Advertisement

ಗುರವೇ ನಮಃ: ನೆಚ್ಚಿನ ಗುರುಗಳ ಕುರಿತು ವಿದ್ಯಾರ್ಥಿಗಳ ಹೃನ್ಮನದ ಮಾತುಗಳಿವು

12:08 AM Sep 05, 2020 | Karthik A |

ಶಿಕ್ಷಕರೆಂದರೆ ಪಾಠ ಭೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು. ಪಠ್ಯದ ಜತೆಗೆ ಜೀವನ ಮೌಲ್ಯ ತುಂಬುವ ಗುರುಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಭಾರತದ ಮೊದಲ ಉಪ ರಾಷ್ಟ್ರಪತಿ ಡಾ| ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ನೆನಪಿನಲ್ಲಿ ಪ್ರತಿ ವರ್ಷ ಸೆ. 5ರಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೆಚ್ಚಿನ ಗುರುಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಂತೆ ಯುವಿ ಫ್ಯೂಷನ್‌ ಆಹ್ವಾನ ನೀಡಿತ್ತು. ಆ ಪೈಕಿ ಆಯ್ದವುಗಳನ್ನು ಪ್ರಕಟಿಸಲಾಗಿದೆ.

Advertisement

ಕಲ್ಲನ್ನು ಶಿಲೆಯಾಗಿಸಿದವರು
ನನ್ನ ನೆಚ್ಚಿನ ಶಿಕ್ಷಕ ಎಂದರೆ ಪ್ರಸ್ತುತ ನಾನು ಓದುತ್ತಿರುವ ಡಾ| ಬಿ.ಬಿ. ಹೆಗ್ಡೆ ಪ್ರ.ದ. ಕಾಲೇಜಿನ ಕನ್ನಡ ಉಪನ್ಯಾಸಕ ಚೇತನ್‌ ಶೆಟ್ಟಿ ಕೋವಾಡಿ ಸರ್‌. ವಿದ್ಯಾರ್ಥಿಗಳ ಪ್ರತಿ ಭೆಗೆ ವೇದಿಕೆ ಕಲ್ಪಿಸುವಲ್ಲಿ ಅವರು ಸದಾ ಮುಂದು. ಉತ್ತಮ ವಾಗ್ಮಿಯಾಗಿ, ವಿದ್ಯಾರ್ಥಿ ಯೆಂಬ ಕಲ್ಲನ್ನು ಶಿಲೆಯಾಗಿಸಿದವರು. ಇವರ ಸ್ಫೂರ್ತಿದಾಯಕ ಮಾತುಗಳನ್ನ ಕೇಳುತ್ತ ಕೂತರೆ ಕನ್ನಡ ಸರಸ್ವತಿಯೇ ಇವರ ಪದಗಳಲ್ಲಿ ಇರುವಂತಹ ಅನು ಭೂತಿ. ಸಾಮಾನ್ಯರಂತೆ ಇದ್ದ ನಮ್ಮಲ್ಲಿ ಗುರಿ ಸಾಧಿಸುವ ಛಲ ಹುಟ್ಟಿಸಿದ ಅವರೇ ಆದರ್ಶ.


 ಸುಪ್ರೀತಾ ಶೆಟ್ಟಿ, ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ 

ಮಾರ್ಗ ತೋರಿದ ಗುರು
ಶಿಕ್ಷಕರು ನಮ್ಮ ಜೀವನಕ್ಕೆ ಸನ್ಮಾರ್ಗ ತೋರಿಸುತ್ತಾರೆ. ನಾವು ತಪ್ಪು ಮಾಡಿದರೆ ಅದು ಸರಿ ಅಲ್ಲ ತಪ್ಪು ಎಂದು ತಿದ್ದುತ್ತಾರೆ. ನನ್ನಲ್ಲೂ ಗುರಿ ಸಾಧಿಸುವ ಛಲ ತಂದವರು ನಿಖೀಲ್‌ ಸರ್‌. ತಂದೆಯ ಸ್ಥಾನದಲ್ಲಿ ನಿಂತು ಧೈರ್ಯ ತುಂಬಿದ ಅವರು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಅವರು ಪಿಯುಸಿಯಲ್ಲಿ ಶಿಕ್ಷಣಶಾಸ್ತ್ರ ಅಧ್ಯಯನದಲ್ಲಿ ಪಾಠ ಮಾಡುವುದರ ಜತೆಗೆ ಜೀವನದ ದಾರಿಯನ್ನು ರೂಪಿಸಿ ಕೊಟ್ಟಿದ್ದರು.


