ದಾವಣಗೆರೆ: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವವನ್ನು ಪ್ರತಿಪಾದಿಸಿ ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ, ದೇಶದೆಲ್ಲೆಡೆ ಪಸರಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿದರು ಎಂದರು. ಹದಿನೆಂಟು ಮತ್ತು ಹತ್ತೂಂಭತ್ತನೇ ಶತಮಾನದ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯರು ಗುಲಾಮರಾಗಿದ್ದ ಇತಿಹಾಸವಿದೆ.
ಕೇರಳದ ಬಹುಸಂಖ್ಯಾತ ಈಳವ ಜನಾಂಗದವರನ್ನು ಅಸ್ಪಶ್ಯ ವರ್ಗವೆಂದು ಪರಿಗಣಿಸಲಾಗುತ್ತಿತ್ತು, ಹೀಗಾಗಿ ಅವರಿಗೆ ದೇವಾಲಯಗಳಿಗೆ ಪ್ರವೇಶವಿರಲಿಲ್ಲ. ಸಾಮಾಜಿಕ ಕ್ರೂರ ಶೋಷಣೆಗೆ ಒಳಗಾದ ಕೆಳ ವರ್ಗದವರಿಗಾಗಿ ನಾರಾಯಣ ಗುರುಗಳು ಅರವಿಪುರಂನಲ್ಲಿ 1888ರಲ್ಲಿ ಮೊಟ್ಟ ಮೊದಲು ಶಿವರಾತ್ರಿ ದಿನದಂದು ಶಿವಲಿಂಗ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿ ದಲಿತರಿಗೆ ಪ್ರವೇಶಿಸುವ, ಪೂಜೆ ಮಾಡುವ ವ್ಯವಸ್ಥೆ ಮಾಡಿದರು.
ಕ್ರಿಶ 1912ರಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಒಟ್ಟು 79 ದೇವಾಲಯಗಳನ್ನು ಸ್ಥಾಪಿಸಿದ ಸಮಾನತೆಯ ಹೋರಾಟ ಮುಂದೆ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಕಾರಣವಾಯಿತು ಎಂದು ಸ್ಮರಿಸಿದರು. ವಿಶ್ವ ಕವಿ ರವೀಂದ್ರನಾಥ ಠ್ಯಾಗೋರ್ ಕೂಡ ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷರನ್ನು ಕಂಡಿಲ್ಲ ಎಂದು ಉದ್ಗರಿಸಿದ್ದರು.
ಗಾಂಧೀಜಿಯವರು ಹರಿಜನೋದ್ಧಾರಕ್ಕೆ ಸ್ಫೂರ್ತಿ ಪಡೆದದ್ದು ನಾರಾಯಣ ಗುರುಗಳಿಂದ. ಹಾಗಾಗಿ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಮತ್ತು ಗಾಂಧೀಜಿಯವರ ಸಾಮಾಜಿಕ ಚಟುವಟಿಕೆ ಹೋಲಿಕೆಯನ್ನು ರೋಮನ್ ಕ್ಯಾಲೆಂಡರ್‌ನಲ್ಲಿ ಕಾಣಬಹುದು ಎಂದು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಬಿ. ಆನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಬ್ರಹ್ಮರ್ಷಿ ನಾರಾಯಣಗುರು ಸಮಾಜದ ಅಧ್ಯಕ್ಷ ಎಚ್. ಶಂಕರ್, ಕಾರ್ಯದರ್ಶಿ ಎ. ನಾಗರಾಜ್, ಉಪಾಧ್ಯಕ್ಷ ಶಾಂತಾರಾಮ್, ಸಿ.ವಿ. ರವೀಂದ್ರಬಾಬು, ಖಜಾಂಚಿ ಇ. ದೇವೇಂದ್ರಪ್ಪ, ಜಂಟಿ ಕಾರ್ಯದರ್ಶಿ ಇ. ಭರಮಪ್ಪ, ನಿರ್ದೇಶಕರಾದ ರಾಜಣ್ಣ, ಮಹಾಬಲೇಶ್, ರಾಮದಾಸ್ ಇತರರು ಉಪಸ್ಥಿತರುಇದ್ದರು.