Advertisement

ಶರಣರ ಜಯಂತಿ ಆಚರಣೆ ಅನಗತ್ಯ

06:39 PM Aug 13, 2021 | Team Udayavani |

ಹೊಸದುರ್ಗ: ಶರಣರು ಜಾತಿಗೆ ಅಂಟಿಕೊಳ್ಳದೆ ಜಾತ್ಯತೀತರಾಗಿ ಬಾಳಿದವರು. ಆದರೆ ಇಂದು ಅದೇ ಶರಣರ ಹೆಸರಿನಲ್ಲಿ ಜಾತಿಯ ಪೋಷಣೆ ನಡೆಯುತ್ತಿರುವುದು ವಿಷಾದನೀಯ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

Advertisement

ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾ ಮಠದಿಂದ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 12 ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಯಾವುದೇ ಶರಣರ, ಮಹಾತ್ಮರ ಜಯಂತಿಗಳನ್ನು ಸರಕಾರ ಮಾಡಬೇಕಿಲ್ಲ, ರಜೆ ನೀಡಬೇಕಿಲ್ಲ. ಹಾಗೆ ಮಾಡಿದರೆ ಅವರ ಕಾಯಕ ಶ್ರದ್ಧೆಯನ್ನು ಕಡೆಗಣಿಸಿದ ಹಾಗೆ ಆಗುತ್ತದೆ ಎಂದರು.

ಜಯಂತಿಗಳನ್ನು ಆಚರಿಸುವ ಹಣದಲ್ಲಿ ಶರಣರ, ಮಹಾತ್ಮರ ವಚನ-ಮಾತು-ಆಲೋಚನೆಗಳನ್ನು ಚಿಕ್ಕ ಪುಸ್ತಕಗಳಲ್ಲಿ ಪ್ರಕಟಿಸಬೇಕು. ಅವುಗಳನ್ನು ಸಾರ್ವಜನಿಕರಿಗೆ ಅದರಲ್ಲೂ ಮಕ್ಕಳಿಗೆ ಸಿಗುವಂತೆ ಮಾಡಿದರೆ ಜಯಂತಿಗಳ ಆಚರಣೆ ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯಪಟ್ಟರು.

ಮಡಿವಾಳ ಮಾಚಿದೇವರದು ಬಿಜಾಪುರ ಜಿಲ್ಲೆಯ ಹಿಪ್ಪರಿಗಿ ಗ್ರಾಮ. ಕಾರ್ಯಕ್ಷೇತ್ರ ಕಲ್ಯಾಣ. ಮಲಿನವಾದ ಬಟ್ಟೆಗಳನ್ನು, ಮನಸ್ಸುಗಳನ್ನು ಮಡಿ ಮಾಡುವ ಕಾಯಕ. ಭಕ್ತರಲ್ಲದ ಭವಿಗಳ ಬಟ್ಟೆ ತೊಳೆಯುವುದಿಲ್ಲ ಎನ್ನುವುದು ಅವರ ಪ್ರತಿಜ್ಞೆ. ಕಲಿದೇವರದೇವ ಅಂಕಿತ. ಇವರ 346 ವಚನಗಳು ದೊರೆತಿವೆ. ಆಚಾರ, ವಿಚಾರ, ಏಕದೇವ ನಿಷ್ಠೆಗೆ ಹೆಸರಾದವರು. ಸ್ವಾಭಿಮಾನಿಯಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳಿ ಜನರ ಅಂಕು ಡೊಂಕುಗಳನ್ನು ತಿದ್ದುವವರು ಗಣಾಚಾರಿ. ಅವರ ವಚನಗಳಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಆಶಯವಿದೆ. ಗುರುಸೇವೆ, ಲಿಂಗಪೂಜೆ, ಜಂಗಮ ದಾಸೋಹಗಳಲ್ಲಿ ಒಂದನ್ನ ಅರಿತು ಮತ್ತೂಂದನ್ನು ಆಚರಿಸಿ ಬಿಡುವಂಥದ್ದಲ್ಲ. ಇವುಗಳ ಜೊತೆಗೆ ಶರಣರ ಸಂಗವೂ ಮುಖ್ಯ ಎಂದವರು. ಇಂಥ ಸಂಗದ ಮಹತ್ವವನ್ನು ತಿಳಿಸಿದ್ದು ಅನುಭ ಮಂಟಪ ಎಂದರು.

ಉಪನ್ಯಾಸ ಮಾಲಿಕೆಯಲ್ಲಿ “ಮಡಿವಾಳ ಮಾಚಿದೇವ; ವಿಷಯದ ಕುರಿತಂತೆ ಪತ್ರಕರ್ತ, ಸಾಹಿತಿ ಮೈಸೂರಿನ ಗಣೇಶ ಅಮೀನಗಡ ಮಾತನಾಡಿ, ಶರಣರ ಜನ್ಮದಿನಗಳನ್ನು ಆಯಾ ಜಾತಿಯವರು ಮಾತ್ರ ಆಚರಿಸುತ್ತಿರುವುದು ಆ ಶರಣರ ಆಶಯಗಳಿಗೇ ವಿರುದ್ಧವಾದುದು. ಮಡಿವಾಳ ಮಾಚಿದೇವರಿಗೆ ಪ್ರಖರವಾದ ಚಿಂತನೆಗಳಿರುವುದು ಅವರ ವಚನಗಳಿಂದ ತಿಳಿಯುತ್ತದೆ. ಕಲಿದೇವರ ದೇವ ಎನ್ನುವುದು ಇವರ ವಚನಾಂಕಿತ. ಬಂಡಾಯ ಮನೋಧರ್ಮದ ಮಾಚಿದೇವರು ನಡೆ-ನುಡಿಗಳನ್ನು ಪ್ರಶ್ನಿಸುತ್ತಲೇ ಸಮಕಾಲೀನರಾಗುವರು. “ವಚನದ ರಚನೆಯ ನುಡಿವ ಬಯಲ ರಂಜಕರೆಲ್ಲ ಭಕ್ತರಪ್ಪರೇ, ವಚನ ತನ್ನಂತಿರದು, ತಾನು ವಚನದಂತಿರ ಎನ್ನುವ ಮೂಲಕ ಶಬ್ದಾಡಂಭರಿಗರನ್ನು ವಿಡಂಬಿಸಿದ್ದಾರೆ ಎಂದು ಹೇಳಿದರು.

Advertisement

ಚಿಕ್ಕಮಗಳೂರಿನ ವೈಷ್ಣವಿ ಎನ್‌. ರಾವ್‌ ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ, ಎಚ್‌. ಎಸ್‌. ನಾಗರಾಜ್‌ ತಬಲಾ ಸಥ್‌ ನೀಡಿದರು. ಶರಣ್‌ ತಬಲಾ ಸಾಥ್‌ ನೀಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next