Advertisement

Gangavathi: ಉದಯವಾಣಿ ಇಂಪ್ಯಾಕ್ಟ್:  ಕಿರಿಯರಿಗಿಲ್ಲ ಪ್ರಾಚಾರ್ಯರ ಪ್ರಭಾರ

10:17 AM Oct 27, 2023 | Team Udayavani |

ಗಂಗಾವತಿ: ರಾಜ್ಯದ ಸರಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಖಾಯಂ ಪ್ರಾಚಾರ್ಯರ ಕೊರತೆಯಿದ್ದು ಕಾಲೇಜುಗಳಲ್ಲಿರುವ ಹಿರಿಯ ಪ್ರಾಧ್ಯಾಪಕರಿಗೆ  ಸೇವೆಗೆ ಸೇರಿದ ಸೇವಾ ಜೇಷ್ಠತೆ ಅನ್ವಯ ಪ್ರಭಾರ ಪ್ರಾಚಾರ್ಯರ ಹುದ್ದೆ ನೀಡುವ ಕುರಿತು ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯ ನಿಯಮದಂತೆ ಕಡ್ಡಾಯ ಪಾಲನೆ ಮಾಡುವಂತೆ ಕಾಲೇಜು  ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.

Advertisement

ವರ್ಗಾವಣೆ, ಅನಾರೋಗ್ಯ ಸೇರಿ ಹಲವು ಸಂದರ್ಭಗಳಲ್ಲಿ ಪ್ರಾಚಾರ್ಯರ ಹುದ್ದೆ ಖಾಲಿಯಾದಲ್ಲಿ ಕಾಲೇಜಿನಲ್ಲಿರುವ ಹಿರಿಯ ಪ್ರಾಧ್ಯಾಪಕರಿಗೆ ಸೇವೆಗೆ ಸೇರಿದ ಜೇಷ್ಠತೆಯ ಆಧಾರಿತವಾಗಿ ಪ್ರಾಚಾರ್ಯರ ಹುದ್ದೆಯ ಪ್ರಭಾರ ವಹಿಸಬೇಕು.

ಇತ್ತೀಚಿಗೆ ರಾಜ್ಯದ ಕೆಲವು ಕಾಲೇಜುಗಳಲ್ಲಿ ಇಲಾಖೆಯ ನಿಯಮ ಉಲ್ಲಂಘನೆ ಮಾಡಿ ಜಾತಿ, ರಾಜಕೀಯ ಪ್ರಭಾವ ಬಳಸಿ ಪ್ರಾಚಾರ್ಯರ ಹುದ್ದೆಯನ್ನು ಕಿರಿಯ ಪ್ರಾಧ್ಯಾಪಕರು ಪಡೆಯುತ್ತಿದ್ದು, ಇದರಿಂದ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿದೆ. ಪ್ರಾಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಗುಂಪುಗಾರಿಕೆ ನಡೆದು ಕಾಲೇಜಿನ ಪರೀಕ್ಷೆಯ ಫಲಿತಾಂಶದ ವ್ಯತಿರಿಕ್ತ ಪರಿಣಾಮಗಳಾಗುತ್ತಿದೆ.ಜತೆಗೆ ಆಡಳಿತಾತ್ಮಕ ಗೊಂದಲಗಳಾಗುತ್ತಿವೆ. ಕೂಡಲೇ ಆದ್ದರಿಂದ  ಸೇವಾ ಜೇಷ್ಠತೆ ನಿಯಮ ಉಲ್ಲಂಘಿಸಿ ಕಿರಿಯ ಪ್ರಾಧ್ಯಾಪಕರು ಪ್ರಾಚಾರ್ಯರ ಹುದ್ದೆ ವಹಿಸಿಕೊಂಡಿದ್ದಲ್ಲಿ ಕೂಡಲೇ ಹಿರಿಯ ಪ್ರಾಧ್ಯಾಪಕರಿಗೆ ಪ್ರಭಾರ ವಹಿಸುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ.

“ಉದಯವಾಣಿ” ಇಂಪ್ಯಾಕ್ಟ್:

ಗಂಗಾವತಿ ಕೊಲ್ಲಿ ನಾಗೇಶ ರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಖಾಯಂ ಪ್ರಾಚಾರ್ಯರಿಲ್ಲದ ಕಾರಣ ಹಿರಿಯ ಪ್ರಾಧ್ಯಾಪಕರಾಗಿದ್ದ ಪ್ರೋ.ನಾರಾಯಣ ಹೆಬ್ಸೂರು ಪ್ರಭಾರ ಪ್ರಾಚಾರ್ಯರಾಗಿದ್ದರು. ಅವರು  ಹೊಸಪೇಟೆಗೆ ವರ್ಗಾವಣೆಯಾದ ನಂತರ ಹಿರಿಯರಾದ ಪ್ರೊ.ಜಗದೇವಿ ಕಲಶೆಟ್ಟಿ ಅವರಿಗೆ ಪ್ರಭಾರ ವಹಿಸಲಾಗಿತ್ತು.

