Advertisement

Udayavani: ಏಸುವಿನ ಸಂದೇಶ ಪಾಲನೆಯಿಂದ ಶಾಂತಿ, ನೆಮ್ಮದಿ- ಡಾ| ಜೆರ್ರಿ ವಿನ್ಸೆಂಟ್‌ ಡಯಾಸ್‌

11:07 PM Feb 15, 2024 | Team Udayavani |

ಉಡುಪಿ: ಹಟ್ಟಿಯಲ್ಲಿ ಹುಟ್ಟಿದ ಏಸು ವಿಶ್ವಕ್ಕೆ ಬೆಳಕು ನೀಡಿದ್ದಾರೆ. ಏಸುವಿನ ಸಂದೇಶ ಪಾಲಿಸಿದರೆ ಶಾಂತಿ-ನೆಮ್ಮದಿ ಇರಲು ಸಾಧ್ಯವಿದೆ. ಗೋದಲಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿ ಧರ್ಮದ ಅರಿವು ಮೂಡಿಸಬೇಕು ಎಂದು ಮಾಂಡವಿ ಬಿಲ್ಡರ್ ಆ್ಯಂಡ್‌ ಡೆವಲಪರ್ನ ಎಂಡಿ ಡಾ| ಜೆರ್ರಿ ವಿನ್ಸೆಂಟ್‌ ಡಯಾಸ್‌ ಹೇಳಿದರು.

Advertisement

ಕ್ರಿಸ್ಮಸ್‌ ಹಬ್ಬದ ಸಂದರ್ಭ “ಉದಯವಾಣಿ’ ಆಯೋಜಿಸಿದ್ದ ಕ್ರಿಸ್ಮಸ್‌ ಗೋದಲಿ ಸ್ಪರ್ಧೆಯ ವಿಜೇತರಿಗೆ ಗುರುವಾರ “ಉದಯವಾಣಿ’ ಮಣಿಪಾಲ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಜಗತ್ತಿಗೆ ಗೋದಲಿಯ ಮೂಲಕ ಏಸು ಸಂದೇಶ ನೀಡಿದ್ದಾರೆ. ತಾನು ಬೆಳೆಯಬೇಕು; ತನ್ನವರೂ ಬೆಳೆಯಬೇಕು ಎನ್ನುವ ಕಲ್ಪನೆ ಮಣಿಪಾಲದ ಪೈ ಕುಟುಂಬದ್ದು. ನಾನು ಇಲ್ಲಿ ನೆಲೆಯೂರಲೂ ಪೈ ಕುಟುಂಬವೇ ಕಾರಣ. “ಉದಯವಾಣಿ’ ಪತ್ರಿಕೆ ಕ್ರೈಸ್ತ ಬಂಧುಗಳ ಬೆಳಗ್ಗಿನ ಬ್ರೇಕ್‌ಫಾಸ್ಟ್‌ ಇದ್ದಂತೆ. ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರೂ ಮನೆಯಲ್ಲಿ “ಉದಯವಾಣಿ’ ಪತ್ರಿಕೆ ಓದುತ್ತಿರುವುದು ಪತ್ರಿಕೆಯ ಮೇಲಿನ ಪ್ರೀತಿಗೆ ಸಾಕ್ಷಿ ಎಂದರು.

ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅವರು ವಿಜೇತರಿಗೆ ಶುಭಹಾರೈಸಿದರು.

ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಎಂಡಿ ಹಾಗೂ ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ಕ್ರಿಸ್ಮಸ್‌ ಸಂದರ್ಭ ಕ್ರಿಬ್‌ ನಿರ್ಮಾಣ ಸಂಪ್ರದಾಯ ಹಾಗೂ ಪ್ರಮುಖ ಅಂಗವಾಗಿದೆ. ಕ್ರಿಯಾಶೀಲತೆ, ವಿಶ್ವಾಸಾರ್ಹತೆ, ಪ್ರೀತಿ ಹಾಗೂ ಏಸುವಿನ ಜನ್ಮದ ವೈಶಿಷ್ಟéವನ್ನು ಕ್ರಿಬ್‌ ಮೂಲಕ ತೋರ್ಪಡಿಸುವ ಕಾರ್ಯ ಮಹತ್ತರವಾದುದು. ಕ್ರೈಸ್ತ ಸಮುದಾಯ ಪತ್ರಿಕೆ ಆರಂಭದಿಂದಲೂ ಜತೆಗಿದೆ. ಇಂತಹ ಕಾರ್ಯಕ್ರಮದಲ್ಲಿ ಸಮುದಾಯದವರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