 ಯು.ಎಚ್‌.ಎಂ.ಗಾಯತ್ರಿ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು 

ನಲ್ಮೆಯ ಮಾರ್ಗದರ್ಶಕರು
ಗು ಎಂದರೆ ಅಂಧಕಾರ ಮತ್ತು ರು ಎಂದರೆ ದೂರವಾಗಿಸುವುದು. ಹಾಗೆಯೇ ಪದವಿಯ ಪತ್ರಿಕೋದ್ಯಮ ಶಿಕ್ಷಕರಾದ ರಶ್ಮಿ ವಿನಾಯಕ್‌ ಮತ್ತು ತಾರಾ ಕರುಣ್‌ ನನ್ನ ನೆಚ್ಚಿನ ಮಾರ್ಗದರ್ಶಕರು ಹಾಗೂ ಆದರ್ಶ ಗುರುಗಳು. ಅವರ ಅತ್ಯುತ್ತಮ ಬೋಧನ ಶೈಲಿ, ಗಾಂಭೀರ್ಯ, ತರಗತಿ ಹೊರಗಿನ ಬಾಂಧವ್ಯ, ಪ್ರೀತಿ, ಮಿತ್ರರಂತೆ ಮಾತನಾಡಿಸುವ ಮನೋಭಾವ, ಕರುಣೆ, ಸಹನೆಯ ಗುಣ ನನಗೆ ಉತ್ತಮ ಜೀವನದ ಹಾದಿಯನ್ನು ತೋರುವಲ್ಲಿ ನೆರವಾಯಿತಲ್ಲದೆ, ದೃಢ ಸಂಕಲ್ಪ ಹೊಂದುವಂತೆ ಮಾಡಿದೆ.


 ಕೀರ್ತಿ ಪುರ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು 

ಮನೆಯ ವಾತಾವರಣ
ನಾನು ಪ್ರಾಥಮಿಕ ಶಿಕ್ಷಣ ಕಲಿಯುತ್ತಿರುವಾಗ ಇದ್ದ ಶಿಕ್ಷಕಿ ಜಯ ಟೀಚರ್‌ ನನಗೆ ಮಾತ್ರವಲ್ಲ ಸಾಧಾರಣ ಎಲ್ಲ ಮಕ್ಕಳಿಗೂ ಅಚ್ಚುಮೆಚ್ಚಿನವರಾಗಿದ್ದರು. ಅವರು ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಗೈಡ್ಸ್‌, ಸೇವಾದಳ, ಆಟ, ಇತ್ಯಾದಿ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದರು. ಶಾಲೆಯಲ್ಲಿ ಯಾವುದಾದರೂ ಕಾರ್ಯಕ್ರಮವಿದ್ದರೆ ಅತಿಥಿಗಳನ್ನು ಲವಲವಿಕೆಯಿಂದ ಸ್ವಾಗತಿಸುತ್ತಿದ್ದರು. ನಮಗೂ ಶಾಲೆ ಮನೆಯಂತೆಯೇ ಭಾಸವಾಗುತ್ತಿತ್ತು.

Advertisement


 ಕವನಾ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು 

ಅಪರೂಪದ ಶಿಕ್ಷಕಿ
ವಿದ್ಯಾರ್ಥಿಯಾದವರಿಗೆ ಎಲ್ಲ ಶಿಕ್ಷಕರು ಅಚ್ಚುಮೆಚ್ಚು. ಆದರೂ ಕೆಲವರು ಆಪ್ತರು. ನನಗೆ ಕಾಲೇಜಿನ ಹಿರಿಯ ಸಂಸ್ಕೃತ ಉಪನ್ಯಾಸಕಿ ಡಾ| ಯಶವಂತಿ ಎಂದರೆ ಬಲು ಇಷ್ಟ. ಇವರ ತರಗತಿಯೆಂದರೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಹೊಸದಾಗಿ ಸಂಸ್ಕೃತ ತೆಗೆದುಕೊಂಡ ನನಗೆ ಆರಂಭದಲ್ಲಿ ಕಷ್ಟವಾಗುತ್ತಿತ್ತು. ಆದರೆ ಯಶ ವಂತಿ ಮೇಡಂ ಸರಳವಾಗಿ ಹೇಳಿಕೊಡುತ್ತಿದ್ದ ಕಾರಣ ಸುಲಭವಾಗಿ ಅರ್ಥವಾಗುತ್ತಿತ್ತು. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ತಾಯಿಯಂತೆ ವಿಚಾರಿಸುತ್ತಿದ್ದರು.