Advertisement

ಆರೋಗ್ಯ ಮತ್ತಿತರ ಕಾರಣಕ್ಕಾಗಿ ಕಲಶೆಟ್ಟಿ ಕನ್ನಡ ಪ್ರಾಧ್ಯಾಪಕ ಡಾ.ಜಾಜಿ ದೇವೆಂದ್ರಪ್ಪ ಅವರಿಗೆ ಪ್ರಭಾರ ವಹಿಸಿದ ಸಂದರ್ಭದಲ್ಲಿ ಸೇವಾ ಜೇಷ್ಠತೆ  ಬಗ್ಗೆ ಆಕ್ಷೇಪ ಕೇಳಿ ಬಂದ ನಂತರ ಸ್ಥಳೀಯ ಶಾಸಕ ಹಾಗೂ ಕಾಲೇಜು ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಡಾ.ಜಾಜಿ ಅವರಿಗೆ ಪ್ರಭಾರ ವಹಿಸಿಕೊಳ್ಳದಂತೆ ಸೂಚಿಸಿದ್ದರಿಂದ ಮೊದಲಿದ್ದ ಕಲಶೆಟ್ಟಿಯವರಿಗೆ ಪುನಃ ಪ್ರಾಚಾರ್ಯರ ಪ್ರಭಾರ ವಹಿಸಿಕೊಳ್ಳಲು ಸೂಚಿಸಿದರು.

ನಂತರ ಕೆಲವೇ ತಿಂಗಳಲ್ಲಿ ಡಾ.ಜಾಜಿ ದೇವೆಂದ್ರಪ್ಪ ಪು‌ನಃ ಪ್ರಭಾರ ಪ್ರಾಚಾರ್ಯರಾಗಿ ನಿಯೋಜನೆಗೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಪ್ರಾಚಾರ್ಯರ ಹುದ್ದೆಯ ಪ್ರಭಾರ ಮತ್ತು ಕಾಲೇಜುಗಳಲ್ಲಿ ಆಡಳಿತಾತ್ಮಕ ಗೊಂದಲಗಳ  ಕುರಿತು ಉದಯವಾಣಿ ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು, ಸಚಿವರು ಮತ್ತು ಶಾಸಕರ ಗಮನ ಸೆಳೆದ ಪರಿಣಾಮವಾಗಿ ಅ.10 ರಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಭಾರ ವಹಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ತಪ್ಪದೇ ಪಾಲನೆ ಮಾಡುವಂತೆ ಸುತ್ತೋಲೆ ಹೊರಡಿಸಿದ್ದಾರೆ.

ಗಂಗಾವತಿ ಸರಕಾರಿ ಮಹಾವಿದ್ಯಾಲಯ ಸೇರಿದಂತೆ ರಾಜ್ಯದ ಸರಕಾರಿ ಮಹಾವಿದ್ಯಾಲಯಗಳಲ್ಲಿ ಪ್ರಾಚಾರ್ಯರ ಹುದ್ದೆ ಪ್ರಭಾರ ವಹಿಸಿಕೊಂಡಿರುವ ಕಿರಿಯ ಪ್ರಾಧ್ಯಾಪಕರು ಪ್ರಭಾರ ಬಿಟ್ಟುಕೊಡುವ ಅನಿವಾರ್ಯತೆ ಬಂದಿದೆ.

ಗೊಂದಲ:

ಪ್ರಭಾರ ವಹಿಸಿಕೊಳ್ಳಲು ಸೇವಾ ಜೇಷ್ಠತೆ ಪರಿಗಣಿಸುವಂತೆ ಉನ್ನತ ಶಿಕ್ಷಣ ಇಲಾಖೆಯ ನಿಯಮವಿದ್ದರೂ ಇದರಲ್ಲಿ ಗೊಂದಲಗಳಿವೆ. ನೇಮಕಾತಿ ಪಟ್ಟಿ ಬಿಡುಗಡೆ ಅಥವಾ ಸೇವೆಗೆ ಸೇರಿದ ದಿನಾಂಕ ಯಾವುದನ್ನೂ ಸೇವಾ ಜೇಷ್ಠತೆ ಎಂದು ಪರಿಗಣಿಸಲು ಇಲಾಖೆಯು ಸ್ಪಷ್ಟವಾಗಿ ಸೂಚನೆ ನೀಡದೇ ಇರುವುದು ಗೊಂದಲಕ್ಕೆ ಕಾರಣ ಎನ್ನಲಾಗುತ್ತದೆ.

ಕೆಲ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಪಟ್ಟಿ ಪ್ರಕಟಣೆ ಎಂದು ಕೆಲವರು ಸೇವೆಗೆ ಸೇರ್ಪಡೆಯಾದ ದಿನಾಂಕ ಪರಿಗಣಿಸುತ್ತಿದ್ದಾರೆ. ಇಲಾಖೆ ಕೂಡಲೇ ಸುತ್ತೋಲೆ ಹೊರಡಿಸಿ ಗೊಂದಲಕ್ಕೆ ತೆರೆ ಎಳೆಯ ಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next