ಉಡುಪಿ: ಸಂಸ್ಕೃತಿ, ಸಂಸ್ಕಾರದ ಮೂಲಕ ಮಕ್ಕಳ ಕನಸಿಗೆ ಬಣ್ಣ ತುಂಬವ ಕಾರ್ಯ ಆಗಬೇಕು ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ ನೀ. ಬಿ.ವಿಜಯ ಬಲ್ಲಾಳ್ ಅವರು ಹೇಳಿದರು.
‘ಉದಯವಾಣಿ’ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ರವಿವಾರ ನಡೆದ ಉಡುಪಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ‘ಚಿಣ್ಣರ ಬಣ್ಣ’ ಉದ್ಘಾಟಿಸಿ ಅವರು ಮಾತನಾಡಿದರು.
ಚಿನ್ನಣ್ಣ ಬಣ್ಣದಂತಹ ಚಿತ್ರಕಲಾ ಸ್ಪರ್ಧೆಯು ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಲು ಅನುಕೂಲವಾಗುತ್ತದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಏಳ್ಗೆಗೆ ಅತ್ಯಾವಶ್ಯಕ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನ ಅಧ್ಯಕ್ಷ ಕೆ. ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಮಕ್ಕಳ ಪ್ರತಿಭೆಯ ಶೋಧಕ್ಕೆ ಉದಯವಾಣಿಯ ಚಿನ್ನಣ ಬಣ್ಣ ಸ್ಪರ್ಧೆ ಪೂರಕವಾಗಿದೆ. ಉದಯವಾಣಿ ಸದಾ ಸಮಾಜದ ದನಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಅಂಬಲಪಾಡಿ ಗೋಪಾಲ್ ಬಂಗೇರ ಫ್ಯಾಮಿಲಿ ಚಾರಿಟೆಬಲ್ ಟ್ರಸ್ಟ್ ನ ಡಾ. ಸುಶ್ಮಿತಾ ಅಶ್ವತ್ಥ್ ರಾಜ್, ಉಡುಪಿ ಆರ್ಟಿಸ್ಟ್ಸ್ ಫಾರಂ ಅಧ್ಯಕ್ಷ ರಮೇಶ್ ರಾವ್, ಉದಯವಾಣಿ ಸಂಪಾದಕ ಅರವಿಂದ ನಾವಡ, ಮಾರುಕಟ್ಟೆೆ ವಿಭಾಗದ ಉಪಾಧ್ಯಕ್ಷ(ಮ್ಯಾಗಜಿನ್ಸ್ ಆ್ಯಂಡ್ ಸ್ಪೆೆಶಲ್ ಪ್ರಾಜೆಕ್ಟ್ಸ್) ರಾಮಚಂದ್ರ ಮಿಜಾರು, ಫೈನಾನ್ಸ್ ವಿಭಾಗದ ಜಿಎಂ ಸುದರ್ಶನ ಶೇರಿಗಾರ್ ಉಪಸ್ಥಿತರಿದ್ದರು. ತಲ್ಲೂರು ಗ್ರೂಪ್ಸ್ ನ ಶಿವಪ್ರಸಾದ್ ಶೆಟ್ಟಿ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಆರ್ಟಿಸ್ಟ್ಸ್ ಫೋರಂ ಉಡುಪಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದ.ಕ. ಹಾಲು ಉತ್ಪಾದಕರ ಒಕ್ಕೂಟ, ಹ್ಯಾಂಗ್ಯೂ ಐಸ್‌ಕ್ರೀಂ, ಮಾಡರ್ನ್ ಕಿಚನ್ಸ್, ಕ್ಯಾಂಪ್ಕೊ, ಅಂಬಲಪಾಡಿ ಗೋಪಾಲ್ ಬಂಗೇರ ಫ್ಯಾಾಮಿಲಿ ಚಾರಿಟೆಬಲ್ ಟ್ರಸ್ಟ್ , ಜಯಲಕ್ಷ್ಮೀ ಸಿಲ್ಕ್ಸ್ ಉದ್ಯಾವರ, ಅದಾನಿ ಉಡುಪಿ ಪವರ್ ಕಾರ್ಪೊರೇಶನ್ ಲಿ., ತಲ್ಲೂರ್ಸ್ ತಾಂಬುಲಮ್ಸ್ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.
ಉಡುಪಿ ಉಪ ಮುಖ್ಯ ವರದಿಗಾರ ರಾಜು ಖಾರ್ವಿ ಸ್ವಾಗತಿಸಿ, ಕುಂದಾಪುರ ಮಾರುಕಟ್ಟೆ ವಿಭಾಗದ ಹಿರಿಯ ಪ್ರತಿನಿಧಿ ಕೃಷ್ಞಮೂರ್ತಿ ವಂದಿಸಿದರು. ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಕಾಶ್ ನಾಯಕ್ ನಿರೂಪಿಸಿದರು. ಆರ್ಟಿಸ್ಟ್ಸ್ ಫಾರಂನ ಸಕು ಪಾಂಗಾಳ ನಿರ್ವಹಿಸಿದರು.
1ರಿಂದ 3, 4ರಿಂದ 7ನೇ ತರಗತಿ ವಿಭಾಗದ ವಿದ್ಯಾಾರ್ಥಿಗಳು ಐಚ್ಛಿಕ ವಿಷಯದಲ್ಲಿ ಚಿತ್ರ ಬಿಡಿಸಿದರು. 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚೀಟಿ ಎತ್ತುವ ಮೂಲಕ ಆದರ್ಶ ಗ್ರಾಮ, ಗೃಹ ಕೈಗಾರಿಕೆ ಮತ್ತು ದೊಂಬರಾಟ ಎನ್ನುವ ವಿಷಯಗಳನ್ನು ನೀಡಲಾಯಿತು. ತಾಲೂಕಿನ ವಿವಿಧ ಭಾಗದ ಶಾಲೆಗಳ 1200ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರದ ಜತೆಗೆ ಗಿಫ್ಟ್ ಹ್ಯಾಂಪರ್, ಐಸ್ ಕ್ರೀಂ ನೀಡಲಾಯಿತು.