Advertisement
ಉದಯವಾಣಿ ಪತ್ರಿಕೆ ಜತೆಗಿನ ನಂಟಿನ ಅನುಭವ ಇಲ್ಲಿ ಹಂಚಿಕೊಂಡಿದ್ದಾರೆ:
Related Articles
Advertisement
ಲಾದೀನ ಸೋಜರು ಯಾನೇ ಪೇಪರ್ ಸೋಜರು ನಮ್ಮ ಪತ್ರಿಕಾ ಏಜೆಂಟರು. ಈಗ ಅನಾರೋಗ್ಯ ನಿಮಿತ್ತ ಹಾಸಿಗೆ ಹಿಡಿದಿದ್ದರೂ, ಹಲವು ದಶಕಗಳ ಕಾಲ ನಮಗೆ ಪತ್ರಿಕೆಯನ್ನು ಎಂತಹ ಮಳೆ ,ಚಳಿ, ಬಿಸಿಲು, ಹರತಾಳ ಯಾವ ತಡೆಯಿದ್ದರೂ ಜತನವಾಗಿ ತಲುಪಿಸುತಿದ್ದರು. ಸದ್ಯ ಒಂದು ತಿಂಗಳ ಹಿಂದೆ ಅವರ ಮನೆಗೆ ಹೋಗಿ ಪ್ರೀತಿಯಿಂದ ಮಾತನಾಡಿಸಿದಾಗ ಅವರ ಕಣ್ಣೀರಿನ ಹರಿವು, ಆಗಿನ ಅಮರ ಸದ್ಭಾವಗಳ ಸಂಬಂಧದ ದ್ಯೋತಕ. ಬದುಕಲ್ಲಿ ಎಷ್ಟು ಕಷ್ಟ ಬಂದರೂ ಅದಕ್ಕೆಲ್ಲ ಮೈಯೊಡ್ಡಿ ಬೆಳಗೆ ಪತ್ರಿಕೆ ಹಂಚಿ, ನಂತರ ಟೈಲರ್ ವೃತ್ತಿ ನಡೆಸಿ ಬದುಕು ಕಳೆದಿದ್ದ ಸೋಜರು ಈಗ ಹಾಸಿಗೆವಾಸಿ.
“ಹೆಡ್ ಮಾಟರು” ನಮ್ಮ ಮನೆಯ ಪೇಪರಿನಲ್ಲಿರುವ ಸೋಜರ ಅಕ್ಷರ ಮಾಲೆ, ಮೂವತ್ತು ವರ್ಷ ತಪ್ಪು ಬರೆದಿದ್ದರೂ ಸರಿ ಪಡಿಸುವ ಗೋಜಿಗೆ ನಾವು ಹೋಗಲಿಲ್ಲ. ಅಂತಹ ಮುಗ್ದ ಸೋಜರ ಅಕ್ಷರ ಅವರನ್ನು ಬೇಸರ ಪಡಿಸಲು ಮನಮಾಡಲಿಲ್ಲ. ಅಜ್ಜ ತೀರಿ ಹೋದ ನಂತರ ,ಸೋಜರ ಅಕ್ಷರ ಬದಲಾಯಿತು. ತಂದೆಯ ರಾಘವೇಂದ್ರ ರಾವ್ ಹೆಸರನ್ನು..” ರಾಗವರು” ಎಂದು ಬರೆಯುತಿದ್ದರು ..ಅದನ್ನೆಲ್ಲ ಓದುವಾಗ ನಮಗೂ ಅವರ ಮುಗ್ದತೆ ಅರಿವು. ಉಡುಪರು “ಓಡಿಪಾರು”,ಕೇಶವ ಭಟ್ ” ಕೇಸವ ಭಟರು”, ಪೂಂಜರು “ಪುಂಜ” ರು ಆಗಲ್ಪಟ್ಟು ಹೊಸ ವ್ಯಾಖ್ಯಾನ ಗಳಿಗೆ ದಾರಿಯಾದರೂ ಯಾರೂ ಬೇಸರ ಪಡುತ್ತಿರಲಿಲ್ಲ.
ನಮಗೆ ಸಾಧಾರಣ ಐದು ವರ್ಷ ಆಗುವಾಗ ಪೇಪರ್ ಓದುವ ಕಂಡೀಶನ್ ಶುರುವಾಯಿತು. ಓದುತ್ತಾ ಓದುತ್ತಾ ಬೆಳೆದವರಿಗೆ ಹತ್ತಿರವಾಗುತಿದ್ದದು ಸಿನಿಮಾ ಚಿತ್ರಗಳು ಅದರ ಬರಹಗಳು. ಆದರೆ ಅಪ್ರತಿಮ ವಿರೋಧದ ನಡುವೆ ರಾತ್ರೆ ಅರ್ಧ ಗಂಟೆ ಕಾಲ, ಪೇಪರ್ ಓದಿದ ಮಾಹಿತಿಯನ್ನು ಪ್ರಪಂಚದ ಆಗುಹೋಗುಗಳ ಬಗ್ಗೆ ಪ್ರಶ್ನೆಯನ್ನೂ ಅಜ್ಜನಿಂದ ಓದುವ ಪ್ರಮೇಯವೂ ಇತ್ತು.
