Advertisement

ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ : ಸಚಿವ ಈಶ್ವರಪ್ಪ

04:44 PM Aug 16, 2021 | Shreeraj Acharya |

ಶಿವಮೊಗ್ಗ: ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಸಮಾನತೆ, ಸಹೋದರತೆ, ಸಾಮರಸ್ಯ ನಮ್ಮ ನಿತ್ಯ ಬದುಕಿನ ಭಾಗವಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಜಿಲ್ಲಾ ಪೊಲೀಸ್‌ ಪರೆಡ್‌ ಮೈದಾನದಲ್ಲಿ ಭಾನುವಾರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಾನೂನು ಗೌರವಿಸುವುದು, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿ ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲೂ ವೈಜ್ಞಾನಿಕವಾಗಿ ಕಸ ವಿಲೇ ಮಾಡಲು ಜಿಲ್ಲೆಯ 269 ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲಾಗುತ್ತಿದೆ. ಈಗಾಗಲೆ 100 ಪಂಚಾಯಿತಿಗಳಲ್ಲಿ ಸಂಕೀರ್ಣ ನಿರ್ಮಿಸಿ ಕಸ ಸಂಗ್ರಹ ಆರಂಭಿಸಲಾಗಿದೆ. 84 ಪಂಚಾಯಿತಿಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 242 ಸ್ವತ್ಛ ವಾಹಿನಿಗಳನ್ನು ಗ್ರಾಮ ಪಂಚಾಯಿತಿಗಳಿಗೆ ಒದಗಿಸಲಾಗಿದೆ ಎಂದರು.

ಮುಂದಿನ ಎರಡು ವರ್ಷದಲ್ಲಿ ಎಲ್ಲ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದೆ. ಬೆಳೆ ಸಮೀಕ್ಷೆಗೆ ಮುಂಗಾರು ಬೆಳೆ ವಿವರವನ್ನು ಅಪ್‌ ಲೋಡ್‌ ಮಾಡಲು ಆ.31ರವರೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ರೈತರ ಆರ್ಥಿಕ ಚಿತ್ರಣ ಬದಲಾಯಿಸುವ ನೀರಾವರಿ ಯೋಜನೆಗಳನ್ನು ದಾಖಲೆ ಅವಧಿ ಒಳಗಾಗಿ ಪೂರ್ಣಗೊಳಿಸಿರುವುದು ನಮ್ಮ ಹೆಗ್ಗಳಿಕೆ. ಕೆರೆಗಳನ್ನು ತುಂಬಿಸುವ ಈ ಯೋಜನೆಗಳಿಂದ ರೈತರ ಹೊಲಗಳಿಗೆ ಬೇಸಿಗೆಯಲ್ಲೂ ನೀರು ಸಿಗಲಿದೆ. ಉಡುಗಣಿ ತಾಳಗುಂದ ಏತ ನೀರಾವರಿ ಯೋಜನೆ, ಹೊಸಳ್ಳಿ ಏತ ನೀರಾವರಿ ಯೋಜನೆ, ಮೂಗೂರು ಮತ್ತು ಮೂಡಿ ಏತ ನೀರಾವರಿ ಯೋಜನೆ ಹಾಗೂ ಕಸಬಾ ಏತ ನೀರಾವರಿ ಯೋಜನೆಗಳು ಮುಂದಿನ ದಿನಗಳಲ್ಲಿ ರೈತರ ಬದುಕಲ್ಲಿ ಬೆಳಕು ಹರಿಸಲಿವೆ ಎಂದರು.

ಕೊರೊನಾ 3ನೇ ಅಲೆ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಕ್ಷೇತ್ರದ ಮೂಲಸೌಲಭ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ತಾಲೂಕು ಆಸ್ಪತ್ರೆಗಳು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ನಮಗೆ ಸಾಧ್ಯವಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ ಗಳು ಮಾತ್ರವಲ್ಲದೆ, ಆಕ್ಸಿಜನ್‌ ಉತ್ಪಾದನಾ ಘಟಕಗಳನ್ನು ಸಹ ಸ್ಥಾಪಿಸುವ ಸಿದ್ಧತೆ ಕೈಗೊಳ್ಳಲಾಗಿದೆ. ಶಿವಮೊಗ್ಗದಲ್ಲಿ 30 ಸಾವಿರ ಲೀಟರ್‌, ಸಾಗರ ಮತ್ತು ಶಿಕಾರಿಪುರದಲ್ಲಿ ತಲಾ 6ಸಾವಿರ ಲೀಟರ್‌, ಹೊಸನಗರದಲ್ಲಿ 2ಸಾವಿರ ಸಾಮರ್ಥ್ಯದ ಆಕ್ಸಿಜನ್‌ ಉತ್ಪಾದನಾ ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

Advertisement

ಮೆಗ್ಗಾನ್‌ ಆವರಣದಲ್ಲಿ 50 ಹಾಸಿಗೆ ಸಾಮರ್ಥ್ಯದ ಕ್ಯಾಥ್‌ಲ್ಯಾಬ್‌ ಲೋಕಾರ್ಪಣೆ ಮಾಡಲಾಗಿದ್ದು, ಬಡವರಿಗೆ ಹೃದಯ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಸಾಧ್ಯವಾಗಿದೆ. ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಗರದ ಚಿತ್ರಣವನ್ನೇ ಬದಲಾಯಿಸಲಿದೆ.

ಒಳಚರಂಡಿ, ಭೂಗತ ವಿದ್ಯುತ್‌ ಕೇಬಲ್‌ ಅಳವಡಿಕೆ, ಮಾದರಿ ರಸ್ತೆಗಳ ನಿರ್ಮಾಣ, ವಿಶಾಲವಾದ ಪಾದಚಾರಿ ಮಾರ್ಗಗಳು, ಕಣ್ಮನ ಸೆಳೆಯುವ ಉದ್ಯಾನವನಗಳು, ಪಾರಂಪರಿಕ ತಾಣಗಳ ಅಭಿವೃದ್ಧಿ ಸೇರಿದಂತೆ 53 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ 14 ಕಾಮಗಾರಿಗಳು ಪೂರ್ಣಗೊಂಡಿವೆ. 943 ಕೋಟಿ ರೂ. ಮೊತ್ತದ 38 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಅಶೋಕ ನಾಯ್ಕ, ರುದ್ರೇಗೌಡ, ಮೇಯರ್‌ ಸುನೀತಾ ಅಣ್ಣಪ್ಪ, ಉಪ ಮೇಯರ್‌ ಶಂಕರ್‌ ಗನ್ನಿ, ಪ್ರತಿಪಕ್ಷದ ನಾಯಕ ಎಚ್‌.ಸಿ.ಯೋಗೇಶ್‌, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿಪ್ರಕಾಶ್‌, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ಡಿಸಿ ಕೆ.ಬಿ. ಶಿವಕುಮಾರ್‌, ಸಿಇಒ ಎಂ.ಎಲ್‌. ವೈಶಾಲಿ, ಎಸ್ಪಿ ಲಕ್ಷ್ಮೀ ಪ್ರಸಾದ್‌, ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಮತ್ತಿತರರು ಇದ್ದರು. ಇದೇ ಸಂದರ್ಭ ಕೊರೊನಾ ವಾರಿಯರ್ಸ್‌ ಗಳಾದ ಆರೋಗ್ಯ ಇಲಾಖೆ, ಪಾಲಿಕೆ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next