 ಸುಶ್ಮಿತಾ ಕೆ. ಕುಂಭಾಶಿ, ಭಂಡಾರ್ಕಾರ್ಸ್‌ ಕಾಲೇಜು, ಕುಂದಾಪುರ

ಜೀವನಕ್ಕೆ ದಾರಿ ತೋರಿದವರು
ನನ್ನ ಜೀವನದಲ್ಲೂ ಗುರುಗಳು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಜಗೋಳಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನನಗೆ ಉತ್ತಮ ಉಪನ್ಯಾಸಕರು ಸಿಕ್ಕರು. ಅದರಲ್ಲೂ ಪ್ರಮೋದ್‌ ಸರ್‌ ನೆಚ್ಚಿನ ಗುರುಗಳಾದರು. ಯಾವಾಗಲೂ ಕ್ಲಾಸ್‌ ಮುಗಿಯುವ ಹತ್ತು ನಿಮಿಷಗಳ ಮುನ್ನ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆ. ಕೆಲವೊಂದು ವಿದ್ಯಾರ್ಥಿಗಳು ನನ್ನನ್ನು ಹೀಯಾಳಿಸುತ್ತಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಅವರು ಮಾತ್ರ ನನ್ನ ಪ್ರಶ್ನೆಗೆ ಉತ್ತರಿಸುತ್ತಾ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು.


 ಶಬರೀಶ್‌ ಶಿರ್ಲಾಲ್‌, ಎಂಪಿಎಂ ಕಾಲೇಜು, ಕಾರ್ಕಳ 

ಜೀವನ ಮೌಲ್ಯ ತಿಳಿಸುವವರು
ಪ್ರೀಮಾ ಪಿಂಟೊ, ಅರ್ಚನಾ ಅರವಿಂದ್‌, ಗುರುದಾಸ್‌ ಪ್ರಭು ನನ್ನ ನೆಚ್ಚಿನ ಗುರುಗಳು. ಶಿಕ್ಷಕರು ಬರೀ ಪಾಠ ಪ್ರವಚನ ಮಾಡಿದರೆ ಸಾಲದು, ಬದಲಾಗಿ ವಿದ್ಯಾರ್ಥಿಗಳ ಮನಸ್ಸಿನ ಆಳಕ್ಕಿಳಿದು ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳ ಮನಸ್ಸಿನ ಅನುಸಾರ ಪಾಠ ಮಾಡಬೇಕು. ಬರೀ ನಾಲ್ಕು ಗೋಡೆಗಳ ನಡುವೆ ಮಾಡುವ ಪಾಠಕ್ಕಿಂತ ನಾಲ್ಕು ಗೋಡೆಗಳಿಗೂ ಮೀರಿದ ಜ್ಞಾನ ಕೊಡಬೇಕು. ಈ ಎಲ್ಲ ಗುಣಗಳು ನನ್ನ ನೆಚ್ಚಿನ ಗುರುಗಳಲ್ಲಿದೆ.


 ರಕ್ಷಿತ್‌ ಶೆಟ್ಟಿ, ಭಂಡಾರ್ಕಾರ್ಸ್‌ ಕಾಲೇಜು, ಕುಂದಾಪುರ 

ಕಾಲೇಜಿನ ಧ್ರುವತಾರೆ
ಸರಳ ವ್ಯಕ್ತಿ. ಆದರೆ ವಿಚಾರಗಳು ಅತ್ಯದ್ಭುತ. ಇವರ ಶಿಸ್ತು, ನೇರ ಮಾತುಗಳು ನಮಗೆ ತುಂಬಾ ಇಷ್ಟ. ಅವರೇ ನಮ್ಮ ಕಾಲೇಜಿನ ಧ್ರುವತಾರೆ ಎಂದು ಕರೆಯಲ್ಪಡುವ ಪ್ರೋ| ಓಂಕಾರ ಕಾಕಡೆ ಸರ್‌. ಅವರ ಪಾಠದ ಶೈಲಿ ಎಲ್ಲರಿಗೂ ಅಚ್ಚುಮೆಚ್ಚು. ತರಗತಿಯಲ್ಲಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅವರಲ್ಲಿತ್ತು. ವಿದ್ಯಾರ್ಥಿಗಳಲ್ಲಿ ಧೈರ್ಯ, ಉತ್ಸಾಹ ತುಂಬುತ್ತಿದ್ದರು. ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದರು. ಕ್ಲಾಸಿನ ಎಲ್ಲ ಸಮಸ್ಯೆಗಳನ್ನ ಸರಳವಾಗಿ ಬಗೆಹರಿಸುತ್ತಿದ್ದರು.