ಗ್ಯಾಸ್ ಲೈಟ್, ಚಿಮಿಣಿ ಬೆಳಕಿನಲ್ಲೂ ಜತೆಯಾಗಿದ್ದ ಉದಯವಾಣಿ ಈಗ ಐವತ್ತರ ಹೊಸ್ತಿಲಲ್ಲಿ ವರ್ಣಮಯವಾಗಿ ಹೊಸ ರೀತಿಯ ಜಾಜ್ವಲ್ಯಮಾನವಾದ ಬೆಳಕಲ್ಲಿ ಅಷ್ಟೇ ಸುಂದರವಾಗಿ ಈಗಲೂ ಕಂಗೊಳಿಸುತ್ತಾ ಇದೆ. ಇನ್ನಷ್ಟು ಕಾಲ ಬೆಳಗಲಿ. ಅಕ್ಷರ ಪ್ರೇಮ, ಪತ್ರಿಕಾ ವಾಚನ ಆಸ್ಥೆಯನ್ನು ಬೆಳೆಸಲು ಮುನ್ನುಡಿ ಹಾಡಿದ ಉದಯವಾಣಿಗೆ ನಾನಂತೂ ಜೀವನ ಪರ್ಯಂತ ಚಿರ ಋಣಿ. ವೃತ್ತಿಗೋಸ್ಕರ ಬೆಂಗಳೂರಿಗೆ ಹೋದಾಗ, ಬಲುವಾಗಿ ಕಾಡಿದ್ದು ಉದಯವಾಣಿಯೇ ಅಲ್ಲಿ ಬೆಳಗೆ ದೊರಕದ ಊರಿನ ಉದಯವಾಣಿ..ಒಂದು ರೀತಿಯ ಮ್ಲಾನವತೆ ಬೆಳಗೇ ಆವರಿಸಿ ಮಾನಸಿಕ ಖಿನ್ನತೆ ಆವರಿಸುವಷ್ಡು ಕಾಡಿತೆಂದರೆ! ಅಕ್ಷರ ಶಕ್ತಿ ಮತ್ತು ಬಾಲ್ಯದಿಂದಲೂ ಜೊತೆಯಾಗಿ ಮರೆಯಾದ ಶೂನ್ಯಭಾವದ ಮನವರಿಕೆಯಾಯಿತು.
ಬೆಳಗೆ ಮೀನು ತರುವ ಅಂಬಾಸಿಡರ್ ಕಾರಲ್ಲಿ ಐದೂ ಗಂಟೆಗೆ ಊರಿಂದ ಹೊರಡುತಿದ್ದ ಸೋಜರು, ತಲಪಾಡಿಯಿಂದ ಬಸ್ಸಲ್ಲಿ ಪೇಪರನ್ನು ತಂದು ,ನಂತರ ನಮ್ಮೂರಿನ ಏರುತಗ್ಗಿನ , ಮಣ್ಣಿನ ದಾರಿಯೆಲ್ಲೆಲ್ಲ ಕ್ರಮಿಸಿ, ಬೆವರು ಸುರಿಸುತ್ತ ಹಂಚುವ ಚಿತ್ರಣ ಮಸ್ತಕದಲ್ಲಿ ಸುಸ್ಪಷ್ಟ. ಮನೆಯಲ್ಲಿ ಮಜ್ಜಿಗೆ ಹೆಚ್ಚುವರಿ ಉಳಿದಿದ್ದರೆ ದೊಡ್ಡ ಪಾತ್ರೆಯಲ್ಲಿ ಕೊಡುತಿದ್ದೆವು. ಕೆಲವೊಮ್ಮೆ ಅತೀ ಕಷ್ಟ ಬಂದರೆ ಮಾತ್ರ ಸಣ್ಣ ಮಟ್ಟಿನ ಸಾಲ ಪಡೆದು ಮತ್ತೆ ಪತ್ರಿಕೆಯ ದುಡ್ಡೇ ಕೇಳದೆ ನಮಗೂ ಉಚಿತವಾಗಿ ದಕ್ಕುವಂತಾಗುತಿತ್ತು. ಕೊನೆಗೆ ಪ್ರೀತಿಯಲ್ಲಿ ಹೆಚ್ಚುವರಿ ಸಂದಾಯ ಮಾಡಿ ಋಣಭಾರ ತಗ್ಗಿಸುತಿದ್ದೆವು.
