Advertisement

ಒಡಿಯೂರು ಗ್ರಾಮ ವಿಕಾಸ ಯೋಜನೆ : ಮಾಣಿಲದ ಬಡ ಕುಟುಂಬಕ್ಕೆ ಮನೆ

01:30 AM Aug 09, 2018 | Karthik A |

ಒಡಿಯೂರು: ಮಾಣಿಲ ಗ್ರಾಮದ ಬಡ ಕುಟುಂಬದ ಬಗ್ಗೆ ಉದಯವಾಣಿ ಸುದಿನದಲ್ಲಿ ಪ್ರಕಟವಾದ ವರದಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಮಾರ್ಗದರ್ಶನದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸ್ಪಂದಿಸಿದೆ. ಜೂ. 8ರಂದು ಉದಯವಾಣಿ ಸುದಿನದಲ್ಲಿ ಪ್ರಕಟವಾದ ಸರಕಾರದ ಯಾವ ಸೌಲಭ್ಯಗಳೂ ‘ಅರ್ಹ ಫಲಾನುಭವಿಗೆ ತಲುಪಿಲ್ಲ, ಅನಕ್ಷರಸ್ಥ, ಕೂಲಿ ಕಾರ್ಮಿಕ ಬಡ ಕುಟುಂಬಕ್ಕೆ ಮನೆ – ಶೌಚಾಲಯವಿಲ್ಲ’ ಎಂಬ ಅಗ್ರವಾರ್ತೆಯನ್ನು ಗಮನಿಸಿದ ಸಾಧ್ವಿ ಮಾತಾನಂದಮಯೀ ಅವರು ಶ್ರೀ ಗುರುದೇವಾನಂದ ಸ್ವಾಮೀಜಿ ಗಮನಕ್ಕೆ ತಂದಿದ್ದರು.

Advertisement

ತತ್‌ ಕ್ಷಣ ಸ್ಪಂದಿಸಿದ ಸ್ವಾಮೀಜಿ, ಗ್ರಾಮ ವಿಕಾಸ ಯೋಜನೆಯವರು ಸ್ಥಳ ಪರಿಶೀಲಿಸುವುದಕ್ಕೆ ಮಾರ್ಗದರ್ಶನ ಮಾಡಿದರು. ಅದರಂತೆ ಯೋಜನೆಯ ಪದಾಧಿಕಾರಿಗಳು ನೆಕ್ಕರೆ ನಿವಾಸಿ ನಾರಾಯಣ ನಾಯ್ಕ-ಲಲಿತಾ ದಂಪತಿಯ ಮುರುಕಲು ಮನೆಗೆ ಭೇಟಿ ನೀಡಿ  ಭೂಮಿಗೆ ಸಂಬಂಧಪಟ್ಟ ದಾಖಲೆಗಳನ್ನು ಕಂದಾಯ ಇಲಾಖೆಗೆ ಕಳುಹಿಸಿ, ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಅದಲ್ಲದೇ ಯೋಜನೆಯ ನವನಿಕೇತನ ಯೋಜನೆಯಡಿ ಅವರಿಗೆ ಮನೆ ಮಂಜೂರು ಮಾಡಲಾಗಿದೆ.

ಗುರುವಾರ ನಡೆದ ಒಡಿಯೂರು ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವದ ಸಮಾರಂಭದಲ್ಲಿ ಆ ಕುಟುಂಬಕ್ಕೆ ಕ್ಷೇತ್ರದ ಸಹಸಂಸ್ಥೆ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಮೂಲಕ ಶ್ರೀಗಳು ನವನಿಕೇತನ ಯೋಜನೆಯ ವ್ಯವಸ್ಥೆಗೆ ಸೇರ್ಪಡೆಗೊಳಿಸಿ, ಮನೆ ನಿರ್ಮಿಸಿಕೊಡುವುದಕ್ಕೆ ಮೊದಲ ಕಂತಿನ ಅನುದಾನವನ್ನು ನೀಡಿ ಹರಸಿದರು. ಮಾಣಿಲ ಗ್ರಾಮ ಸಮಿತಿ ಅಧ್ಯಕ್ಷರಿಗೆ ಅನುದಾನವನ್ನು ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next