 ಶ್ರೀದೇವಿ ಗುಡದೂರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ವಿಜಯಪುರ 

ಗಣಿತವನ್ನು ಅರ್ಥವಾಗಿಸಿದವರು
ನನ್ನ ನೆಚ್ಚಿನ ಶಿಕ್ಷಕಿ ಸುಮತಿ. ಗಣಿತವನ್ನು ಸುಲಭವಾಗಿ ನನಗೆ ತಿಳಿಸಿಕೊಟ್ಟವರು ಅವರು. ಗಣಿತ ಕಷ್ಟ ಅಂತ ಎಲ್ಲರೂ ಬೆಚ್ಚಿ ಬೀಳುವ ಸಂದರ್ಭದಲ್ಲಿ ನಮಗೆ ಮಾರ್ಗದರ್ಶನ ನೀಡಿದವರು. ಸುಮತಿ ಟೀಚರ ಇನ್ನೊಂದು ವಿಶೇಷತೆ ಎಂದರೆ ಅವರು ಎಲ್ಲಿ ಧೂಳು ಕಂಡರೂ ಸ್ವತ್ಛ ಮಾಡುತ್ತಿದ್ದರು. ಎಷ್ಟು ಶುಭ್ರವೆಂದರೆ ಮೊಬೈಲ್‌ ಅನ್ನೂ ಕರವಸ್ತ್ರದಿಂದ ಹಿಡಿಯುತ್ತಿದ್ದರು. ಮೊದ ಮೊದಲು ತಮಾಷೆಯಾಗಿ ಕಂಡರೂ ಅನಂತರ ಅವರ ಈ ಗುಣ ಇಷ್ಟವಾಯಿತು.


 ಸುಶ್ಮಿತಾ ಎಂ. ಸಾಮಾನಿ, ಮಂಗಳೂರು ವಿಶ್ವವಿದ್ಯಾನಿಲಯ 

ನನ್ನ ನೆಚ್ಚಿನ ಶಿಕ್ಷಕಿ ಸೌಮ್ಯಾ
ಯಾರಾದರೂ ನನ್ನ ಬದುಕನ್ನು ಬದಲಾಯಿಸಿದ ಘಟನೆ ಯಾವುದು ಅಂದರೆ ನನ್ನ ಉತ್ತರ ಗುರುವಿನ ನಗು, ಆ ಮುಗ್ಧ ಮಾತು. ಹಠಮಾರಿ ವಿದ್ಯಾರ್ಥಿನಿಯ ಬದುಕಿನ ಪುಟವನ್ನೇ ಬದಲಾಯಿಸಿದ್ದು ಇಂತಹ ಗುರುಗಳೇ. ಬಹುಶಃ ಎಲ್ಲರ ಜೀವನದಲ್ಲೂ ಇಂತಹ ಒಬ್ಬ ಶಿಕ್ಷಕರಿರುತ್ತಾರೆ. ಅಂತಹ ಶಿಕ್ಷಕಿ ಸೌಮ್ಯಾ. ಅವರು ನನಗೆ ಕಲಿಸಿದ್ದು ಕೇವಲ ರಾಜ್ಯಶಾಸ್ತ್ರ ಪಠ್ಯವಾಗಿದ್ದರೆ ನಾನು ಇವತ್ತು ಇಷ್ಟು ಸ್ಮರಿಸಬೇಕಿರಲಿಲ್ಲ. ಜೀವನ ಪಾಠವನ್ನು ತಿಳಿಸುವುದರ ಜತೆಗೆ ನನ್ನ ಬಾಳಿಗೆ ಅಮ್ಮನಂತೆ ಬೆಂಬಲವಾಗಿ ನಿಂತಿದ್ದರು.


