸ್ಟೆಲ್‌ಗ‌ಳು ತೀರಾ ಅಗತ್ಯವಾಗಿ ಬೇಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲೆಯವರಿಗೆ ಮೊದಲ ಆದ್ಯತೆ
ಹಾಸ್ಟೆಲ್‌ಗ‌ಳಲ್ಲಿ ಜಿಲ್ಲೆಯವರಿಗೆ ವರ್ಗವಾರು ಮೊದಲ ನಿಯಮಾನುಸಾರ ಆದ್ಯತೆಯನ್ನು ನೀಡಲಾಗುತ್ತದೆ. ಸ್ಥಳೀಯರ ಸೀಟುಗಳು ಭರ್ತಿಯಾದ ಬಳಿಕವಷ್ಟೇ ಬೇರೆ ಜಿಲ್ಲೆಯವರಿಗೆ ಮೆರಿಟ್‌ ಅನುಸಾರ ಅವಕಾಶ ನೀಡಲಾಗುತ್ತಿದೆ. ಜಿಲ್ಲೆಯವರು ಕಡಿಮೆ ಇರುವ ಕೆಲವು ಹಾಸ್ಟೆಲ್‌ಗ‌ಳಲ್ಲಿ ಇತರ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. 

ಹೆಚ್ಚಬೇಕಿದೆ ಆಹಾರ ಅನುದಾನ
ಪೋಸ್ಟ್‌ ಮೆಟ್ರಿಕ್‌ ವಿಭಾಗದಲ್ಲಿ ಪ್ರತಿ ವಿದ್ಯಾರ್ಥಿಗೆ ರೂ. 51ರಂತೆ ದಿನದ ಆಹಾರ ಅನುದಾನ ದೊರೆಯುತ್ತದೆ. ಈ ಮೊತ್ತದಲ್ಲಿ ಇಂದಿನ ಬೆಲೆಗಳ ಭರಾಟೆಯಲ್ಲಿ ಅಗತ್ಯವಿದ್ದಷ್ಟು ಸೂಕ್ತ ಆಹಾರ ನೀಡಲು ಸಾಧ್ಯವಿಲ್ಲ. ಬೆಳೆಯುವ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ಸಿಗಬೇಕಾದ ಕನಿಷ್ಟ 80-90 ರೂ. 
ಪ್ರತಿ ವಿದ್ಯಾರ್ಥಿಗೆ ನಿತ್ಯದ ಆಹಾರ  ಅನುದಾನವಾಗಿ ದೊರೆಯಬೇಕಾದ ಅಗತ್ಯವಿದೆ. 

ವಾರ್ಡನ್‌ಗಳ ನೇಮಕದ ಪ್ರಕ್ರಿಯೆ ಕೆಪಿಎಸ್‌ಇ/ಸರಕಾರ ಮಟ್ಟದಲ್ಲಿ ನಡೆಯುತ್ತಿದೆ. ಜಿಲ್ಲೆಯಿಂದಲೂ ಅಂಕಿ ಅಂಶಗಳನ್ನು ಕಳುಹಿಸಿಕೊಡಲಾಗಿದೆ.
-ಹಾಕಪ್ಪ ಲಮಾಣಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next