ಮುಂಬೈ: ಶಿವಸೇನೆ ನಮಗೆ ಸೇರಿದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂಧೆ ಬಣಗಳ ನಡುವೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರದಿಂದ ನ್ಯಾಯಾಂಗ ಹೋರಾಟ ಶುರುವಾಗಿದೆ.
ಸಿಎಂ ಏಕನಾಥ ಶಿಂಧೆ ಬಣದ ನ್ಯಾಯವಾದಿ ಹರೀಶ್ ಸಾಳ್ವೆ ಅವರಿಗೆ ಹೊಸತಾಗಿ ತಮ್ಮ ವಾದವನ್ನು ಲಿಖಿತವಾಗಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾ.ಕೃಷ್ಣ ಮುರಾರಿ ಮತ್ತು ನ್ಯಾ.ಹಿಮಾ ಕೋಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ.
ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಪರವಾಗಿ ವಾದಿಸಿದ ರಾಜ್ಯಸಭಾ ಸದಸ್ಯ ಮತ್ತು ನ್ಯಾಯವಾದಿ ಕಪಿಲ್ ಸಿಬಲ್ “ಸಂವಿಧಾನದ ಹತ್ತನೇ ವಿಧಿಯ ಅನ್ವಯ ಏಕನಾಥ ಶಿಂಧೆ ಅವರಿಗೆ ಬೆಂಬಲ ಸೂಚಿಸಿದ ಶಾಸಕರು ಅನರ್ಹತೆಯಿಂದ ಪಾರಾಗಲು ಮಾತ್ರ ಸಾಧ್ಯ. ಆ ಗುಂಪನ್ನು ಇನ್ನೊಂದು ಪಕ್ಷದ ಜತೆಗೆ ವಿಲೀನಗೊಳಿಸಲು ಅವರಿಗೆ ಅವಕಾಶ ಇದೆಯೇ ಹೊರತು ಬೇರೆ ರಕ್ಷಣಾ ವ್ಯವಸ್ಥೆಗಳಿಲ್ಲ ಎಂದರು.
“ನಿಗದಿತ ಪಕ್ಷದಿಂದ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿ ನಂತರ ಆ ಪಕ್ಷದ ಜತೆಗೆ ಬಾಂಧವ್ಯ ಕಡಿದುಕೊಂಡರೆ ಎಲ್ಲವನ್ನೂ ದೂರ ಮಾಡಿದಂತೆ ಆಗಲಾರದು’ ಎಂದರು ಕಪಿಲ್ ಸಿಬಲ್. ಸಿಎಂ ಏಕನಾಥ ಶಿಂಧೆ ಪರವಾಗಿ ವಾದಿಸಿದ ಹರೀಶ್ ಸಾಳ್ವೆ ಪಕ್ಷಾಂತರ ನಿಷೇಧ ಕಾಯ್ದೆ ಎನ್ನುವುದು ಬಹುಮತ ಕಳೆದುಕೊಂಡ ಪಕ್ಷಕ್ಕೆ ಸಂಖ್ಯಾಬಲವನ್ನು ಹಿಡಿದಿಟ್ಟುಕೊಳ್ಳುವ ಅಸ್ತ್ರವಾಗಬಾರದು ಎಂದರು.
ಇದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರುವ ಅಂಶವಲ್ಲ. ಇದು ಒಂದು ಪಕ್ಷದ ಒಳಗಿನ ಆಂತರಿಕ ಕಲಹ. ಸ್ವಯಂ ಪ್ರೇರಿತವಾಗಿ ಯಾರಿಗೂ ಪಕ್ಷದ ಸದಸ್ಯತ್ವ ನೀಡಲಾಗಿಲ್ಲ ಎಂದರು ಸಾಳ್ವೆ.
ವಾದ ಆಲಿಸಿದ ನ್ಯಾಯಪೀಠ ನ್ಯಾಯವಾದಿ ಹರೀಶ್ ಸಾಳ್ವೆ ಅವರಿಗೆ ತಮ್ಮ ವಾದವನ್ನು ಹೊಸತಾಗಿ ಬರೆದುಕೊಂಡು ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.