 ನಿಸರ್ಗ ಸಿ.ಎ., ತುಮಕೂರು ವಿಶ್ವವಿದ್ಯಾನಿಲಯ 

ಶಿಸ್ತು, ಕ್ಷಮಾಗುಣ, ಕರುಣೆ, ಸರಳತೆಗಳ ಸಮ್ಮಿಲನ
ನನ್ನ ಜೀವನಕ್ಕೆ ಸ್ಫೂರ್ತಿಯಾದ ಹಲವು ಶಿಕ್ಷಕರಿದ್ದಾರೆ. ಅದರಲ್ಲಿ ಪ್ರಥಮ ಸ್ಥಾನ ಪಿಯುಸಿಯ ಇತಿಹಾಸ ಉಪನ್ಯಾಸಕ ಸದಾಶಿವ ಭಟ್‌ ಸರ್‌ ಅವರಿಗೆ. ಇನ್ನೂ ಹೇಳುತ್ತಾ ಹೋದರೆ ತಿಲಕಾಕ್ಷ ಸರ್‌, ತ್ರೇಸಿಯಮ್ಮ ಮೇಡಂ, ವಸಂತ್‌ ಸರ್‌, ತಾರಾ ಮೇಡಂ, ರಶ್ಮಿ ಮೇಡಂ, ಪ್ರಶಾಂತಿ ಮೇಡಂ ಹೀಗೆ ಪಟ್ಟಿ ಹೆಚ್ಚುತ್ತಾ ಹೋಗುತ್ತದೆ. ಸದಾಶಿವ ಸರ್‌ ನಾನು ಪ್ರಥಮ ಪಿಯುಸಿಯಲ್ಲಿದ್ದಾಗ ನಮ್ಮ ತರಗತಿ ಶಿಕ್ಷಕರಾಗಿದ್ದರು. ನಮಗೆ ಏನೂ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತಿದ್ದ ಅವರು ವಿಷಯವನ್ನು ಅರ್ಥ ಮಾಡಿಸುತ್ತಿದ್ದರು.


 ಲಾವಣ್ಯಾ ಎಸ್‌., ಸಂತ ಫಿಲೋಮಿನಾ ಕಾಲೇಜು ಪುತ್ತೂರು 

ಕಲ್ಲನ್ನು ಶಿಲೆಯಾಗಿಸುವ ಶಿಲ್ಪಿಯೇ ಶಿಕ್ಷಕ
ನಾನು ಹೈಸ್ಕೂಲಿಗೆ ಬರುವವರೆಗೂ ಬಾವಿಯೊಳಗಿನ ಕಪ್ಪೆಯ ಹಾಗೆ ಇದ್ದೆ. ಹೈಸ್ಕೂಲಿನಲ್ಲಿ ಒಳ್ಳೆಯ ಮನಸ್ಸಿನ ಶಿಕ್ಷಕರಿದ್ದರು. ಆ ಪೈಕಿ ಒಬ್ಬರು ಜೀವನ ಪೂರ್ತಿ ನೆನಪಿನಲ್ಲಿ ಉಳಿದಿದ್ದಾರೆ. ಯಾವುದೇ ಸಾಧನೆ ಮಾಡಬೇಕಾದರೂ ಧೈರ್ಯ ಮತ್ತು ಶ್ರಮ ಮುಖ್ಯ ಎಂದು ಹೇಳುತ್ತಿದ್ದರು. ಅವರೇ ವೀರೇಶ ಸರ್‌. ನಮ್ಮ ವಿಷಯ ಗ್ರಹಿಕೆಗೆ ಅನುಗುಣವಾಗಿ, ವಿಷಯವನ್ನು ಆಳವಾಗಿ ವಿವರಿಸುತ್ತಿದ್ದರು. ಪ್ರೀತಿಯಿಂದ ಬುದ್ಧಿಮಾತು ಹೇಳುತ್ತಿದ್ದರು. ಸ್ವಂತ ಮಗಳಿಗಿಂತ ಹೆಚ್ಚಾಗಿ ಕಾಳಜಿ ತೋರುತ್ತಿದ್ದರು.