Advertisement

ಪೆರಂಪಳ್ಳಿ ಟ್ರಿನಿಟಿ ಚರ್ಚ್‌ನ ಧರ್ಮಗುರು ವಂ| ರವಿರಾಜೇಶ್‌ ಮಾತನಾಡಿ, ನೈಜತೆ ಹಾಗೂ ನಿಸರ್ಗದತ್ತವಾದ ಗೋದಲಿಗಳಿಗೆ ಆದ್ಯತೆ ನೀಡಲಾಗಿದೆ. ಕರಾವಳಿ ಭಾಗದ ಬಹುತೇಕ ಎಲ್ಲ ಮನೆಗಳಲ್ಲಿಯೂ “ಉದಯವಾಣಿ’ ಪತ್ರಿಕೆ ಮನೆಮಾತಾಗಿದೆ. ಇದು ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿ. ಗೋದಲಿಯಲ್ಲಿ ಎಲ್ಲರ ಶ್ರಮ ಕಾಣುತ್ತಿತ್ತು. ಇಂತಹ ಪ್ರಯತ್ನಗಳು ಮತ್ತಷ್ಟು ನಡೆಯುವಂತಾಗಲಿ ಎಂದು ಹಾರೈಸಿದರು.

“ಉದಯವಾಣಿ’ ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದು, ಸಮುದಾಯವನ್ನು ಒಳಗೊಳ್ಳುವ ಸ್ಪರ್ಧೆ ಇದಾಗಿದೆ. ಈ ಮೂಲಕ ಜನರು, ಓದುಗರನ್ನು ತೊಡಗಿಸುತ್ತದೆ ಎಂದರು.
ಮಾಂಡವಿ ಬಿಲ್ಡರ್ ಆ್ಯಂಡ್‌ ಡೆವಲಪರ್ ಸಂಸ್ಥೆಯ ಜೇಸನ್‌ ಡಯಾಸ್‌ ಉಪಸ್ಥಿತರಿದ್ದರು. “ಉದಯವಾಣಿ’ ಉಡುಪಿ ವಲಯದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ಬಹುಮಾನಿತರ ಪಟ್ಟಿ ವಾಚಿಸಿದರು. “ಉದಯವಾಣಿ’ ಉಪಾಧ್ಯಕ್ಷ (ಪ್ರಸರಣ ಮತ್ತು ವ್ಯಾಪಾರ ಅಭಿವೃದ್ಧಿ) ಸತೀಶ್‌ ಶೆಣೈ ವಂದಿಸಿದರು.

“ಉದಯವಾಣಿ’ ಉಪಾಧ್ಯಕ್ಷ (ಮ್ಯಾಗಝಿನ್‌ ಮತ್ತು ಸ್ಪೆಷನ್‌ ಇನೀಶಿಯೇಟಿವ್ಸ್‌) ರಾಮಚಂದ್ರ ಮಿಜಾರು ನಿರೂಪಿಸಿ, “ಉದಯವಾಣಿ’ ಪತ್ರಿಕೆ ಓದುಗರಿಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸರ್ವಸಮುದಾಯಗಳೊಂದಿಗೆ ಬೆಸೆದು ವಿಶ್ವಾಸಕ್ಕೆ ಪಾತ್ರವಾದ “ಉದಯವಾಣಿ’ ಕ್ರೈಸ್ತ ಸಮುದಾಯದ ಏಸು ಕ್ರಿಸ್ತರು ಜನಿಸಿದ ಗೋದಲಿ ಸ್ಪರ್ಧೆಯನ್ನು 6 ವರ್ಷಗಳಿಂದ ಅತ್ಯಂತ ಪಾರದರ್ಶಕವಾಗಿ ನಡೆಸಿಕೊಂಡು ಬರುತ್ತಿದೆ. ಕ್ರೈಸ್ತ ಸಮುದಾಯದವರು ನಿತ್ಯ ನಿರಂತರ ಪತ್ರಿಕೆಯನ್ನು ಮೆಚ್ಚಿ ಓದುತ್ತಾ ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ಎಂದರು.

ವಿಜೇತರ ವಿವರ

ಪ್ರಥಮ: ಅನುಜ್‌ ಕ್ಯಾಸ್ಟಲಿನೊ ಬಿಕರ್ನಕಟ್ಟೆ, ದ್ವಿತೀಯ: ಆ್ಯಶ್ಲೆ ಕ್ಲಿಯೋನ್‌ ಕುಟಿನ್ಹಾ ಮುಡಿಪು, ಸೈಂಟ್‌ ಪೀಟರ್‌ ಚರ್ಚ್‌ (ಐಸಿವೈಎಂ ಬಾರ್ಕೂರು), ತೃತೀಯ: ಸೈಂಟ್‌ ಆ್ಯಂಟೊನಿ ವಾರ್ಡ್‌ ಬಂಟ್ವಾಳ, ಸೈಂಟ್‌ ಪಿಯೂಸ್‌ ಚರ್ಚ್‌ ಬಳಗ ಮೂಡುಪಲಿಮಾರು ವಾರ್ಡ್‌ ಪಲಿಮಾರು, ಹೋಲಿಕ್ರಾಸ್‌ ವಾರ್ಡ್‌ ಕೋಡಿಕಲ್‌.