ಆದರೆ ಅದೊಂದು ದಿವಸ, ಪೇಪರ್ ಒಂದು ತಪ್ಪಿಹೋಗಿ ಮನೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು. ಆ ದಿವಸವೇ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾದ ಸಮಯ. ಬೆಳಗಿನ ಪತ್ರಿಕೆ ಬರುವ ಸಮಯ ದಾಟಿ, ಅರ್ಧ ಗಂಟೆ ಕಳೆಯುವಾಗ ಅಜ್ಜನ ಕೋಪ ನೆತ್ತಿಗೇರಿದೆ. ಏನು ತಾಪತ್ರಯವೋ ಏನೋ ಗಡಿಬಿಡಿ ಪೇಪರ್ ಸೋಜರಿಗೆ ಗ್ರಹಚಾರಕ್ಕೆ ಸರಿಯಾಗಿ ಅಸಹನೆ ತಾಳಿದ ಅಜ್ಜ. ಪೇಟೆಗೆ ಹೊರಟ ಅಜ್ಜನಿಗೆ ದಾರಿಯಲ್ಲೇ ಸೋಜರು ಸಿಕ್ಕಿದಾಗ ಹೆದರಿ ..ನೀವು ಮನೆಗೆ ಹೋಗಿ ಸಾರ್ ಅರ್ಧ ಗಂಟೆಯೊಳಗೆ ತಲುಪಿಸುತ್ತೇನೆ ಎಂದ ಸೋಜರು , ತಲುಪಿಸಿದರು ಸಹಾ. ಮತ್ತೆ ಗೊತ್ತಾದುದೇನೆಂದರೆ.. ಇನ್ನೊಬ್ಬರ ಮನೆಯಿಂದ ತಂದ ಅವರ ಪೇಪರಿಗೆ ಇಸ್ತ್ರಿ ಹಾಕಿ ನಮ್ಮ ಮನೆಗೆ ತಲುಪಿಸಿ…ಕೊಟ್ಟವರಿಗೆ ಮರಳಿ ಕೊಡಲು ಪುನಃ ಹದಿನೈದು ಕಿ.ಮೀ ಹೋಗಿದ್ದರೆಂದು. ಎಂತಹಾ ಕಾರ್ಯಕ್ಷಮತೆ! ನೆನಪಿಂದ ಮರೆಯಾಗದ ಈ ಘಟನೆ ನಮಗೆ ಮತ್ತಷ್ಟು ಸೋಜರ ಮೇಲೆ ದಯ ಕರುಣಿಸಿದ್ದು ಮಾತ್ರವಲ್ಲದೆ ಉದಯವಾಣಿ ಇಲ್ಲದ ಬದುಕಿನ ಅಸಹನೆ, ಚಡಪಡಿಕೆಯ ದರ್ಶನವೂ ಮಾಡಿಸಿತು.ಮುಗಿಯದ ಕತೆಗಳನ್ನು ಹೊಂದಿರುವ ಉದಯವಾಣಿ ಮತ್ತೆ ಮನೆಯ ಅನ್ಯೋನ್ಯ ಭಾಂಧವ್ಯ ಚಿರನೂತನ. ಎಷ್ಟೆಷ್ಟು ಹೊಸ ಹೊಸ ಪತ್ರಿಕೆಗಳು ಮನೆಹೊಕ್ಕಿದರೂ ಉದಯವಾಣಿ ಯ ಸ್ಥಾನ, ಆದ್ಯತೆ ತಪ್ಪಲೇ ಇಲ್ಲ, ಉದಯವಾಣಿ ಯ ಸಹವರ್ತಿಗಳಾಗಿ ಮತ್ತೊಂದು ಜತೆಯಾಯಿತೇ ವಿನಹ ಪ್ರಥಮ ಅಕ್ಷರ ಪೂಜೆ ವಿನಾಯಕನಂತೇ ಉದಯವಾಣಿಗೆ ಅಂದೂ. ನೂರ್ಕಾಲ ಬದುಕಲಿ ಈ ಪತ್ರಿಕೆ, ಹಳೆ ಓದುಗರ ಹೊಸ ಪೀಳಿಗೆಗೂ ಹತ್ತಿರವಾಗಲೆಂದು ಹಾರೈಸುತ್ತೇನೆ. *ದೇವರಾಜ್ ರಾವ್ ಕೊಡ್ಲಮೊಗರು