 ಲಕ್ಷ್ಮೀ ಬಿ., ಕಲಬುರಗಿ ವಿಶ್ವವಿದ್ಯಾನಿಲಯ 

ಆದರ್ಶಗಳೇ ನಮ್ಮ ಮಾರ್ಗಸೂಚಿ
ಕಲಿಕೆಯ ಹಸಿವು ಹೆಚ್ಚಿದ್ದ ಆ ಸಂದರ್ಭದಲ್ಲಿ ಇಂಗ್ಲಿಷ್‌ ಪಾಠವನ್ನು ಬಾಲ್ಯದಲ್ಲೇ ಅರ್ಥವಾಗುವಂತೆ ಮನವರಿಕೆ ಮಾಡಿದ್ದು ಸುನಂದಾ ಮೇಡಂ. ಅಂದು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ನನಗೆ ಇಂಗ್ಲಿಷ್‌ ಪಾಠ ಕಠಿ ನವೇ ಆಗಿತ್ತು. ಸಾಧಿಸಿದರೆ ಸಬಲವನ್ನೇ ನುಂಗಬಹುದು ಎನ್ನುತ್ತಾ ಸೊಗಸಾದ ಧ್ವನಿಯ ಮೂಲಕ ನನ್ನ ಕೈ ಹಿಡಿದು ಕಲಿಸಿದ ಸುನಂದಾ ಮೇಡಂ ಎಂದರೆ ನನಗೆ ಇಂದಿಗೂ ಪ್ರೀತಿ. ಅವರು ನನಗೆ ಇಂಗ್ಲಿಷ್‌ ಭಾಷೆಯ ಹಿಡಿತ ಕಲಿಸಿದ್ದರು.


 ಲತಾ ಜಿ. ನಾಯಕ್‌, ಎಂ.ಜಿ.ಎಂ. ಕಾಲೇಜು, ಉಡುಪಿ 

ಹೊಸ ಹುರುಪು
ಕಂಪ್ಯೂಟರ್‌ ಮೇಲಿನ ಕುತೂಹಲದಿಂದ ಪದವಿಯಲ್ಲಿ ಅದನ್ನೇ ಆರಿಸಿಕೊಂಡಿದ್ದೆ. ಆದರೆ ಕಂಪ್ಯೂಟರ್‌ ಮುಂದೆ ಕುಳಿತರೆ ಏನೋ ಭಯ. ಅದನ್ನು ನೀಗಿಸಿದ್ದು ನೂತನ ಮೇಡಂ. ಬಗೆ ಬಗೆಯ ಪ್ರೋಗ್ರಾಂಗಳ ತಾಂಡವಕ್ಕೆ ಹೊಂದಿಕೊಳ್ಳಲಾಗದೇ ಕೈ ಯದ್ವಾತದ್ವ ಕೀಲಿಮಣೆಯನ್ನು ಕುಟ್ಟುತ್ತಿದ್ದರೆ, ಅಸಹಾಯಕಳಾಗಿ ಕುಳಿತಿದ್ದ ನನ್ನ ಬಳಿ ಬಂದು, ಏನಾಯಿತು ಎಂದು ಕೇಳಿದ್ದರು. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೆರವಾಗಿದ್ದರು.


