ಹೊಸಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಎದುರು ನೂರಾರು ಆಶಾ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಆಶಾ ಕಾರ್ಯಕರ್ತೆಯರು ನಾನಾ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಇ-ಸಂಜೀವಿನಿ, ಎನ್ ಸಿಡಿ ಸರ್ವೆ, ಇ-ಸಮೀಕ್ಷೆ ಕೆಲಸಗಳನ್ನು ಆಶಾಗಳಿಂದ ಒತ್ತಾಯಪೂರ್ವಕವಾಗಿ ಮಾಡಿಸುತ್ತಿರುವುದನ್ನು ಕೈಬಿಡಬೇಕು. ಆರ್‌ಸಿಎಚ್ ಪೋರ್ಟಲ್‌ನಲ್ಲಿ ಎಎನ್‌ಸಿ ಹಾಗೂ ಪಿಎನ್‌ಸಿ ಸೇರಿದಂತೆ ಹಲವು ಆಶಾ ಕೆಲಸಗಳು ಡಾಟಾ ಎಂಟ್ರಿ ಆಗುತ್ತಿಲ್ಲ.
ಇದರಿಂದಾಗಿ ಆಶಾಗಳಿಗೆ ಕೆಲಸ ಮಾಡಿದಷ್ಟು ಪ್ರೋತ್ಸಾಹ ಧನ ಸಿಗುತ್ತಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಎಲ್ಲ ಆಶಾ ಕಾರ್ಯಕರ್ತೆಯರಿಗೆ ಕ್ಲೈಮ್ ರಿಪೋರ್ಟ್ ಮತ್ತು ರಿಲೀಸ್ ಕಾಪಿಗಳನ್ನು ಕಡ್ಡಾಯವಾಗಿ ನೀಡಬೇಕು. ತಾಲೂಕಿನ ಹಲವು ನಗರ, ಯುಪಿಎಚ್‌ಸಿಗಳಲ್ಲಿ ಆಶಾಗಳನ್ನು ಹಲವು ವರ್ಷಗಳಿಂದ ವೇತನ ನೀಡದೇ ಪೆಸಲಿಟೆಟರ್ ಎಂದು ಕೆಲಸ ಮಾಡಿಸಲಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಫೆಸಲಿಟೆಟರ್ ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ ನಗರ ಪ್ರದೇಶಗಳಿಗೂ ಫೆಸಿಲಿಟೆಟರ್‌ಗಳನ್ನು ನೇಮಿಸಬೇಕು. ಕಫ ಪರೀಕ್ಷೆ ಸ್ಯಾಂಪಲ್ ತರಲು ಎಲ್ಲ ಕಡೆ ಆಶಾಗಳಿಗೆ ಒತ್ತಾಯಿಸಲಾಗುತ್ತಿದೆ.
ಈ ಕೆಲಸ ಮಾಡಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಆಶಾ ಕಾರ್ಯಕರ್ತೆಯರನ್ನು ನೇಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಖಾಲಿ ಇರುವ ಆಶಾ ಹುದ್ದೆಗಳನ್ನು ಭರ್ತಿ ಮಾಡಬೇಕು. ತಾಲೂಕು ಆಸ್ಪತ್ರೆಯಲ್ಲಿ ಆಶಾಗಳಿಗೆ ವಿಶ್ರಾಂತಿ ಕೋಣೆ ಒದಗಿಸಬೇಕು. ಅಗತ್ಯ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಫೇಸ ಶೀಲ್ಡ್‌ಗಳನ್ನು ನೀಡಬೇಕು. ಕೋವಿಡ್-19 ನಿಯಂತ್ರಣ ಚಟುವಟಿಕೆಯಲ್ಲಿ ಡಾಟಾ ತುಂಬಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು.ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿಕೊಳ್ಳುವುದು ನಿಲ್ಲಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಜಿ.ನಾಗಲಕ್ಷ್ಮೀ, ಡಾ| ಪ್ರಮೋದ್, ಅನ್ನಪೂರ್ಣಾ ಹಾಗೂ ರುಕ್ಮಿಣಿ ಇದ್ದರು.