ಸಮಾಧಾನಕರ ಬಹುಮಾನ: ಜೋಯಲ್‌ ಟೆರೆನ್ಸ್‌ ಪಿರೇರಾ ನೀರುಮಾರ್ಗ ಮಂಗಳೂರು, ಸೈಂಟ್‌ ಲಾರೆನ್ಸ್‌ ವಾರ್ಡ್‌ ಬಂಟ್ವಾಳ, ಹೋಲಿ ಕ್ರಾಸ್‌ ಚರ್ಚ್‌ ಮಂಜೊಟ್ಟಿ ಬೆಳ್ತಂಗಡಿ, ಸೈಂಟ್‌ ಸೆಬಾಸ್ಟಿಯನ್‌ ಚರ್ಚ್‌ ಕಳೆಂಜ (ಎಸ್‌ಎಂವೈಎಂ ಯುನಿಟ್‌), ಐಸಿವೈಎಂ ಅಮ್ಮೆಂಬಾಳ್‌ ಯುನಿಟ್‌ ಚೇಳೂರು, ಐಸಿವೈಎಂ ಶಂಕರಪುರ ಕಾಪು, ರೊಲ್ಫ್ರೊಯಲ್‌ ಕುಂದಾಪುರ, ಸೈಂಟ್‌ ಜೋಸೆಫ್ ಚರ್ಚ್‌ ವಾಮಂಜೂರು.

ತೀರ್ಪುಗಾರರಾಗಿ ಬಾರ್ಕೂರು ಚರ್ಚ್‌ನ ಧರ್ಮಗುರು ವಂ| ರಾಲ್ವಿನ್‌ ಫೆರ್ನಾಂಡಿಸ್‌ ಮತ್ತು ಪೆರಂಪಳ್ಳಿ ಟ್ರಿನಿಟಿ ಚರ್ಚ್‌ನ ಧರ್ಮಗುರು ವಂ| ರವಿರಾಜೇಶ್‌ ವಿಜೇತರನ್ನು ಆಯ್ಕೆ ಮಾಡಿದರು.

ಗೋದಲಿ ಸ್ಫರ್ಧೆಯ ಮೂಲಕ ನಮ್ಮ ಊರಿನ ಹೆಸರು ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು ಸಂತೋಷ ತಂದಿದೆ. 15 ದಿನಗಳ ಕಾಲ ಕ್ರಿಬ್‌ ರಚನೆಗಾಗಿ ಹಗಳಿರುಳು ಶ್ರಮಿಸಿದ್ದೇವೆ. ಇಂತಹ ಸ್ಪರ್ಧೆಗಳ ಮೂಲಕ ಸಮುದಾಯದವರಿಗೆ ಪತ್ರಿಕೆ ಮತ್ತಷ್ಟು ಅವಕಾಶ ಕಲ್ಪಿಸುವಂತಾಗಲಿ.
– ರಿಶಾಂತ್‌, ವಾಮಂಜೂರು

ಕಡಿಮೆ ವೆಚ್ಚದಲ್ಲಿ ಉತ್ತಮ ಕ್ರಿಬ್‌ ತಯಾರಿಸಬೇಕು. ಈ ಹಿಂದೆ “ಉದಯವಾಣಿ’ ಪತ್ರಿಕೆಯಲ್ಲಿ ಬರುತ್ತಿದ್ದ ಕ್ರಿಬ್‌ ಚಿತ್ರಗಳನ್ನು ನೋಡಿ ಮತ್ತಷ್ಟು ಆಲೋಚನೆಗಳು ನನ್ನಲ್ಲಿ ಮೂಡಿದವು. ತಂದೆ ಹಲವಾರು ವರ್ಷಗಳಿಂದ ಕ್ರಿಬ್‌ ತಯಾರಿಸುತ್ತಿದ್ದರು. ಈಗ ನಾನು ಅದರಲ್ಲಿ ಆಸಕ್ತಿ ಹೊಂದಿ ಮಾಡುತ್ತಿದ್ದೇನೆ. ನಮ್ಮ ಕ್ರಿಯಾಶೀಲತೆಯನ್ನು ಗುರುತಿಸಿರುವುದಕ್ಕೆ ಪತ್ರಿಕೆಗೆ ಅಭಿನಂದನೆಗಳು.
-ಅನುಜ್‌ ಕ್ಯಾಸ್ಟಲಿನೋ, ಬಿಕರ್ನಕಟ್ಟೆ (ಪ್ರಥಮ ಬಹುಮಾನ ವಿಜೇತರು)

Advertisement

Udayavani is now on Telegram. Click here to join our channel and stay updated with the latest news.

Next