 ಸ್ನೇಹಾ ಹಕ್ಲಾಡಿ, ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ 

ನಿಮ್ಮ ಕೈಬರಹ ಉಜ್ಜಲು ಮನಸ್ಸು ಬರುತ್ತಿರಲಿಲ್ಲ
ಶಿಕ್ಷಕರು ಎಂದಾಕ್ಷಣ ನನಗೆ ನೆನಪಾಗೋದು ಗುರುಗಳಾದ ನಾಗೇಂದ್ರ ಸರ್‌. ತರಗತಿಯ ಕಪ್ಪು ಹಲಗೆ, ಶಿಕ್ಷಕರ ಕೈ ಬರಹ ಹಲಗೆಯ ಮೇಲೆ ಮುತ್ತು ಪೋಣಿಸಿದ ಹಾಗೆ ಕಣ್ಣ ಮುಂದೆ ಈಗಲೂ ಹಾಗೆ ಇದೆ. ಕ್ಲಾಸ್‌ ಮುಗಿದ ಮೇಲೆ ಬರುವ ಬೇರೆ ಪ್ರಾಧ್ಯಾಪಕರಿಗೂ ಅದನ್ನು ಉಜ್ಜಲು ಮನಸ್ಸಾಗುವುದಿಲ್ಲ. ಗುರುವಾಗಿ ನಮ್ಮನ್ನು ತಿದ್ದಿ ತೀಡಿದ ಅತ್ಯುತ್ತಮ ಮಾರ್ಗದರ್ಶಕರು. ನಿಮ್ಮದು ಗಂಭೀರ ವ್ಯಕ್ತಿತ್ವ ಎಂದು ತಿಳಿದಿದ್ದರೂ ಗೋಚರ ವಿಲ್ಲದಂತೆ ತರಗತಿಯಲ್ಲಿ ನಕ್ಕರೆ ರಾಕೆಟ್‌ ವೇಗದಲ್ಲಿ ತಲೆಗೆ ಬಂದು ಬಡಿಯುವ ಚಾಕ್‌ ಪೀಸ್‌, ಬೋರ್ಡಿನಲ್ಲಿ ಬರೆಯುವುದಕ್ಕಿಂತ ನಮ್ಮಗಳ ತಲೆ ಮೇಲೆ ಬಡಿದದ್ದೇ ಜಾಸ್ತಿ. ನೀವು ತರಗತಿಗೆ ಬರುವಾಗ ತರುತ್ತಿದ್ದ ನಮ್ಮಕ್ಕಿಂತ ಉದ್ದದ ಸ್ಕೇಲ್‌ ತರಗತಿ ಮುಗಿಯುದರೊಳಗೆ ನಿಮ್ಮ ಕೋಪಕ್ಕೆ ಬಲಿಯಾಗುತ್ತಿತ್ತು. (ಈವಾಗ ತುಂಬಾ ಶಾಂತ ಸ್ವಭಾವದವರಾಗಿದ್ದಾರೆ ಎಂದೂ ಕೇಳಿದ್ದೇನೆ) ಶಿಸ್ತಿನ ಜತೆ ಕಠಿನ ದಂಡನೆ ಆವಗ ನೋವು ಅನುಭವಿಸಿದರೂ ಇಂದು ನನ್ನಂತೆ ಎಷ್ಟೋ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಪಡೆಯುವಲ್ಲಿ ನಿಮ್ಮಂತಹ ಗುರುಗಳ ಪಾತ್ರ ಅಪಾರ.


 ಅನುಷಾ ಶಿವರಾಜ್‌, ಹೆರ್ಗ 

ಗುರುವಿನ ಮಾರ್ಗದರ್ಶನ ಹೂವಿನ ಚಪ್ಪರವಿದ್ದಂತೆ
ಗುರು ಎಂಬ ಎರಡಕ್ಷರದಲ್ಲಿ ಏನಿದೆ ಎಂದು ತಿಳಿಯದವರು ದಡ್ಡರು! ಗುರು ಎನ್ನುವ ಪದವು ತಾಯಿಯಷ್ಟೆ ಪವಿತ್ರವಾದದ್ದು. ನನ್ನ ಜೀವನದಲ್ಲೂ ಗುರುವಿನ ಪಾತ್ರ ಅತ್ಯುನ್ನತ. ಅವರ ಒಳ್ಳೆಯ ಮಾರ್ಗದರ್ಶನಗಳೇ ನನ್ನನ್ನು ಇಲ್ಲಿಯವರೆಗೆ ಹೆಮ್ಮರವಾಗಿ ಬೆಳೆಸಿದೆ. ಇಂದಿನ ಈ ಶುಭ ಸಂದರ್ಭ ನನ್ನ ನೆಚ್ಚಿನ ಗುರುಗಳಾದ ಎಂ.ಡಿ. ಕುಮಶಿ ಸರ್‌ ಮತ್ತು ಶ್ರೀಧರ್‌ ಹರಿಕಂತ್ರ ಸರ್‌ ಅವರನ್ನು ನೆನಪಿಸಿಕೊಳ್ಳಲು ಇಚ್ಚಿಸುತ್ತೇನೆ. ಇವರ ಅಮೂಲ್ಯವಾದ ಹಿತವಚನಗಳು ನನ್ನನ್ನು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ. ಅವರಿಂದ ನಾನು ದೂರ ಇರಬಹುದು. ಆದರೆ ಅವರ ಮೇಲಿನ ಪ್ರೀತಿ, ಕಾಳಜಿ, ಗೌರವ, ನಂಬಿಕೆ, ಎಲ್ಲ ಮೊದಲಿನಷ್ಟೇ ನಾನು ಎಷ್ಟೇ ಜೀವನದಲ್ಲಿ ಮುಂದೆ ಪ್ರಯಾಣಿಸಿದರೂ ಇವರ ಮಾರ್ಗದರ್ಶನಗಳು ನನಗೆ ಹೂವಿನ ಚಪ್ಪರವಿದ್ದಂತೆ.


