ವಿಜ್ಞಾನಿ ಸರ್ ಐಸಾಕ್ ನ್ಯೂಟನ್, ಭೂಮಿ ಗುರುತ್ವಾಕರ್ಷಣಾ ಶಕ್ತಿಯನ್ನು ಹೊಂದಿದೆ ಎಂಬುದನ್ನು ಪತ್ತೆ ಮಾಡಿದರು. ಆ ಸಂಗತಿ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ಮರದ ಮೇಲಿಂದ ಸೇಬಿನಹಣ್ಣು ನೆಲದ ಮೇಲೆ ಬೀಳುವುದನ್ನು ಕಂಡಾಗ ನ್ಯೂಟನ್ನರಿಗೆ ಗುರುತ್ವಾಕರ್ಷಣೆಯ ಜ್ಞಾನೋದಯವಾಗಿದ್ದು ಎಂಬ ದಂತಕಥೆ ಬಹಳ ಜನಪ್ರಿಯವಾದುದು. ಗಾಳಿಯಲ್ಲಿ ಯಾವುದೇ ವಸ್ತುವನ್ನು ಮೇಲಕ್ಕೆಸೆದರೆ ಅದು ಕೆಳಕ್ಕೆ ಬೀಳುತ್ತದೆ. ಆದರೆ, ಕೆಳಕ್ಕೆ ಬೀಳದೆ ಇದ್ದರೆ? ಅದು ಮ್ಯಾಜಿಕ್! ಉದಾಹರಣೆಗೆ ಒಂದು ಉಂಗುರವನ್ನು ದಾರ ಕಟ್ಟಿ ನೇತಾಡಿಸಿ. ಈಗ ದಾರಕ್ಕೆ ಬೆಂಕಿ ಹಚ್ಚಿ. ದಾರ ಸುಟ್ಟು ತುಂಡಾಗಿ ಉಂಗುರ ಕೆಳಗೆ ಬೀಳುತ್ತದೆ. ಉಂಗುರ ಬೀಳುವುದು ಭೂಮಿಯ ಗುರುತ್ವಾಕರ್ಷಣಾ ಬಲದಿಂದ. ಆದರೆ ಜಾದೂಗಾರನ ಬಳಿ ಇರುವ ಉಂಗುರ ಗುರುತ್ವಾಕರ್ಷಣೆಯನ್ನು ಮೀರಿದ್ದು. ಅದನ್ನು ನೇತು ಹಾಕಿದ ದಾರಕ್ಕೆ ಬೆಂಕಿ ಹಚ್ಚಿದರೆ ದಾರವೂ ಉರಿಯುವುದಿಲ್ಲ, ಉಂಗುರವೂ ಕೆಳಗೆ ಬೀಳುವುದಿಲ್ಲ! ಈ ತಂತ್ರವನ್ನು ನಿಮ್ಮ ಕ್ಲಾಸಿನಲ್ಲಿ ಮಾಡಿ ನ್ಯೂಟನ್ನನಿಗೇ ಸವಾಲು ಹಾಕಿ.
ತಂತ್ರದ ರಹಸ್ಯ
ಈ ಮ್ಯಾಜಿಕ್ ಮಾಡುವ ಮುನ್ನ ಪೂರ್ವ ತಯಾರಿ ಅಗತ್ಯ. ಉಂಗುರವನ್ನು ನೇತು ಹಾಕಲು ಬಳಸುವ ದಾರವನ್ನು ಕನಿಷ್ಟ ನಾಲ್ಕೈದು ಬಾರಿಯಾದರೂ ಉಪ್ಪು ನೀರಿನಲ್ಲಿ ಚೆನ್ನಾಗಿ ಅದ್ದಿ, ಒಣಗಿಸಿ ಸಿದ್ಧಪಡಿಸಿಟ್ಟುಕೊಳ್ಳಿ. ಈ ದಾರವನ್ನು ಉಂಗುರಕ್ಕೆ ಕಟ್ಟಿ, ದಾರವನ್ನು ಎತ್ತರದಲ್ಲಿ ಹಿಡಿದು ಉಂಗುರವನ್ನು ಇಳಿಬಿಡಿ. ಈಗ ಉರಿಯುವ ಮೇಣದಬತ್ತಿಯನ್ನು ದಾರಕ್ಕೆ ಸೋಂಕಿಸಿದರೂ ದಾರ ಉರಿಯುವುದಿಲ್ಲ. ಹೀಗಾಗಿ ದಾರ ತುಂಡಾಗಿ ಉಂಗುರ ಕೆಳಗೆ ಬೀಳುವ ಮಾತೇ ಬರುವುದಿಲ್ಲ! ಹೇಗಿದೆ ನಿಮ್ಮ ಹೊಸ ಅನ್ವೇಷಣೆ? ಈ ನ್ಯಾಜಿಕ್ ಮಾಡುವ ಮೊದಲು ಮನೆಯಲ್ಲಿ ಐದಾರು ಬಾರಿ ಅಭ್ಯಾಸ ಮಾಡಿ ನೋಡಿ. ಅಲ್ಲಿ ಯಶಸ್ಸು ಕೂಡಾ ನಂತರವೇ ವೇದಿಕೆಯಲ್ಲಿ ಪ್ರದರ್ಶಿಸಲು ಮುಂದಾಗಿ). ಈ ಮ್ಯಾಜಿಕ್ಕನ್ನು ಸರಿಯಾದ ರೀತಿಯಲ್ಲಿ ಮಾಡಿ ತೋರಿಸಿದರೆ ಸ್ನೇಹಿತರೆಲ್ಲರೂ ನಿಮಗೆ ಶಹಬ್ಟಾಸ್‌ಗಿರಿ ನೀಡುವುದರಲ್ಲಿ ಅನುಮಾನವೇ ಇಲ್ಲ.