 ವಂದನ ಮೋಹನ್‌ ಹೆಗ್ಡೆ, ಎಸ್‌ಡಿಎಂ ಬಿಇ ಕಾಲೇಜು ಉಜಿರೆ 

ಫೇಲ್‌ ಆದರೆ ಧೈರ್ಯ ಹೇಳುತ್ತಿದ್ದರು
ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಇದ್ದನೆಂದರೆ ಅದರಲ್ಲಿ ಗುರುವಿನ ಬಹುದೊಡ್ಡ ಪಾಲು ಇರುತ್ತದೆ. ನನ್ನ ಜೀವನದಲ್ಲಿ ಕೂಡ ಗುರುವಿನ ಪಾಲು ದೊಡ್ಡದಿದೆ ನನಗೆ ಪದವಿಯಲ್ಲಿ ಶುಭಲಕ್ಷ್ಮೀ ಮೇಡಂ ತುಂಬಾ ತುಂಬಾ ಅಚ್ಚುಮೆಚ್ಚು. ಯಾಕೆಂದರೆ ನಾನು ಏನಾದರೂ ತಪ್ಪು ಮಾಡಿದರೆ ಅದನ್ನು ತಿದ್ದಿ ಮಾತಿನ ಪೆಟ್ಟಿನ ಮುಖಾಂತರ ನನ್ನನ್ನು ಸರಿ ದಾರಿಗೆ ತರುತ್ತಿದ್ದರು. ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಗಳು ಕೂಡ ಕಡಿಮೆ ಅಂಕಗಳಿಸಿದರೆ ಅವರನ್ನು ಬೈಯದೇ ಪೋತ್ಸಾಹ ನೀಡುತ್ತಿದ್ದರು. ಪರೀಕ್ಷೆಯಲ್ಲಿ ಫೇಲ್‌ ಆದರೆ ಧೈರ್ಯ ಹೇಳಿ ಆ ಪೋತ್ಸಾಹಿಸುತ್ತಿದ್ದರು.


ತೌಫೀಕ್‌ ಸಾಣೂರು, ಎಂ.ಪಿ.ಎಂ ಕಾಲೇಜು, ಕಾರ್ಕಳ 

ಗುರುಶಿಷ್ಯರ ಸಂಬಂಧ ಬಿಡಿಸಲಾಗದ ಅನುಬಂಧ
ಅರಿವಿನ ಲೋಕದಲ್ಲಿ ಹಿರಿಯರಾಗಿ ಅದರಲ್ಲೊಂದಿಷ್ಟು ತನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಭವಿಷ್ಯದಲ್ಲಿ ಅವರ ಬಾಳು ಬೆಳಗುವಂತೆ ಮಾಡುವ ಜಗತ್ತಿನ ಎಲ್ಲ ಗುರುಗಳ ಋಣವನ್ನು ತೀರಿಸಲು ಸಾಧ್ಯವೇ? ನನ್ನ ವಿದ್ಯಾರ್ಥಿ ತನಗಿಂತ ಉನ್ನತ ಮಟ್ಟಕ್ಕೆ ತಲುಪಿದ್ದಾನೆ. ಉನ್ನತ ಹುದ್ದೆಯಲ್ಲಿದ್ದಾನೆ ಎಂದರೆ ಅತೀ ಹೆಚ್ಚು ಸಂತೋಷಪಡುವ ಏಕೈಕ ವ್ಯಕ್ತಿ ಎಂದರೆ ಅದು ಗುರುಗಳು ಮಾತ್ರ. ನಿಸ್ವಾರ್ಥ ಭಾವದಿಂದ ಜಗತ್ತನ್ನು ಕಾಣುವ ದೊಡ್ಡ ಗುಣ ಅವರದ್ದು. ಹೃದಯ ಶ್ರೀಮಂತಿಕೆ ಉಳ್ಳವರು. ಗುರು ಶಿಷ್ಯರ ಸಂಬಂಧ ಬಿಡಿಸಲಾಗದ ಅನುಬಂಧ.


 ಸಂಗೀತ ಶ್ರೀಕೆ. ತುಮಕೂರು ವಿಶ್ವವಿದ್ಯಾನಿಲಯ 

 

 

Advertisement

Udayavani is now on Telegram. Click here to join our channel and stay updated with the latest news.

Next